

ಬೆಂಗಳೂರು: ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ವೀಕ್ಷಕ ಹುದ್ದೆಯಲ್ಲಿದ್ದು, ಸದ್ಯ ಅನ್ಯ ಸೇವೆಯ ಮೇರೆಗೆ ಶಿವಮೊಗ್ಗ ಜಿಲ್ಲಾ ಕಾರಾಗೃಹದ ಕರ್ತವ್ಯ ನಿರ್ವಹಿಸುತ್ತಿರುವ ಪಿ. ಮಹೇಶ್‌ಬಾಬು ಐದು ವರ್ಷದಿಂದ ಕರ್ತವ್ಯಕ್ಕೆ ಅನಧಿಕೃತವಾಗಿ ಗೈರು ಹಾಜರಾಗಿರುವ ಕಾರಣ ಆತನನ್ನು ಸೇವೆಯಿಂದ ವಜಾಗೊಳಿಸಲಾಗಿದೆ.
ಕರ್ತವ್ಯ ಲೋಪಕ್ಕೆ ಪಿ. ಮಹೇಶ್ ಬಾಬು ವಿರುದ್ಧ 1957ರ ಕೆ.ಸಿ.ಎಸ್ (ಸಿ.ಸಿ ಮತ್ತು ಎ) ನಿಯಮಾವಳಿಗಳ ನಿಯಮ 11ರಡಿಯಲ್ಲಿ ಶಿಸ್ತು ಕ್ರಮಕ್ಕಾಗಿ 2018ರ ಮೇ 10ರಂದು ದೋಷಾರೋಪಣಾ ಪತ್ರವನ್ನು ಜಾರಿಗೊಳಿಸಲಾಗಿತ್ತು. ಬಳಿಕ ದೋಷಾರೋಪಣಾ ಪತ್ರವನ್ನು ಮತ್ತು ವಿಚಾರಣೆಗೆ ಹಾಜರಾಗುವಂತೆ ತಿಳಿಸಿ ಆತನ ತುಮಕೂರಿನ ಮನೆಯ ವಿಳಾಸಕ್ಕೆ ನೋಂದಾಯಿತ ಅಂಚೆ ಮೂಲಕ ಕಳಹಿಸಿಲಾಗಿತ್ತು. ಆದರೆ, ಆ ವಿಳಾಸದಲ್ಲಿ ಲಭ್ಯವಿಲ್ಲ ಎಂಬ ಮಾರುತ್ತರ ಬಂದಿತ್ತು. ನಂತರವೂ ಯಾವುದೇ ಪ್ರತಿಕ್ರಿಯೆ ಉತ್ತರಿಸಿರಲಿಲ್ಲ.
ಹೀಗಾಗಿ ಸತತವಾಗಿ 5 ವರ್ಷ ಸುದೀರ್ಘವಾಗಿ ಕರ್ತವ್ಯಕ್ಕೆ ಅನಧಿಕೃತವಾಗಿ ಗೈರು ಹಾಜರಾದ ಕಾರಣ ಇದೇ ಡಿ.13ರಂದು ಪಿ. ಮಹೇಶ್ ಬಾಬು ಅವರನ್ನು ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕರು ತಿಳಿಸಿದ್ದಾರೆ.