ಸಭೆ ಬರ್ಕಾಸ್ತು ಮಾಡಿ

6kmt1_TP
Published on

ಕುಮಟಾ: ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮಾಸಿಕ ಸಭೆಯ ಮಧ್ಯದಲ್ಲಿ ಆಗಮಿಸಿದ ಶಾಸಕ ದಿನಕರ ಶೆಟ್ಟಿ, ಮೊದಲು ತಾಲೂಕು ಪಂಚಾಯಿತಿಯಿಂದ ಆಗಬೇಕಾದ ಕೆಲಸಗಳನ್ನು ಮಾಡಿಸಿ, ಕೇವಲ ಮೀಟಿಂಗ್ ಮಾಡಿ ಕಾಲಹರಣ ಮಾಡಬೇಡಿ, ಪ್ರಗತಿಯೇ ಇಲ್ಲದ ಮೇಲೆ ಸಭೆ ಯಾಕೆ?, ಇಲ್ಲಿರುವ ಅಧಿಕಾರಿಗಳನ್ನು ಕಳಿಸಿಬಿಡಿ. ಸಭೆ ಬರ್ಕಾಸ್ತು ಮಾಡಿ ಎಂದರು.

ಪಿಆರ್‌ಇಡಿ ಕಾಮಗಾರಿ ಬದಲಾವಣೆ ಹೊನ್ನಾವರದಲ್ಲಿ ಆಗಿದೆ. ಕುಮಟಾದಲ್ಲಿ ಯಾಕೆ ಆಗುತ್ತಿಲ್ಲ. ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮನೆಗಳಿಗೆ ನಂಬರ್ ಕೊಡುತ್ತಿಲ್ಲ ಎಂಬ ದೂರಿದೆ. ಬೇರೆ ತಾಲೂಕುಗಳಲ್ಲಿ ಕೊಡುತ್ತಿದ್ದಾರೆ. ಮೇದಿನಿಗೆ ನಾನೇ ಹಣ ತಂದು ರಸ್ತೆ ಮಾಡಿಸುತ್ತೇನೆ. ನೀವ್ಯಾರೂ ಹೋಗಬೇಕಾಗಿಲ್ಲ ಎಂದು ಇಒ ಹಾಗೂ ಆಡಳಿತಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.

ಒಳ್ಳೆಯದಾದರೆ ನನ್ನ ಹೆಸರು ಬರೋದಿಲ್ಲ, ಕೆಟ್ಟದ್ದಾದರೆ ಮಾತ್ರ ನನ್ನ ಹೆಸರು ಪ್ರಚಾರಕ್ಕೆ ಬರುತ್ತದೆ. ಅಧಿಕಾರಿಗಳಿಗೆ ನೀವು ಸರಿಯಾಗಿ ಮಾರ್ಗದರ್ಶನ ಮಾಡುತ್ತಿಲ್ಲ, ನಿಮ್ಮ ಮೇಲೆ ಹಕ್ಕುಚ್ಯುತಿ ಹಾಕಿಸಿದರೆ ನೀವು ಕಾರವಾರ ಬಿಟ್ಟು ಬೆಂಗಳೂರಿಗೆ ಓಡಾಡಬೇಕಾಗುತ್ತದೆ ಎಂದರು.

ಉತ್ತರಿಸಿದ ಇಒ ರಾಜೇಂದ್ರ ಭಟ್, 80 ಕಾಮಗಾರಿಯಲ್ಲಿ 62ಕ್ಕೆ ಕ್ರಿಯಾಯೋಜನೆ ಆಗಿದೆ. 10 ಕಾಮಗಾರಿ ಮಾತ್ರ ಬದಲಾವಣೆಗೆ ಬಾಕಿ ಇದೆ ಎಂದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಶೆಟ್ಟಿ, ಹೊನ್ನಾವರ ತಾಪಂನಲ್ಲಿ ಎಲ್ಲ ಕೆಲಸಗಳೂ ಆಗುತ್ತವೆ. ಆದರೆ ಕುಮಟಾದಲ್ಲಿ ಆಗಲಿಲ್ಲ ಎಂಬ ಕಾರಣಕ್ಕ ತುಂಬಾ ಬೇಸರದಿಂದ ಬಂದಿದ್ದೇನೆ. ವಿಧಾನಸೌಧ, ಐಟಿಐ, ವಸತಿ ಶಾಲೆ, ಪಿಯು- ಡಿಗ್ರಿ ಕಾಲೇಜುಗಳು, ರಸ್ತೆ, ಸೇತುವೆ, ಕುಡಿಯುವ ನೀರು ಸೇರಿದಂತೆ ಆಭಿವೃದ್ಧಿಯ ಕೆಲಸಗಳು ಬೇಕಾದಷ್ಟಾಗಿದೆ. ನಿರಂತರ ಅಭಿವೃದ್ಧಿಯಾಗಬೇಕು ಎನ್ನುವುದು ನನ್ನ ಇಚ್ಛೆ. ಆದರೆ, ಅದಕ್ಕೆ ವ್ಯತಿರಿಕ್ತವಾಗಿ ಕೆಲವು ನಡೆಯುತ್ತಿವೆ. ನಮ್ಮ ಪಕ್ಷ ಅಧಿಕಾರದಲ್ಲಿಲ್ಲ ಎಂಬ ಕಾರಣಕ್ಕೋ ಅಥವಾ ಏಕೆ ಎಂಬುದು ತಿಳಿಯುತ್ತಿಲ್ಲ. ಹೀಗಾಗಿ ಅಧಿಕಾರಿಗಳಿಗೆ ಚುರುಕು ಮುಟ್ಟಿಸುವ ಉದ್ದೇಶದಿಂದ ಸಭೆಗೆ ಬಂದಿದ್ದೇನೆ. ತಾಪಂಗೆ 2 ಕೋಟಿ ರೂ. ಬಂದಿತ್ತು. ಸರ್ಕಾರದಿಂದ ಹಿಂದೆಯೇ ಮಂಜೂರಿಯಾದ ಕೆಲಸಗಳಿಗೆ ಏಜೆನ್ಸಿ ನೇಮಿಸಿ ಕಾಮಗಾರಿ ಮಾಡಬೇಕಾಗಿತ್ತು. ಮಾಡಲಿಲ್ಲ ಎಂಬ ಕಾರಣಕ್ಕೆ ಬಂದಿದ್ದೇನೆ. ಇನ್ನೆರಡು ತಿಂಗಳಲ್ಲಿ ಮಾರ್ಚ್ ಬಂತು. ಕಾಮಗಾರಿ ಮುಗಿಸದಿದ್ದರೆ ಹಣ ಲ್ಯಾಪ್ಸ್ ಆಗುತ್ತದೆ. ಯಾವ ಇಲಾಖೆಯಲ್ಲೂ ಸಾಕಷ್ಟು ಅಧಿಕಾರಿಗಳೇ ಇಲ್ಲ. ಎಲ್ಲೆಡೆ ಪ್ರಭಾರಿಗಳೇ ತುಂಬಿದ್ದಾರೆ. ಹೊನ್ನಾವರದಂತಹ ಪಟ್ಟಣಕ್ಕೆ ಪೊಲೀಸ್ ಇನ್ಸ್ಸ್‌ಪೆಕ್ಟರ್ ಇಲ್ಲದೆ 6-7 ತಿಂಗಳಾಯಿತು. ಎಲ್ಲ ಇಲಾಖೆಗಳ ಸ್ಥಿತಿ ಹೀಗಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net