ಕರ್ನಾಟಕ ಬಂದ್‌ಗೆ ನೀರಸ ಪ್ರತಿಕ್ರಿಯೆ: ನಗರದಲ್ಲಿ ಪ್ರತಿಭಟನಾ ಮೆರವಣಿಗೆ, ಬೈಕ್ ರ‌್ಯಾಲಿ

Dismal response to Karnataka bandh Mandya
Published on

ಮಂಡ್ಯ: ರಾಜ್ಯದಲ್ಲಿ ಎಂಇಎಸ್ ಸಂಘಟನೆ ನಿಷೇಧ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಕರೆ ನೀಡಿದ್ದ ಅಖಿಲ ಕರ್ನಾಟಕ ಬಂದ್‌ಗೆ ನಗರದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.

ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಮಾಜಿ ಎಂಎಲ್‌ಸಿ ಕೆ.ಟಿ.ಶ್ರೀಕಂಠೇಗೌಡ, ರೈತ ನಾಯಕಿ ಸುನಂದಾ ಜಯರಾಂ, ಕನ್ನಡಸೇನೆ ಜಿಲ್ಲಾಧ್ಯಕ್ಷ ಎಚ್.ಸಿ.ಮಂಜುನಾಥ್, ಜಯ ಕರ್ನಾಟಕ ಸಂಘಟನೆಯ ಯೋಗಣ್ಣ, ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಎಚ್.ಡಿ.ಜಯರಾಂ, ರೈತಪರ ಹೋರಾಟಗಾರರ ಸಂಘದ ಸಂಸ್ಥಾಪಕ ಎಚ್.ಎಸ್.ಚಂದ್ರಶೇಖರ್ ಸೇರಿದಂತೆ ಹಲವು ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಜಮಾಯಿಸಿ, ರಾಜ್ಯ ರಸ್ತೆ ಸಾರಿಗೆ ಬಸ್‌ಗಳನ್ನು ತಡೆದು ಪ್ರತಿಭಟಿಸಿದರು. ಈ ವೇಳೆ ಎಚ್.ಎಸ್. ಚಂದ್ರಶೇಖರ್ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಮಲಗಿ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿದರು.

ಜೆ.ಸಿ.ವೃತ್ತದಿಂದ ನಗರದ ಹೊಳಲು ವೃತ್ತ, ಪೇಟೆ ಬೀದಿ, ವಿ.ವಿ ರಸ್ತೆಗಳಲ್ಲಿ ಬೈಕ್ ರ‌್ಯಾಲಿ ನಡೆಸಿದ ಕನ್ನಡಪರ ಹೋರಾಟಗಾರರು, ತೆರೆದಿದ್ದ ಅಂಗಡಿಗಳನ್ನು ಮುಚ್ಚಿಸಿದರು. ಬೆಳಗಾವಿಯಲ್ಲಿ ಎಂಇಎಸ್ ಸಂಘಟನೆಯವರು ಪದೇ ಪದೇ ಕನ್ನಡಿಗರ ಮೇಲೆ ಹಲ್ಲೆ ಮಾಡುತ್ತಿದ್ದು, ರಾಜ್ಯದಲ್ಲಿ ಎಂಇಎಸ್ ಸಂಘಟನೆ ನಿಷೇಧಿಸಬೇಕು. ಬೆಂಗಳೂರಿಗೆ ಕುಡಿಯುವ ನೀರಿನ ಹೆಸರಿನಲ್ಲಿ 6ನೇ ಹಂತದ ಯೋಜನೆ ಮೂಲಕ ಒಂದು ಬೆಳೆಯ ನೀರನ್ನು ನೀಡಿ ರೈತರನ್ನು ಬೀದಿಗೆ ತಳ್ಳುವುದು ಸರಿಯಲ್ಲ. ಆದ್ದರಿಂದ ಈ ಯೋಜನೆ ಕೈ ಬಿಡಬೇಕು. ಮೇಕೆದಾಟು ಯೋಜನೆ ಪ್ರಾರಂಭ, ಮಹಾದಾಯಿ, ಕಳಸ ಬಂಡೂರಿ ಯೋಜನೆಯನ್ನು ಶೀಘ್ರ ಕೈಗೆತ್ತಿಕೊಳ್ಳಬೇಕು. ಡಾ.ಸರೋಜಿನಿ ಮಹಿಷಿ ವರದಿಯನ್ನು ಜಾರಿಗೆ ತರಬೇಕೆಂದು ಆಗ್ರಹಿಸಿದರು.

ಬಂದ್‌ಗೆ ಹಲವು ಸಂಘಟನೆಗಳು ಕರೆ ನೀಡಿದ್ದವಾದರೂ ಪೇಟೆಬೀದಿ ಹೊರತುಪಡಿಸಿ ಉಳಿದ ಕಡೆಗಳಲ್ಲಿ ಉತ್ತಮ ಸ್ಪಂದನೆ ಕಂಡುಬರಲಿಲ್ಲ. ಬೆಳಗ್ಗೆ 10 ಗಂಟೆಯ ನಂತರ ಎಂದಿನಂತೆ ಎಲ್ಲ ಅಂಗಡಿಗಳ ಮಾಲೀಕರು ವ್ಯಾಪಾರ ವಹಿವಾಟಿನಲ್ಲಿ ತೊಡಗಿದ್ದರು. ಸಾರಿಗೆ ಬಸ್ ಸಂಚಾರ ಸೇರಿದಂತೆ ಎಲ್ಲ ರೀತಿಯ ವಾಹನಗಳ ಓಡಾಟ ಎಂದಿನಂತಿತ್ತು. ನಾಲ್ಕನೇ ಶನಿವಾರವಾಗಿರುವ ಕಾರಣ ಸರ್ಕಾರಿ ಕಚೇರಿಗಳು ತೆರೆದಿರಲಿಲ್ಲ.

Dismal response to Karnataka bandh Mandya

ಜಾಥಾಕ್ಕೆ ಮೀಸಲಾದ ಬಂದ್: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಕರೆ ನೀಡಿದ್ದ ಕರ್ನಾಟಕ ಬಂದ್ ಬೈಕ್ ಜಾಥಾ ಹಾಗೂ ಪ್ರತಿಭಟನೆಗೆ ಮೀಸಲಿದ್ದಂತೆ ನಗರದಲ್ಲಿ ಕಂಡುಬಂತು. ಕರ್ನಾಟಕದಲ್ಲಿ ಪರಭಾಷೆ ದಬ್ಬಾಳಿಕೆ ನಿಲ್ಲಿಸಬೇಕು. ಕನ್ನಡಿಗರಿಗೆ ಉದ್ಯೋಗ ಕಲ್ಪಿಸಬೇಕು. ಇಡೀ ರಾಜ್ಯದ ಗಡಿನಾಡುಗಳ ಬೆಳವಣಿಗೆಯಾಗಬೇಕು ಎಂದು ಒತ್ತಾಯಿಸಲಾಯಿತು.

ನಗರದ ಜೆ.ಸಿ.ವೃತ್ತದಲ್ಲಿ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಬೆಂಗಳೂರಿನಿಂದ ವಿರಾಜಪೇಟೆಗೆ ತೆರಳುತ್ತಿದ್ದ ಸಾರಿಗೆ ಬಸ್ ತಡೆದು ಪ್ರತಿಭಟಿಸುತ್ತಿದ್ದ ವೇಳೆ ಚಾಲಕ ಹಾಗೂ ನಿರ್ವಾಹಕ ರಸ್ತೆಯಲ್ಲಿಯೇ ಬಸ್ ನಿಲ್ಲಿಸಿ ಪ್ರತಿಭಟನೆಯಲ್ಲಿ ಭಾಗವಹಿಸಿದರು. ನಮ್ಮ ಪರವಾಗಿ ಕನ್ನಡಪರ ಸಂಘಟನೆಗಳು ಬಂದ್ ಮಾಡುತ್ತಿವೆ. ಮಹಾರಾಷ್ಟ್ರದ ಕಡೆ ಹೋದಾಗ ನಮ್ಮ ಮೇಲೂ ಹಲ್ಲೆ ಆಗಬಹುದು. ಅಲ್ಲಿನ ಪೊಲೀಸರು ಎಂಇಎಸ್ ಗೂಂಡಾಗಳಿಗೆ ಬೆಂಬಲವಾಗಿದ್ದಾರೆ. ನಮ್ಮ ಪರ ಹೋರಾಟ ಮಾಡುತ್ತಿರುವವರಿಗೆ ಕೃತಜ್ಞತೆಗಳು ಎಂದರು.

ಬಂದ್ ಹಿನ್ನೆಲೆಯಲ್ಲಿ ಡಿವೈಎಸ್‌ಪಿ ನೇತೃತ್ವದಲ್ಲಿ 6 ಇನ್‌ಸ್ಪೆಕ್ಟರ್, 10 ಪಿಎಸ್‌ಐ, 150 ಸಿಬ್ಬಂದಿ ಹಾಗೂ 2 ಕೆಎಸ್‌ಆರ್‌ಪಿ, 8 ಡಿಎಆರ್ ನಿಯೋಜನೆ ಮಾಡಲಾಗಿತ್ತು. ಮಾತ್ರವಲ್ಲದೆ ಯಾರೂ ಬಲವಂತವಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಬಾರದೆಂದು ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಸೂಚನೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net