ಕರ್ನಾಟಕ ಬಂದ್​ಗೆ ಅಣ್ಣಿಗೇರಿಯಲ್ಲಿ ನೀರಸ ಪ್ರತಿಕ್ರಿಯೆ

30ANG1 HORAT
Published on

ಅಣ್ಣಿಗೇರಿ: ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡುಗಡೆ ಕುರಿತು ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನಿಂದ ರಾಜ್ಯಕ್ಕೆ ತುಂಬಾ ಅನ್ಯಾಯವಾಗಿದೆ ಎಂದು ಆರೋಪಿಸಿ ಶುಕ್ರವಾರ ನೀಡಿದ್ದ ಕರ್ನಾಟಕ ಬಂದ್​ಗೆ ಪಟ್ಟಣದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.

ಸ್ಥಳೀಯ ಪಕ್ಷಾತೀತ ರೈತ ಹೋರಾಟ ಸಮಿತಿ ಪದಾಧಿಕಾರಿಗಳು ಹಾಗೂ ವಿವಿಧ ದಲಿತಪರ ಸಂಘಟನೆಗಳ ಮುಖಂಡರು ಪಟ್ಟಣದಲ್ಲಿ ಕೆಲಕಾಲ ರಸ್ತೆ ಸಂಚಾರ ಬಂದ್ ಮಾಡಿ ಪ್ರತಿಭಟನೆ ನಡೆಸಲಾಯಿತು.

ರೈತ ಮುಖಂಡ ಭಗವಂತಪ್ಪ ಪಟ್ಟಣ್ಣವರ ಮಾತನಾಡಿ, ರಾಜ್ಯದಲ್ಲಿ ಈಗಾಗಲೇ ಮಳೆ, ಬೆಳೆ ಸರಿಯಾಗಿ ಬಾರದೇ ರೈತರು ಕಂಗಾಲಾಗಿದ್ದಾರೆ. ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಈ ಬಾರಿ ರೈತ ಸಾಕಷ್ಟು ನಷ್ಟ ಅನುಭವಿಸುವಂತಾಗಿದೆ. ಆದ್ದರಿಂದ ಸರ್ಕಾರ ಕೂಡಲೇ ಎಚ್ಚೆತ್ತು ಮುಂಗಾರು ಬೆಳೆ ವಿಮೆ ಪರಿಹಾರದ ಮೊತ್ತವನ್ನು ತಕ್ಷಣವೇ ರೈತರ ಖಾತೆಗಳಿಗೆ ಜಮಾ ಮಾಡಬೇಕು ಎಂದು ಆಗ್ರಹಿಸಿದರು.

ಬಿಜೆಪಿ ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ಷಣ್ಮುಖ ಗುರಿಕಾರ ಮಾತನಾಡಿ, ರಾಜ್ಯ ಸರ್ಕಾರ ಕೂಡಲೇ ಅಣ್ಣಿಗೇರಿ ತಾಲೂಕನ್ನು ಬರಪೀಡಿತ ತಾಲೂಕು ಪಟ್ಟಿಗೆ ಸೇರ್ಪಡೆ ಮಾಡಬೇಕು. ಮುಂಗಾರು ಹಂಗಾಮಿನ ಬೆಳೆ ಪರಿಹಾರ, ಬೆಳೆ ವಿಮೆ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

ಪ್ರತಿಭಟನಾ ಸ್ಥಳಕ್ಕೆ ತಹಸೀಲ್ದಾರ್ ಕಚೇರಿ ಶಿರಸ್ತೇದಾರ್ ರಿಯಾಜಅಹ್ಮದ್ ಕುನ್ನಿಬಾವಿ ಭೇಟಿ ನೀಡಿ, ರೈತರ ವಿವಿಧ ಬೇಡಿಕೆಗಳ ಮನವಿಯನ್ನು ಸ್ವೀಕರಿಸಿ ಸರ್ಕಾರಕ್ಕೆ ಮನವಿಯನ್ನು ರವಾನಿಸಲಾಗುವುದು ಎಂದು ತಿಳಿಸಿದರು.

ರೈತ ಮುಖಂಡರಾದ ಶಿವಶಂಕರ ಕಲ್ಲೂರ, ಜಯದೇವ ಹೂಗಾರ, ಗುರುಸಿದ್ದಪ್ಪ ಕೊಪ್ಪದ, ಶೇಖಣ್ಣ ಸೊಟಕನಾಳ, ರಾಜು ಯಣ್ಣಿ, ಬಂಡೆಪ್ಪ ಹಳ್ಳಿ, ಯಲ್ಲಪ್ಪ ಮರಬಸಿ, ಎ.ಪಿ. ಗುರಿಕಾರ, ಭರತೇಶ ಜೈನ, ರಾಘವೇಂದ್ರ ರಾಮಗಿರಿ, ಧರ್ಮರಾಜ ಹರಣಶಿಕಾರಿ, ವಡಕಪ್ಪ ಯಳವತ್ತಿ, ಶಂಕ್ರು ಇಂಗಳಹಳ್ಳಿ, ಈಶಣ್ಣ ಹೊಂಬಳ, ನಿಂಗಪ್ಪ ದಳವಾಯಿ, ಯಲ್ಲಪ್ಪ ಸುಂಕದ, ಫಕೀರಪ್ಪ ಮಾಯಣ್ಣವರ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net