ಕರ್ನಾಟಕ ಬಂದ್‌ಗೆ ನೀರಸ ಪ್ರತಿಕ್ರಿಯೆ

29 vikram 1
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಕಾವೇರಿ ಜಲಾಶಯದಿಂದ ತಮಿಳುನಾಡಿಗೆ ನೀರು ಬಿಡುವುದನ್ನು ವಿರೋಧಿಸಿ ಶುಕ್ರವಾರ ನೀಡಿದ್ದ ಕರ್ನಾಟಕ ಬಂದ್‌ಗೆ ನಗರದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಬಂದ್ ಕೇವಲ ಪ್ರತಿಭಟನೆ ಸೀಮಿತವಾಗಿತ್ತು. ಕೆಲ ಕಡೆಗಳಲ್ಲಿ ಮಾತ್ರ ಸ್ವಯಂ ಪ್ರೇರಿತರಾಗಿ ಅಂಗಡಿಗಳನ್ನು ಮುಚ್ಚಲಾಗಿತ್ತು. ಉಳಿದಂತೆ ಬಹುತೇಕ ಅಂಗಡಿಗಳು, ಹೋಟೆಲ್‌ಗಳು ಎಂದಿನಂತ ವ್ಯಾಪಾರ ವಹಿವಾಟು ನಡೆಸಿದರೆ, ಸಾರಿಗೆ ಸಂಚಾರ, ಸರ್ಕಾರಿ ಕಚೇರಿ, ಶಾಲೆ-ಕಾಲೇಜುಗಳು ದಿನದಂತೆ ಕಾರ್ಯ ನಿರ್ವಹಿದವು.
ಜುಬಿಲಿ ವೃತ್ತದಲ್ಲಿ ಪ್ರತಿಭಟನಾಕಾರರಿಗೆ ರಸ್ತೆ ತಡೆ ನಡೆಸದಂತೆ ಪೊಲೀಸರು ಸೂಚಿಸಿದ್ದರು. ಆದಾಗ್ಯೂ ಕೆಲ ಹೊತ್ತು ರಸ್ತೆಗೆ ಅಡ್ಡಲಾಗಿ ಕುಳಿತು ಸಂಚಾರ ಬಂದ್ ಮಾಡಿದ್ದರಿಂದ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ರಸ್ತೆ ತಡೆ ಕೈ ಬಿಡುವಂತೆ ಪೊಲೀಸರು ಮನವಿ ಮಾಡಿದರೂ ಕೈ ಬಿಡದ ಕಾರಣ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ಬಳಿಕ ಬಿಡುಗಡೆ ಮಾಡಿದರು.
ಮಹಾದಾಯಿಗಾಗಿ ಮಹಾವೇದಿಕೆ, ಕರ್ನಾಟಕ ರೈತ ಸೇನೆ, ಧಾರವಾಡ ನಾಗರಿಕ ಹಿತರಕ್ಷಣಾ ಸಮಿತಿ, ರೈತ ಸಂಘಟನೆಗಳು ಸೇರಿ ವಿವಿಧ ಸಂಘಟನೆಗಳು ಕರ್ನಾಟಕ ಬಂದ್‌ಗೆ ಬೆಂಬಲ ಸೂಚಿಸಿದ್ದರು. ಧಾರವಾಡ ವಾಣಿಜ್ಯೋದ್ಯಮ ಸಂಘ, ಕರ್ನಾಟಕ ವಿದ್ಯಾವರ್ಧಕ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿಪತ್ರ ರವಾನಿಸಿದರು.
ರಕ್ತದಲ್ಲಿ ಪತ್ರ: ಜಯ ಕರ್ನಾಟಕ ಸಂಘಟನೆ ಪದಾಧಿಕಾರಿಗಳು ಜುಬಿಲಿ ವೃತ್ತದಲ್ಲಿ ಉರುಳು ಸೇವೆ ನಡೆಸಿದರಲ್ಲದೆ, ರಕ್ತದಲ್ಲಿ ಕಾವೇರಿ ನಮ್ಮದು ಎಂಬ ನಾಮಫಲಕ ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net