ಎಚ್‌ಎಸ್‌ಆರ್‌ಪಿಗೆ ಮೈಸೂರಿನಲ್ಲಿ ನೀರಸ ಪ್ರತಿಕ್ರಿಯೆ

mysore
Published on

ಮಂಜುನಾಥ ತಿಮ್ಮಯ್ಯ ಮೈಸೂರು

ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕ (ಎಚ್‌ಎಸ್‌ಆರ್‌ಪಿ) ಅಳವಡಿಕೆ ಪ್ರಕ್ರಿಯೆಗೆ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ಮುಂದುವರಿದಿದೆ. 2 ಸಲ ಗಡುವು ವಿಸ್ತರಣೆ ಮಾಡಿದರೂ ನೂರರಷ್ಟು ಗುರಿ ಸಾಧನೆ ಸದ್ಯಕ್ಕೆ ಗಗನ ಕುಸುಮವಾಗಿದೆ.

ಎಚ್‌ಎಸ್‌ಆರ್‌ಪಿ ಅಳವಡಿಸಲು ಹಳೇ ವಾಹನಗಳ ಮಾಲೀಕರು ಉತ್ಸಾಹ ತೋರುತ್ತಿಲ್ಲ. ಇದರ ಫಲವಾಗಿ ಈವರೆಗೆ ಎಚ್‌ಎಸ್‌ಆರ್‌ಪಿ ಅಳವಡಿಸಿಕೊಂಡ ವಾಹನಗಳ ಸಂಖ್ಯೆ ಶೇ.25ರಷ್ಟು ತಲುಪಿಲ್ಲ. ಹೀಗಾದರೆ, ಗುರಿ ಸಾಧನೆ ಯಾವಾಗ ಎಂಬ ಪ್ರಶ್ನೆ ಮೂಡಿದೆ.

2019ಕ್ಕಿಂತ ಹಳೇ ವಾಹನಗಳ ಸಂಖ್ಯೆ ಜಿಲ್ಲೆಯಲ್ಲಿ ಅಂದಾಜು 4.76 ಲಕ್ಷದಷ್ಟಿದೆ. ಇದರಲ್ಲಿ ಇನ್ನೂ ಶೇ.75ರಷ್ಟು ವಾಹನಗಳು ಹೈ-ಸೆಕ್ಯುರಿಟಿ ರಿಜಿಸ್ಟ್ರೆಷನ್ ಪ್ಲೇಟ್ ಜೋಡಿಸಿಕೊಂಡಿಲ್ಲ.

ನಕಲಿ ಸಂಖ್ಯೆಯ ನೋಂದಣಿ ಫಲಕಗಳ ಹಾವಳಿ ತಪ್ಪಿಸಲು ಕೇಂದ್ರ ಸರ್ಕಾರ 2019ರಲ್ಲಿ ಎಚ್‌ಎಸ್‌ಆರ್‌ಪಿಯನ್ನು ಅನುಷ್ಠಾನಕ್ಕೆ ತಂದಿತು. ಇದರ ಫಲವಾಗಿ 2019ರ ಏಪ್ರಿಲ್ 1ರ ನಂತರದ ವಾಹನಗಳಿಗೆ ಈಗಾಗಲೇ ಅಳವಡಿಕೆ ಮಾಡಲಾಗಿದೆ. ಅದಕ್ಕಿಂತ ಹಿಂದಿನ ವಾಹನಗಳು ಅಳವಡಿಸಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ಆಯಾ ರಾಜ್ಯ ಸರ್ಕಾರಗಳು ಕ್ರಮ ತೆಗೆದುಕೊಳ್ಳುವಂತೆ ಕೇಂದ್ರ ಸರ್ಕಾರ ನಿರ್ದೇಶನ ನೀಡಿತ್ತು.

ಈ ಹಿನ್ನೆಲೆಯಲ್ಲಿ 2023ರ ನವೆಂಬರ್ 17ರೊಳಗೆ ಹಳೇ ವಾಹನಗಳು ಎಚ್‌ಎಸ್‌ಆರ್‌ಪಿ ಅಳವಡಿಸಿಕೊಳ್ಳುವಂತೆ ರಾಜ್ಯ ಸಾರಿಗೆ ಇಲಾಖೆ ಕಳೆದ ವರ್ಷ 2023ರ ಆಗಸ್ಟ್‌ನಲ್ಲಿ ಅಧಿಸೂಚನೆ ಹೊರಡಿಸಿತ್ತು. ಆದರೆ, ಅಳವಡಿಸುವ ಅವಕಾಶವನ್ನು ಕೆಲವೇ ಏಜೆನ್ಸಿಗಳಿಗೆ ನೀಡಿರುವ ಕ್ರಮವನ್ನು ಪ್ರಶ್ನಿಸಿ ಕೆಲವರು ಕೋರ್ಟ್ ಮೊರೆ ಹೋಗಿದ್ದರು.

ಈ ನಂಬರ್ ಪ್ಲೇಟ್ ಅಳವಡಿಕೆ ಕುರಿತು ಮೊದಲಿನಿಂದಲೂ ವಾಹನ ಮಾಲೀಕರಿಂದ ನಿರಾಸಕ್ತಿ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಫೆ.17ರ ವರೆಗೆ 3 ತಿಂಗಳು ಅವಧಿ ವಿಸ್ತರಣೆ ಮಾಡಲಾಗಿತ್ತು. ಆಗ ಶೇ.7ರಷ್ಟು ವಾಹನಗಳಿಗೆ ಹೊಸ ಫಲಕಗಳ ಅಳವಡಿಕೆ ಮಾಡಲಾಯಿತು. ಈ ಅವಧಿ ವಿಸ್ತರಿಸಲು ಮತ್ತೆ ರಾಜ್ಯ ಸರ್ಕಾರ ಕ್ರಮ ಕೈಗೊಂಡಿದ್ದರಿಂದ ಮೇ 31ರ ವರೆಗೆ ಅವಕಾಶ ನೀಡಲಾಯಿತು. ಇದೀಗ ಜೂನ್ 12ರ ವರೆಗೂ ಅವಧಿ ವಿಸ್ತರಣೆಯಾಗಿದೆ. ಈ ಗಡುವು ಪೂರ್ಣಗೊಳ್ಳಲು ಕೇವಲ 13 ದಿನಗಳು ಮಾತ್ರ ಬಾಕಿ ಉಳಿದಿದೆ. ಈ ಅವಧಿಯಲ್ಲಿ ಶೇ.50ರಷ್ಟು ಗುರಿ ಸಾಧನೆ ಸಹ ಕಷ್ಟಕರವಾಗಿದೆ.

ನಿಯಮ ಪ್ರಕಾರ ಅವಧಿ ಒಳಗೆ ಅಳವಡಿಸಿಕೊಳ್ಳದೆ ಇದ್ದರೆ ದಂಡ ವಿಧಿಸುವ ಪ್ರಕ್ರಿಯೆ ಶುರುವಾಗಲಿದೆ. ಮೊದಲ ಬಾರಿ 500 ರೂ.ದಂಡ ವಿಧಿಸಲಾಗುತ್ತದೆ. 2ನೇ ಬಾರಿಗೆ 1,000 ರೂ. ದಂಡ ಕಟ್ಟಬೇಕಾಗುತ್ತದೆ. ಮುಂದೆ ಸಿಕ್ಕಿಬೀಳುವ ಪ್ರತಿ ಬಾರಿಗೆ 1,000 ರೂ. ದಂಡ ತೆರಬೇಕಾಗುತ್ತದೆ. ಅನಗತ್ಯವಾಗಿ ದಂಡ ಕಟ್ಟುವುದನ್ನು ತಪ್ಪಿಸಲು ನಿಗದಿತ ಅವಧಿಯೊಳಗೆ ಹೊಸ ಫಲಕ ಅಳವಡಿಸಿಕೊಳ್ಳಬೇಕು. ಅಲ್ಲದೆ, ನೋಂದಣಿ ಮಾಡಿಕೊಂಡವರಿಗೆ ಅಲ್ಲಿಂದ ಒಂದು ತಿಂಗಳು ಯಾವುದೇ ದಂಡ ವಿಧಿಸುವುದಿಲ್ಲ. ಅದರ ಒಳಗೆ ಫಲಕ ಅಳವಡಿಸಿಕೊಳ್ಳಬೇಕು ಎಂದು ಸಾರಿಗೆ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವ್ಯವಸ್ಥೆ ಸರಳೀಕರಣಗೊಳಿಸಿ:


ಎಚ್‌ಎಸ್‌ಆರ್‌ಪಿ ಅಳವಡಿಸುವ ಜವಾಬ್ದಾರಿಯನ್ನು ಕೆಲವರಿಗಷ್ಟೇ ನೀಡಲಾಗಿದೆ. ವಾಹನ ತಯಾರಕರನ್ನು ಆಯ್ಕೆ ಮಾಡಿಕೊಂಡು, ಅವರ ಶೋ ರೂಂಗೆ ನೋಂದಾಯಿತರು ಹೋಗಬೇಕಿದೆ. ಇದುವೇ ಎಚ್‌ಎಸ್‌ಆರ್‌ಪಿ ಅಳವಡಿಕೆ ಪ್ರಕ್ರಿಯೆ ನಿಧಾನಗತಿಗೆ ಮತ್ತು ವಿಳಂಬಕ್ಕೆ ಕಾರಣವಾಗಿದೆ. ಅದರ ಬದಲು ಈ ವ್ಯವಸ್ಥೆ ಸರಳೀಕರಣಗೊಳಿಸಿ ಎಲ್ಲೆಡೆ ಸುಲಭವಾಗಿ ಅಳವಡಿಕೆಗೆ ಅವಕಾಶ ಕಲ್ಪಿಸಿಕೊಡಬೇಕು.

ಈಗಿರುವ ಆನ್‌ಲೈನ್ ಬದಲಿಗೆ ಆಫ್‌ಲೈನ್‌ನಲ್ಲೂ ನಿರ್ದಿಷ್ಟ ಕೇಂದ್ರಗಳಲ್ಲಿ ನೋಂದಣಿಗೆ ಕ್ರಮ ವಹಿಸಬೇಕು. ಈ ಕುರಿತು ವಾಹನ ಮಾಲೀಕರಿಗೆ ವ್ಯಾಪಕವಾಗಿ ಜಾಗೃತಿ ಮೂಡಿಸಬೇಕು. ಆದರೆ, ಆರ್‌ಟಿಒಗಳಿಂದ ಈ ಕೆಲಸವಾಗುತ್ತಿಲ್ಲ. ಹೀಗಾಗಿ, ಇನ್ನೂ 10 ಸಲ ಗಡುವು ವಿಸ್ತರಣೆ ಮಾಡಿದರೂ ನೂರರಷ್ಟು ಪ್ರಗತಿ ಸಾಧ್ಯವಿಲ್ಲ ಎಂಬುದು ವಾಹನ ಮಾಲೀಕರ ಅಭಿಪ್ರಾಯವಾಗಿದೆ.


ಜೂನ್ 12ರವರೆಗೂ ಎಚ್‌ಎಸ್‌ಆರ್‌ಪಿ ಅಳವಡಿಕೆಗೆ ಅವಕಾಶ ಇದೆ. ಗಡುವು ಸಮೀಪವಾಗಿದ್ದರೂ ಬಹಳಷ್ಟು ವಾಹನಗಳಿಗೆ ಇನ್ನೂ ಅಳವಡಿಕೆ ಮಾಡಿಲ್ಲ. ಹೀಗಾಗಿ, ಬಹಳಷ್ಟು ಬಾಕಿ ಉಳಿದಿವೆ. ಅವಧಿ ವಿಸ್ತರಣೆ ಕುರಿತು ಇಲಾಖಾ ಹಂತದಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದು ಮೈಸೂರಿನ ಆರ್‌ಟಿಒ(ಪಶ್ಚಿಮ) ದೇವಿಕಾ ತಿಳಿಸಿದ್ದಾರೆ.

ತಿಂಗಳುಗಟ್ಟಲೇ ಕಾಯುವಿಕೆ:


ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆಗೆ ಕೆಲ ವಾಹನ ಮಾಲೀಕರು ಆಸಕ್ತಿ ತೋರುತ್ತಿದ್ದಾರೆ. ಆನ್‌ಲೈನ್ ಬುಕ್ಕಿಂಗ್ ಮಾಡಿದ ಬಳಿಕವೂ ಅವರು ಒಂದು ತಿಂಗಳು ಕಾಯಬೇಕಿದೆ. ಅವರಿಗೆ ಬೇಕಾದ ದಿನಕ್ಕೆ ಬುಕ್ಕಿಂಗ್ ದೊರೆಯುತ್ತಿಲ್ಲ. ವೆಬ್‌ಸೈಟ್‌ನಲ್ಲಿ ತೋರಿಸುವ ದಿನವೇ ನಾವು ಹೋಗಬೇಕಿದೆ. ಹಣ ನೀಡಿ ತಿಂಗಳಗಟ್ಟಲೇ ಕಾಯಬೇಕಾಗಿದೆ. ಆಫ್‌ಲೈನ್ ಮೂಲಕ ನಿರ್ದಿಷ್ಟ ಕೇಂದ್ರದಲ್ಲಿ ನೋಂದಣಿಗೂ ಕ್ರಮ ವಹಿಸಬೇಕು ಎಂಬುದು ವಾಹನ ಮಾಲೀಕರ ಆಗ್ರಹವಾಗಿದೆ.

ಎಚ್‌ಎಸ್‌ಆರ್‌ಪಿ ಪಡೆಯುವುದು ಹೇಗೆ?


*ಅಧಿಕೃತ ವೆಬ್‌ಸೈಟ್ www.siam.in ಭೇಟಿ ನೀಡಬೇಕು.
*ನಂಬರ್ ಪ್ಲೇಟ್ ಪಡೆಯುವ ವಾಹನ ತಯಾರಕರನ್ನು ಆಯ್ಕೆ ಮಾಡಿ ಮತ್ತು ನಿಮ್ಮ ವಾಹನದ ವಿವರವನ್ನು ಭರ್ತಿ ಮಾಡಬೇಕು.

ಎಚ್‌ಎಸ್‌ಆರ್‌ಪಿ ಜೋಡಣೆಗಾಗಿ ನಿಮ್ಮ ಅನುಕೂಲಕ್ಕೆ ತಕ್ಕಂತೆ ಡೀಲರ್ ಸ್ಥಳವನ್ನು ಆಯ್ಕೆ ಮಾಡಿ ಮತ್ತು ಆನ್‌ಲೈನ್‌ನಲ್ಲಿ ಎಚ್‌ಎಸ್‌ಆರ್‌ಪಿ ಶುಲ್ಕವನ್ನು ಪಾವತಿ ಮಾಡಬೇಕಾಗುತ್ತದೆ. (ಆನ್‌ಲೈನ್ ಮೂಲಕ ಮಾತ್ರ ಶುಲ್ಕ ಪಾವತಿ ಮಾಡಬೇಕು).

  • ವಾಹನ ಮಾಲೀಕರ ಮೊಬೈಲ್‌ಗೆ ಒಟಿಪಿ ಸಂಖ್ಯೆ ಬರುತ್ತದೆ. ಮಾಲೀಕರು ಅವರ ಅನುಕೂಲಕ್ಕೆ ಮತ್ತು ವೆಬ್‌ಸೈಟ್‌ಗೆ ಅನುಗುಣವಾಗಿ ದಿನಾಂಕ ಮತ್ತು ಸಮಯವನ್ನು ಆಯ್ಕೆ ಮಾಡಬಹುದು.
  • ಮಾಲೀಕರು ನಂತರ ತಮ್ಮ ವಾಹನಗಳಿಗೆ ಎಚ್‌ಎಸ್‌ಆರ್ ಪಿ ಅಳವಡಿಸಲು ವಾಹನ ತಯಾರಕರು ಅಥವಾ ಡೀಲರ್ ಬಳಿ ಭೇಟಿ ನೀಡಬೇಕು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net