

ಉಡುಪಿ: ಜನಸಾಮಾನ್ಯರಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಜಲ್ ಜೀವನ್ ಮಿಷನ್ ಯೋಜನೆ ಕಾಮಗಾರಿಗಳು ಸಮರ್ಪಕವಾಗಿಲ್ಲ ಎಂಬ ದೂರುಗಳು ಕೇಳಿಬರುತ್ತಿದ್ದು, ಈ ಬಗ್ಗೆ ಮುಂದಿನ ಸಭೆಯೊಳಗೆ ಸಮಗ್ರ ವರದಿ ಸಲ್ಲಿಸುವಂತೆ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ ರಾಘವೇಂದ್ರ ಸೂಚನೆ ನೀಡಿದರು.
ಮಣಿಪಾಲ ರಜತಾದ್ರಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಯೋಜನೆಯಡಿ ಜಿಲ್ಲೆಯಲ್ಲಿ 687 ಕೋಟಿ ರೂ. ಮೊತ್ತದಲ್ಲಿ 525 ಕಾಮಗಾರಿಗಳನ್ನು ಕೈಗೊಂಡಿದ್ದು, ಅವುಗಳಲ್ಲಿ 487 ಪೂರ್ಣಗೊಂಡಿದ್ದು, 38 ಕಾಮಗಾರಿಗಳು ಪ್ರಗತಿಯಲ್ಲಿವೆ. ಶೇ.93 ರಷ್ಟು ಸಾಧನೆಯಾಗಿದೆ ಎಂದು ಮಾಹಿತಿ ನೀಡಿದ್ದೀರಿ. ಆದರೆ ಉಡುಪಿ ವಿಧಾನಸಭಾ ಕ್ಷೇತ್ರದ 19 ಗ್ರಾಮ ಪಂಚಾಯಿತಿಗಳಲ್ಲಿ 15 ಗ್ರಾಪಂಗಳು ಕಾಮಗಾರಿಗಳು ಸರಿಯಾಗಿಲ್ಲವೆಂದು ರ್ನಿಣಯ ಕೈಗೊಂಡಿದ್ದು, 1 ವರ್ಷವಾದರೂ ಈ ಬಗ್ಗೆ ಪರಿಶೀಲನೆ ನಡೆಸಲಾಗಿಲ್ಲ ಯಾಕೆ ಎಂದು ಪ್ರಶ್ನಿಸಿದರು. ಗ್ರಾಪಂ ರ್ನಿಣಯ ಬಗ್ಗೆ ಅಧ್ಯಯನ ಮಾಡಿ ವರದಿ ನೀಡುವಂತೆ ಜಿಪಂ ಸಿಇಒ ಅವರಿಗೆ ಸೂಚನೆ ನೀಡಿದರು.
ಪ್ರಧಾನಮಂತ್ರಿ ಜನ್ ಮನ್ ಯೋಜನೆಯಡಿ ಬುಡಕಟ್ಟು ಜನಾಂಗದವರಿಗೆ 18 ಸಮುದಾಯ ಭವನಗಳ ನಿಮಾರ್ಣಕ್ಕೆ ಅನುದಾನ ಮಂಜೂರಾಗಿದೆ. ನಿಮಾರ್ಣ ಕಾಮಗಾರಿಗಳನ್ನು ಗುಣಮಟ್ಟದೊಂದಿಗೆ ನಿಗಧಿತ ಕಾಲಾವಧಿಯೊಳಗೆ ಪೂರ್ಣಗೊಳಿಸಬೇಕು. ಕೊರಗ ಜನಾಂಗದವರಿಗೆ ಮನೆ ನಿಮಾರ್ಣ ಮಾಡಲು 3.73 ಲಕ್ಷ ರೂ. ವೆಚ್ಚದಲ್ಲಿ 308 ಮನೆ, 4.50 ಲಕ್ಷ ರೂ. ವೆಚ್ಚದಲ್ಲಿ 100 ಮನೆ ಮಂಜೂರಾತಿ ನೀಡಲಾಗಿದೆ. ಪೂರ್ಣ ಪ್ರಮಾಣದಲ್ಲಿ ಮನೆ ನಿಮಾರ್ಣಕ್ಕೆ ಹೆಚ್ಚಿನ ಅನುದಾನ ಅಗತ್ಯವಿರುವುದರಿಂದ ಖಾಸಗಿ ಎಸ್ ಜಿ ಒಗಳು ಮತ್ತು ದಾನಿಗಳ ಸಹಭಾಗಿತ್ವದೊಂದಿಗೆ ಮನೆಯ ನಿಮಾರ್ಣ ಪೂರ್ಣಗೊಳಿಸಬೇಕು ಎಂದರು.
ಎಸ್ಪಿ ಹರಿರಾಂ ಶಂಕರ್ ಮಾತನಾಡಿ, ಕೊಲ್ಲೂರು ಮತ್ತು ಬೈಂದೂರು ಭಾಗದಲ್ಲಿ 20 ದನಕಳ್ಳತನ ಪ್ರಕರಣ ದಾಖಲಾಗಿದ್ದು, 18 ಪ್ರಕರಣಗಳಲ್ಲಿ ಆರೋಪಿಗಳನ್ನು ಬಂಧಿಸಲಾಗಿದ್ದು, ಕಾನೂನು ಕ್ರಮಕೈಗೊಳ್ಳಲಾಗಿದೆ. ಭಟ್ಕಳ ಮತ್ತು ಕಾರವಾರಕ್ಕೆ ಅಕ್ರಮ ಗೋಸಾಗಾಟ ನಡೆಯುತ್ತಿದ್ದು, ಬೀಡಾಡಿ ದನಗಳನ್ನು ರಸುವ ನಿಟ್ಟಿನಲ್ಲಿ ಗೋಶಾಲೆಗಳನ್ನು ತೆರೆಯುವ ಅಗತ್ಯವಿದೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಸಂಸದರು, ಕೊಲ್ಲೂರು ಭಾಗದಲ್ಲಿ ಹೆಚ್ಚು ಬೀಡಾಡಿ ದನಗಳಿರುವುದರಿಂದ ಪಾಲನೆ ಮಾಡಲು ಅನುಕೂಲವಾಗುವಂತೆ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಸಹಭಾಗಿತ್ವದಲ್ಲಿ ಗೋಶಾಲೆಯನ್ನು ತೆರೆಯಲು ಕೋರಿಕೆ ಸಲ್ಲಿಸಬಹುದು. ಈಗಾಗಲೇ ಸರ್ಕಾರದಿಂದ ಜಾಗವನ್ನು ಗುರುತಿಸಲಾಗಿದೆ. ಹೀಗಾಗಿ ಶ್ರೀದಲ್ಲಿ ಗೋಶಾಲೆ ಪ್ರಾರಂಭಕ್ಕೆ ಕ್ರಮಕೈಗೊಳ್ಳುವಂತೆ ಎಸಿಯವರಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ಈಗಾಗಲೇ 196 ಮೊಬೈಲ್ ಟವರ್ಗಳಿದ್ದು, ಅವುಗಳಲ್ಲಿ 115 2ಜಿ ಯಿಂದ 4 ಜಿಗೆ ಉನ್ನತಿಕರಣಗೊಳಿಸಲಾಗಿದೆ. ಯಾವುದೇ ನೆಟ್ವರ್ಕ್ ಇಲ್ಲದೇ ಇರುವ 41 ಗ್ರಾಮಗಳನ್ನು ಗುರುತಿಸಲಾಗಿದ್ದು, ಈಗಾಗಲೇ 38 ಕಡೆಗಳಲ್ಲಿ ಟವರ್ ಹಾಕಲಾಗಿದೆ. 3 ಕಡೆ ಜಾಗದ ಸಮಸ್ಯೆಯಿಂದ ಕಾಮಗಾರಿ ಬಾಕಿಯಾಗಿದೆ ಎಂದು ಟೆಲಿಕಾಂ ಅಧಿಕಾರಿ ಮಾಹಿತಿ ನೀಡಿದರು.
ಸ್ಯಾಟಲೈಟ್ ಕನೆಕ್ಷನ್ ಕೊಡಿ
ಜಿಲ್ಲೆಯ ಕೆಲವು ಗ್ರಾಮೀಣ ಭಾಗಗಳಲ್ಲಿ ಮೊಬೈಲ್ ನೆಟ್ವರ್ಕ್ಗಳು ಇಲ್ಲದೇ ಸಾರ್ವಜನಿಕರು ದೂರವಾಣಿ ಸಂಪರ್ಕ ಸಾಧಿಸಲು ಆಗುತ್ತಿಲ್ಲ. 4ಜಿ ನೆಟ್ವರ್ಕ್ ಇಲ್ಲದ ಗ್ರಾಮಗಳನ್ನು ಗುರುತಿಸಿ ಪಟ್ಟಿಯನ್ನು ಶಾಸಕರಿಗೆ ನೀಡಬೇಕು. ಅರಣ್ಯ ಇಲಾಖೆ ಸಮಸ್ಯೆಯಿಂದ ಟವರ್ ಅಳವಡಿಕೆಗೆ ಕಷ್ಟಸಾಧ್ಯವಾದ ಪ್ರದೇಶಗಳನ್ನು ಗುರುತಿಸಿ, ಸ್ಯಾಟಲೈಟ್ ಮೂಲಕ ನೆಟ್ವರ್ಕ್ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದರು.
ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಕಟಪಾಡಿ ಜಂಕ್ಷನ್ ಅಂಡರ್ಪಾಸ್ ಕಾಮಗಾರಿ ಕೈಗೊಳ್ಳಲು ಈಗಾಗಲೇ ಕೇಂದ್ರ ಸರ್ಕಾರದಿಂದ ಮಂಜೂರಾತಿ ಲಭ್ಯವಾಗಿದೆ. ಅಗತ್ಯವಿರುವ ವಸ್ತುಗಳನ್ನು ದಾಸ್ತಾನು ಮಾಡಿಕೊಂಡು ಕಾಮಗಾರಿಯನ್ನು ಶೀಘ್ರದಲ್ಲಿಯೇ ಪ್ರಾರಂಭಿಸಬೇಕು. ಈ ಸಂದರ್ಭದಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಧಕ್ಕೆಯಾಗದಂತೆ ಅಗತ್ಯ ಪರ್ಯಾಯ ಮಾರ್ಗಗಳನ್ನು ಕಲ್ಪಿಸಬೇಕೆಂದು ಸಲಹೆ ನೀಡಿದರು.
ಶಾಸಕರಾದ ಯಶ್ಪಾಲ್ ಎ ಸುವರ್ಣ, ಗುರುರಾಜ್ ಶೆಟ್ಟಿ ಗಂಟಿಹೊಳೆ, ಕಿರಣ್ ಕುಮಾರ್ ಕೊಡ್ಗಿ ಮಾತನಾಡಿದರು. ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತಿಕ್ ಬಾಯಲ್, ಕಾರ್ಕಳ ವೈಲ್ಡ್ಲೈಫ್ ಡಿ.ಎಫ್.ಓ ಶಿವರಾಮ್ ಎಂ. ಬಾಬು ಮತ್ತಿತರರು ಉಪಸ್ಥಿತರಿದ್ದರು.