ಆರೋಗ್ಯ ಸೇವೆಗಳನ್ನು ಪ್ರತಿಯೊಬ್ಬರಿಗೆ ತಲುಪಿಸಿ: ಕಾಗೇರಿ ಕರೆ

Kageri Meeting
Published on

ಕಾರವಾರ:ಜಿಲ್ಲೆಯಲ್ಲಿನ ಪ್ರತಿಯೊಬ್ಬ ಸಾರ್ವಜನಿಕರಿಗೂ ಆರೋಗ್ಯ ಇಲಾಖೆಯ ಮೂಲಕ ಆಯಷ್ಮಾನ್ ಆರೋಗ್ಯ ಸೇವೆಗಳು ಮತ್ತು ಹಿರಿಯ ನಾಗರೀಕರಿಗೆ ವಯೋ ವಂದನಾ ಯೋಜನೆಯ ಪ್ರಯೋಜನವನ್ನು ತಲುಪಿಸುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸಂಸದ ವಿಶ್ವೇಶ್ವರ ಹೆಗಡೆ ಕಾಗರಿ ಸೂಚಿಸಿದರು.

ಅವರು ಶುಕ್ರವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ದಿಶಾ ಸಭೆಯ ಅಧ್ಯಕ್ಷತೆ ವಹಿಸಿ ಮತನಾಡಿದರು. ಜಿಲ್ಲೆಯಲ್ಲಿ ಎಲ್ಲಾ ಸಾರ್ವಜನಿಕರಿಗೂ ಆಯಷ್ಮಾನ್ ಆರೋಗ್ಯ ಸೇವೆಗಳು ಮತ್ತು ಹಿರಿಯ ನಾಗರೀಕರಿಗೆ ವಯೋ ವಂದನಾ ಯೋಜನೆಯ ಪ್ರಯೋಜನಗಳು ದೊರೆಯಬೇಕು, ಇದನ್ನು ಸಮರ್ಪಕವಾಗಿ ತಲುಪಿಸಲು ಸಾಧ್ಯವಾಗದ ಬಗ್ಗೆ ತಾಂತ್ರಿಕ ಕಾರಣಗಳು ನೆಪವಾಗಬಾರದು. ಜಿಲ್ಲೆಯಲ್ಲಿ ಕ್ಷಯ ಮುಕ್ತ ಗ್ರಾಮವನ್ನಾಗಿ ಘೋಷಣೆ ಮಾಡಲು ಬಾಕಿ ಇರುವ 92 ಗ್ರಾಮಳನ್ನು ಶೀಘ್ರದಲ್ಲಿ ಕ್ಷಯ ಮುಕ್ತ ಮಾಡುವ ಕಾರ್ಯವನ್ನು ಮುಗಿಸಬೇಕು, ನಿಕ್ಷಯ ಪೋಷಣ ಯೋಜನೆಯ ಪ್ರಗತಿಗೆ ಜಿಲ್ಲೆಯಲ್ಲಿನ ವಿವಿಧ ಸಂಸ್ಥೆಗಳ ಸಿ.ಎಸ್.ಆರ್ ಫೆಂಡ್ ನ ನೆರವು ಬಳಸಿಕೊಳ್ಳಿ, ಜಿಲ್ಲೆಯಲ್ಲಿನ ಎಲ್ಲಾ ಜನೌಷಧಿ ಕೇಂದ್ರಗಳು ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಬೇಕು. ಯಾವುದೇ

ಸಾಂಕ್ರಾಮಿಕ ಕಾಯಿಲೆಗಳ ಹರಡದಂತೆ ಎಲ್ಲಾ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಿದ ಅವರು, ಆರೋಗ್ಯ ಸೇವೆಗಳಿಗಾಗಿ ಕೇಂದ್ರ ಸರ್ಕಾರದಿಂದ ಅಧಿಕ ಮೊತ್ತದ ಅನುದಾನ ನೀಡಲಾಗುತ್ತಿದ್ದು, ಇದನ್ನು ಸಮರ್ಪಕವಾಗಿ ಬಳಸುವಂತೆ ಮತ್ತು ಕುಮಟಾದಲ್ಲಿ ಟ್ರೊಮಾ ಸೆಂಟರ್ ನ್ನು ಬೇಗ ಆರಂಭಿಸುವಂತೆ ನಿರ್ದೇಶನ ನೀಡಿದರು.

ಹೆಸ್ಕಾಂ ವತಿಯಿಂದ ಸೂರ್ಯ ಘರ್ ಯೋಜನೆಯ ಬಗ್ಗೆ ಸಾರ್ವಜನಿಕರಿಗೆ ಹೆಚ್ಚು ಅರಿವು ಮತ್ತು ಜಾಗೃತಿ ಮೂಡಿಸಬೇಕು , ಎಲ್ಲಾ ಸರ್ಕಾರಿ ಕಟ್ಟಡಗಳ ಮೇಲೂ ಇದನ್ನು ಅಳವಡಿಸಬೇಕು ಈ ಯೋಜನೆಯು ಆದಾಯ ಮೂಲ ಎಂಬುದನ್ನು ಮನವರಿಕೆ ಮಾಡಿಕೊಡುವಂತೆ ತಿಳಿಸಿದ ಅವರು , ಜಿಲ್ಲೆಯಲ್ಲಿ ಗೃಹ ಜ್ಯೋತಿ ಯೋಜನೆಯಿಂದ ಅನರ್ಹರಾಗಿರುವ ಸುಮಾರು 10000 ಮಂದಿಯನ್ನು ಈ ಯೋಜನೆ ವ್ಯಾಪ್ತಿಗೆ ಒಳಪಡಿಸಲು ಕ್ರಮ ಕೈಗೊಳ್ಳಿ ಎಂದರು. ಜಿಲ್ಲೆಯಲ್ಲಿ ಬಿ.ಎಸ್.ಎನ್.ಎಲ್ ಟವರ್‌ಗಳ ನಿರ್ಮಾಣ ಮತ್ತು ಸಂಪರ್ಕ ಕಾರ್ಯದ ಕುರಿತಂತೆ ಅರಣ್ಯ ಇಲಾಖೆಯ ಮೂಲಕ ಬಿ.ಎಸ್.ಎನ್.ಎಲ್ ಗೆ ಎಲ್ಲಾ ರೀತಿಯ ಅಗತ್ಯ ಸಹಕಾರ ನೀಡುವಂತೆ ತಿಳಿಸಿದ ಅವರು, ಅಧಿಕಾರಿಗಳು ಪರಸ್ಪರ ಸಮನ್ವಯದಿಂದ ಕೆಲಸ ಮಾಡಿ ಸರ್ಕಾರದ ಸೌಲಭ್ಯಗಳನ್ನು ಸಾರ್ವಜನಿಕರಿಗೆ ತಲುಪಿಸಬೇಕು ಎಂದರು.

ಜಲ ಜೀವನ್ ಮಿಷನ್ ಕಾಮಗಾರಿಗಳಲ್ಲಿ ವಿಳಂಬ ಮತ್ತು ಕಳಪೆ ಗುಣಮಟ್ಟದ ಕುರಿತು ದೂರುಗಳು ಬರುತ್ತಿದ್ದು, ಈ ಬಗ್ಗೆ ಪರಿಶೀಲಿಸುವಂತೆ ಹಾಗೂ ಗುತ್ತಿಗೆದಾರರಿಗೆ ಕಾಮಗಾರಿ ಮುಕ್ತಾಯ ಸಮಯ ನಿಗಧಿಗೊಳಿಸಿ ಅವರ ವಿರುದ್ದ ಬಿಗು ಕ್ರಮಗಳನ್ನು ಕೈಗೊಳ್ಳಬೇಕು. ಜಿಲ್ಲೆಯಲ್ಲಿ ಮುಂದಿನ ಹಂತದಲ್ಲಿ ಇನ್ನೂ 800 ಹಳ್ಳಿಗಳಿಗೆ ಜಲ ಜೀವನ್ ಯೋಜನೆಯ ಸಂಪರ್ಕ ನೀಡಲು ಬಾಕಿಯಿದ್ದು ಇದನ್ನೂ ಶೀಘ್ರದಲ್ಲಿ ಮುಕ್ತಾಯಗೊಳಿಸುವಂತೆ ತಿಳಿಸಿದರು.

ಸ್ವಚ್ಛಭಾರತ್ ಮಿಷನ್ ಯೋಜನೆಯಡಿ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್ ಗಳಲ್ಲಿರುವ ಘನ ತ್ಯಾಜ್ಯ ಘಟಕಗಳಲ್ಲಿನ ತ್ಯಾಜದ ಮಾರಾಟ ವ್ಯವಸ್ಥಿತ ಆಗಲಿ, ಎಂ.ಆರ್.ಎಫ್ ಸೆಂಟರ್ ಗಳ ಮೂಲಕ ಸಂಗ್ರಹಿಸಿದ ತ್ಯಾಜ್ಯವನ್ನು ವಿಲೇವಾರಿ ಮಾಡಬೇಕು. ಎಲ್ಲಾ ಸರಕಾರಿ ಕಚೇರಿಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ಮಾದರಿಯಾಗಬೇಕು ಎಂದರು. ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸಂಗ್ರಹಿಸುವ ಕಸದಲ್ಲಿ, ಹಸಿ ಕಸ ಮತ್ತು ಒಣ ಕಸ ವಿಂಗಡಣೆ ಸಮರ್ಪಕವಾಗಿರಲಿ,

ರಸ್ತೆ ಬದಿಯಲ್ಲಿ ತ್ಯಾಜ್ಯ ಸುರಿಯು ವ ಪ್ರಕರಣಗಳು ಕಂಡುಬರುತ್ತಿದ್ದು ಇದನ್ನು ತಪ್ಪಿಸಲು , ಕಟ್ಟುನಿಟ್ಟಿನ ಕ್ರಮಗಳನ್ನುಕೈಗೊಳ್ಳಬೇಕು. ಈಗಾಗಲೇ ಸಂಗ್ರಹಿಸಿರುವ ಲೆಗಸಿ ವೇಸ್ಟ್ ನ್ನು ವಿಲೇವಾರಿ ಮಾಡಿ ಎಂದರು. ಲೆಗಾಸಿ ವೇಸ್ಟ್ ತೆರವುಗೊಳಿಸಲು ಈಗಾಗಲೇ ಟೆಂಡರ್ ಕರೆಯಲಾಗಿದ್ದು ಡಿಸೆಂಬರ್ ಒಳಗೆ ಇದನ್ನು ಸಂಪೂರ್ಣವಾಗಿ ತೆರವುಗೊಳಿಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ತ್ಯಾಜ್ಯ ನಿರ್ಮೂಲನೆ ಮಾಡಿ, ಸ್ವಚ್ಛತೆ ಕಾಪಾಡುವಲ್ಲಿ ಸಾರ್ವನಿಕರ ಸಹಕಾರ ಅತ್ಯಗತ್ಯವಾಗಿದ್ದು, ಸಂಜೆ ವೇಳೆಯಲ್ಲಿ ಬೀದಿ ಬದಿ ವ್ಯಾಪಾರಿಗಳಿಂದ ತ್ಯಾಜ್ಯವನ್ನು ಸಂಗ್ರಹಿಸಲು ಕ್ರಮ ಕೈಗೊಳ್ಳಿ ಎಂದರು.

ಪಿ. ಎಂ ಸ್ವನಿಧಿ ಯೋಜನೆಯಲ್ಲಿ ನೀಡುವ ಸಾಲದ ಮೊತ್ತ ಹೆಚ್ಚಳವಾಗಿದ್ದು,ಈ ಬಗ್ಗೆ ಮಾಹಿತಿ ನೀಡಬೇಕು. ಜಿಲ್ಲೆಯಲ್ಲಿ ಈ ಯೋಜನೆಯಡಿ ಇದುವರೆಗೂ ರೂ 10000 ದಂತೆ 5957 ಜನರಿಗೆ, ರೂ 20000 ದಂತೆ 2723 ಜನರಿಗೆ ಹಾಗೂ ರೂ 50000 ದಂತೆ 1023 ಬೀದಿ ಬದಿ ವ್ಯಾಪಾರಿಗಳು ಮಾತ್ರ ಈ ಯೋಜನೆಯ ಪ್ರಯೋಜನ ಪಡೆದಿದ್ದು, ಜಿಲ್ಲೆಯ ಎಲ್ಲಾ ಅರ್ಹ ಫಲಾನುಭವಿಗಳು ಈ ಯೋಜನೆಯ ಪ್ರಯೋಜನ ಪಡೆಯುವಂತೆ ಮತ್ತು ಪ್ರಸ್ತುತ ಹೆಚ್ಚಳವಾಗಿರುವ ಸಾಲದ ಮೊತ್ತದ ಕುರಿತು ಮಾಹಿತಿಯನ್ನು ನೀಡುವಂತೆ ತಿಳಿಸಿದರು.

ಜಿಲ್ಲೆಯ ರಸ್ತೆಗಳ ದುರವಸ್ಥೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸಂಸದರು, ಪಾಟ್ ಹೊಲ್ ಗಳನ್ನು ತಕ್ಷಣದಿಂದ ತುಂಬಬೇಕು ಮತ್ತು ಕೆಲವು ಸಂಚಾರ ನಿಷೇಧ ಕ್ರಮಗಳಿಂದ ಅಪಘಾತಗಳು ಕಡಿಮೆಯಾಗುವ ಬದಲು ಹೆಚ್ಚಳವಾಗುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು ಈ ನಿಷೇಧ ಕ್ರಮಗಳ ಬಗ್ಗೆ ಮತ್ತೊಮ್ಮೆ ಪರಿಶೀಲಿಸಿ , ಸಾರ್ವಜನಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಸೂಕ್ತ ನಿರ್ಧಾರ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದರು.

ಮೀನುಗಾರಿಕೆಯ ಇಲಾಖೆ ಮೂಲಕ ಮೀನುಗಾರರಿಗೆ ಕೋಲ್ಡ್ ಸ್ಟೋರೇಜ್ ನಿರ್ಮಾಣ ಮಾಡುವುದರ ಮೂಲಕ ಮೀನುಗಾರರಿಗೆ ಅನುಕೂಲ ಮಾಡಿಕೊಡಬೇಕು, ಕೇಂದ್ರ ಸರ್ಕಾರದಿಂದ ಜಿಲ್ಲೆಯ 8 ಬಂದರುಗಳನ್ನು ಮೇಲ್ದರ್ಜೆಗೇರಿಸಲು 50 ಕೋಟಿ ರೂ ಗಳ ಯೋಜನೆ ಇದ್ದು, ಕೂಡಲೇ ಈ ಬಗ್ಗೆ ಪ್ರಸ್ತಾವನೆಯನ್ನು ಸಲ್ಲಿಸಿದ್ದಲ್ಲಿ ಕೇಂದ್ರದಲ್ಲಿ ಶೀಘ್ರದಲ್ಲಿ ಅನುಮತಿ ನೀಡಲಾಗುವುದು, ಇನ್ಶೂಲೇಟೆಡ್ ವಾಹನಗಳ ಘಟಕ ವೆಚ್ಚ ಹೆಚ್ಚಳ ಮಾಡುವ ಕುರಿತಂತೆ ಕೇಂದ್ರದಿAದ ಅನುಮತಿ ದೊರಕಿಸಲು ಪ್ರಯತ್ನಿಸಲಾಗುವುದು ಎಂದರು. ಜಿಲ್ಲೆಯಲ್ಲಿ ಶರಾವತಿ ಪಂಪ್ ಸ್ಟೋರೇಜ್ ಸೇರಿದಂತೆ ಯಾವುದೇ ಯೋಜನೆಯನ್ನು ಆರಂಭಿಸುವ ಮೊದಲು ಜಿಲ್ಲೆಯ ಧಾರಣಾ ಶಕ್ತಿ ಅಧ್ಯಯನ ಮಾಡದೆ ಹೊಸ ಯೋಜನೆಗಳನ್ನು ತರಬಾರದು, ಜಿಲ್ಲೆಯ ಜನತೆ ಹಲವು ಯೋಜನೆಗಳಿಗೆ ತ್ಯಾಗ ಮಾಡಿದರೂ ಕೂಡಾ ಉದ್ಯೋಗ, ಪರಿಹಾರ ಸೇರಿದಂತೆ ಯಾವುದೇ ನಿರೀಕ್ಷಿತ ಪ್ರಯೋಜನವಾಗಿಲ್ಲ, ಬದಲಾಗಿ ಜಿಲ್ಲೆಯ ಪರಿಸರ ಹಾನಿಯಾಗುತ್ತಿದೆ. ಕಾರವಾರ ರೈಲ್ವೆ ನಿಲ್ದಾಣದಲ್ಲಿ ವಾಟರ್ ಸ್ಟೇಷನ್ ಮಾಡುವ ಕುರಿತು ಚರ್ಚಿಸಲಾಗಿದ್ದು, ಇದರಿಂದ ಕಾರವಾರ ನಿಲ್ದಾಣ ಉತ್ತಮವಾದ ರೀತಿಯಲ್ಲಿ ಅಭಿವೃದ್ಧಿಯಾಗುವ ಜೊತೆಗೆ ಜಿಲ್ಲೆಯಲ್ಲಿ ರೈಲ್ವೆಯ ಹಲವು ಯೋಜನೆಗಳು ಇನ್ನಷ್ಟು ಪ್ರಗತಿಯಾಗಲಿವೆ ಎಂದರು. ಜಿಲ್ಲೆಯಲ್ಲಿ ಎಲೆ ಚುಕ್ಕಿ ರೋಗ ತಡೆಗೆ ಕ್ರಮ ಕೈಗೊಳ್ಳಿ, ಜಿಲ್ಲೆಯ ವಿಶೇಷ ಬೆಳೆಗಳು ಮತ್ತು ಬೆಳೆಗಾರರು ಬಗ್ಗೆ ಮಾಹಿತಿ ಇಟ್ಟುಕೊಳ್ಳಿ, ಸಾವಯವ ಕೃಷಿಗೆ ಉತ್ತೇಜನ ನೀಡಬೇಕು ಸರ್ಕಾರಿ ಕಾರ್ಯಕ್ರಮಗಳಲ್ಲಿ ಇಲ್ಲಿನ ಸ್ಥಳಿಯ ಮತ್ತು ಸ್ವದೇಶೀ ಉತ್ಪನ್ನಗಳ ಬಳಕೆಗೆ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಿ ಎಂದ ಅವರು ಕೃಷಿ ,ತೋಟಗಾರಿಕೆ ಮತ್ತು ಪಶುಪಾಲನಾ ಇಲಾಖೆಯಿಂದ ದೊರೆಯುವ ಸೌಲಭ್ಯಗಳನ್ನು ಸಮರ್ಪಕವಾಗಿ ತಲುಪಿಸಬೇಕು ಎಂದು ಸೂಚಿಸಿದರು.

ಕ್ರೀಡಾ ಚಟುವಟಿಕೆಗಳ ಬೆಳವಣಿಗೆಗೆ ಮತ್ತು ಉತ್ತಮ ಕ್ರೀಡಾಪಟುಗಳನ್ನು ರೂಪಿಸಲು ಹೆಚ್ಚಿನ ಒತ್ತು ನೀಡುವಂತೆ ತಿಳಿಸಿದ ಅವರು, ಜಿಲ್ಲೆಯ ಕ್ರೀಡಾಪಟುಗಳನ್ನು ಒಲಂಪಿಕ್ಸ್ ಗೆ ಅರ್ಹತೆ ಪಡೆಯುವ ರೀತಿಯಲ್ಲಿ ಅವರಿಗೆ ಎಲ್ಲಾ ರೀತಿಯ ಪ್ರೋತ್ಸಾಹ ಮತ್ತು ತರಬೇತಿಗೆ ಅಗತ್ಯ ವ್ಯವಸ್ಥೆ ಮಾಡುವಂತೆ ಕ್ರೀಡಾ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಎಲ್ಲಾ ಅಧಿಕಾರಿಗಳು ಸರಕಾರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಸ್ಟಾನಗೊಳಿಸಿ ಸಾರ್ವಜನಿಕರಿಗೆ ಅವುಗಳನ್ನು ತಲುಪಿಸಬೇಕು, ಫಲಾನುಭವಿಗಳಿಗೆ ಯೋಜನೆಯ ಪ್ರಯೋಜನ ನೀಡುವಾಗ ಮಾನವೀಯ ಸ್ಪಂದನೆ ಇರಲಿ ಎಂದರು.

ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ಜಿಲ್ಲಾ ಪಂಚಾಯತ್ ನ ಆಡಳಿತಾಧಿಕಾರಿ ಸುಷಮಾ ಗೋಡಬೋಲೆ

,ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ದಿಲೀಷ್ ಶಶಿ , ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್, ದಿಶಾ ಸಮಿತಿಯ ಎಲ್ಲಾ ಸದಸ್ಯರು ಮತ್ತು ವಿವಿಧ ಇಲಾಖೆಗಳ ಅನುಷ್ಠಾನಾಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net