

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಸರ್ಕಾರಿ ಕಚೇರಿಗಳಲ್ಲಿ ಕೆಲಸ ವಿಳಂಬವಾಗುತ್ತಿರುವ ಬಗ್ಗೆ ಜನಸಾಮಾನ್ಯರ ದೂರುಗಳು ಕೇಳಿಬರುತ್ತಲೇ ಇರುತ್ತದೆ. ಸರ್ಕಾರಿ ಸೌಲಭ್ಯ ಪಡೆಯಲು ಕಚೇರಿಗಳಿಗೆ ಅಲೆದಾಡಿಸಲಾಗುತ್ತದೆ ಎಂಬ ದೂರುಗಳು ಕೇಳಿಬರುತ್ತಿವೆ, ಅಧಿಕಾರಿಗಳು ಸಮಯ ಪ್ರಜ್ಞೆ ಇಟ್ಟುಕೊಂಡು ಕೆಲಸ ಮಾಡಬೇಕು. ಜನಸಾಮಾನ್ಯರ ಕೆಲಸಕ್ಕೆ ಆದ್ಯತೆ ನೀಡಿ ಕೆಲಸ ಮಾಡಬೇಕು ಎಂದು ಸಂಸದ ಡಾ.ಕೆ.ಸುಧಾಕರ್ ಸೂಚಿಸಿದರು.
ದೇವನಹಳ್ಳಿಯ ಜಿಪಂ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಎರಡನೇ ತ್ರೈಮಾಸಿಕ ದಿಶಾ ಸಮಿತಿ ಸಭೆಯಲ್ಲಿ ಮಾತನಾಡಿದರು. ಅಧಿಕಾರಿಗಳು ಕೆಲಸ ಮಾಡದಿದ್ದಾಗ ಜನರು ಜನಪ್ರತಿನಿಧಿಗಳ ಹತ್ತಿರ ಬರುವಂತಾಗುತ್ತದೆ ಅಧಿಕಾರಿಗಳೇ ಸರಿಯಾಗಿ ಕೆಲಸ ಮಾಡಿದರೆ ಜನರು ಬರುವ ಅವಶ್ಯಕತೆ ಇರುವುದಿಲ್ಲ ಈ ಬಗ್ಗೆ ಗಮನ ನೀಡಬೇಕು ಎಂದರು. ಆಯುಷ್ಮಾನ್ ಕಾರ್ಡ್ ಹೊಂದಿದ ಪ್ರತಿಯೊಬ್ಬರಿಗೂ 5 ಲಕ್ಷ ವರೆಗಿನ ಉಚಿತ ವೈದ್ಯಕೀಯ ಚಿಕಿತ್ಸಾ ಸೌಲಭ್ಯ ದೊರಕಲಿದ್ದು, ಈ ಬಗ್ಗೆ ಸಾರ್ವಜನಿಕರಿಗೆ ಹೆಚ್ಚಿನ ಅರಿವು ಮೂಡಿಸಿಬೇಕು ಜನರ ಆರೋಗ್ಯದ ಹಿತದೃಷ್ಟಿಯಿಂದ ಜಿಲ್ಲೆಯ ಪ್ರತಿಯೊಬ್ಬರು ಕಾರ್ಡ್ ಮಾಡಿಸಿಕೊಳ್ಳುವಂತೆ ಅರಿವು ಮೂಡಿಸಿ ಎಂದರು.
ಬೆಳೆ ವಿಮೆ ನೋಂದಣಿ ಹೆಚ್ಚಿಸಿ:
ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಡಿ ಕಳೆದ ಸಾಲಿನಲ್ಲಿ ಜಿಲ್ಲೆಯಲ್ಲಿ 4885 ರೈತರು ನೋಂದಣಿಯಾಗಿದ್ದಾರೆ. ಜಿಲ್ಲೆಯ ರೈತರು ತೋಟಗಾರಿಕೆ ಹಾಗೂ ಕೃಷಿ ವಾಣಿಜ್ಯ ಬೆಳೆಗಳನ್ನು ಹೆಚ್ಚು ಬೆಳೆಯುತ್ತಾರೆ. ಒಮ್ಮೆ ನಷ್ಟವಾದರೆ ರೈತರಿಗೆ ಬಹಳ ತೊಂದರೆ ಆಗುತ್ತದೆ. ಈ ಹಿನ್ನೆಲೆಯಲ್ಲಿ ಬೆಳೆ ವಿಮೆ ಮಾಡಿಸುವುದರಿಂದ ಆಗುವಂತಹ ಅನುಕೂಲಗಳ ಬಗ್ಗೆ ವ್ಯಾಪಕ ಪ್ರಚಾರ ಕೈಗೊಂಡು ರೈತರಿಗೆ ಅರಿವು ಮೂಡಿಸಿ ಈ ವರ್ಷ ನೋಂದಣಿ ಹೆಚ್ಚಿಸಿ ಎಂದು ಸಂಸದರು ಕೃಷಿ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.
29 ರೂ. ಗಳಿಗೆ ಭಾರತ್ ಅಕ್ಕಿ: ಜನಸಾಮಾನ್ಯರಿಗೆ ಕೈಗೆಟುಕುವ ದರದಲ್ಲಿ ಗುಣಮಟ್ಟದ ಅಕ್ಕಿ ಪೂರೈಸುತ್ತಿದ್ದು ಕೆ.ಜಿ ಅಕ್ಕಿಗೆ 29 ರೂಪಾಯಿ ಮಾತ್ರ. ಸಾರ್ವಜನಿಕರಿಗೆ ಇದರ ಬಗ್ಗೆ ಅರಿವು ಮೂಡಿಸಿ ಎಂದರು. ಗ್ಯಾಸ್ ಸಂಪರ್ಕ ಹೊಂದಿಲ್ಲದ 3098 ಕುಟುಂಬಗಳ ಜಿಲ್ಲೆಯಲ್ಲಿದ್ದು ಅಂತವರಿಗೆ ಉಜ್ವಲ ಯೋಜನೆಯಡಿ ಗ್ಯಾಸ್ ಸಂಪರ್ಕ ಕಲ್ಪಿಸಲು ಕ್ರಮ ವಹಿಸಬೇಕು ಎಂದರು. ಒಂದು ದೇಶ ಒಂದು ಪಡಿತರ ಯೋಜನೆ ಜಾರಿಯಾಗಿ ದೇಶದ ಜನರು ದೇಶದ ಯಾವುದೇ ಪಡಿತರ ಅಂಗಡಿಯಲ್ಲಿ ಬೇಕಾದರೂ ಪಡಿತರ ಪಡೆಯಬಹುದಾದ ಸೌಲಭ್ಯವಿದೆ. ಆದರೆ ಹೊರ ರಾಜ್ಯದಿಂದ ಬಂದು ಅಸಂಘಟಿತ ವಲಯದಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರು ನಮ್ಮ ರಾಜ್ಯದಲ್ಲಿ ಪಡಿತರ ಪಡೆಯಲು ಆಗುತ್ತಿಲ್ಲ ಎಂಬ ಮಾಹಿತಿ ಬಂದಿದ್ದು ರಾಜ್ಯ ಸರ್ಕಾರಕ್ಕೆ ಇದರ ಬಗ್ಗೆ ವರದಿ ಸಲ್ಲಿಸಿ ಎಂದರು.
ಉತ್ತಮಗೊಳ್ಳಬೇಕು: ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಜತೆಗೆ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಪ್ರಗತಿ ಸಾಧಿಸುವಂತೆ ಕ್ರಮ ವಹಿಸಬೇಕು ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ ಡಾ.ಸುಧಾಕರ್ ಜಿಲ್ಲೆ ವ್ಯಾಪ್ತಿಯ ಸರ್ಕಾರಿ ಶಾಲೆಗಳಿಗೆ ತಿಂಗಳಿಗೊಮ್ಮೆ ಅಧಿಕಾರಿಗಳು ಭೇಟಿ ನೀಡಿ ಮಕ್ಕಳ ಜತೆಗೆ ಮಧ್ಯಾಹ್ನದ ಬಿಸಿಯೂಟ ಮಾಡಬೇಕು. ಇದರಿಂದ ಆಹಾರದ ಗುಣಮಟ್ಟ ಹಾಗೂ ಅಧಿಕಾರಿಗಳ ಕಾರ್ಯಕ್ಷಮತೆ ಕಾಣಬಹುದು ಎಂದರು.
ಬಾಣಂತಿ, ಶಿಶುಗಳ ಸಾವು ತಡೆಗಟ್ಟಿ: ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ಹಾಗೂ ಖಾಸಗಿ ವೈದ್ಯರು, ನರ್ಸ್‌ಗಳಿಗೆ ಕಾರ್ಯಾಗಾರ ಏರ್ಪಡಿಸಿ ಗರ್ಭಿಣಿ, ಬಾಣಂತಿ ಹಾಗೂ ಶಿಶುಗಳ ಲಾಲನೆ, ಪಾಲನೆ, ಚಿಕಿತ್ಸಾ ವಿಧಾನ ಬಗ್ಗೆ ತರಬೇತಿ ನೀಡಿ. ಇದರಿಂದ ಗರ್ಭಿಣಿಯರ, ಶಿಶುಗಳ ಸಾವು ಸಂಭವಿಸುವುದನ್ನು ತಪ್ಪಿಸಬಹುದು ಹಾಗೆಯೇ ಬಾಲ್ಯವಿವಾಹ ಹಾಗೂ ಪೊಕ್ಸೋ ಪ್ರಕರಣಗಳು ತಡೆಯುವಲ್ಲಿ ಸಂಬಂಧಪಟ್ಟ ಇಲಾಖೆ ಜತೆಗೆ ಪೋಲಿಸ್ ಇಲಾಖೆ ಜಂಟಿಯಾಗಿ ಕಾರ್ಯ ಪ್ರವೃತರಾಗಿ ಕೆಲಸ ಮಾಡಬೇಕು. ಬಾಲ್ಯ ವಿವಾಹ ಪ್ರಕರಣ ದಾಖಲಾಗಿ ಇತ್ಯರ್ಥ ಆಗುವವರೆಗೆ ವರದಿ ಪಡೆದು ನಿಗಾ ವಹಿಸಬೇಕು ಎಂದು ಸಂಸದರು ಸೂಚಿಸಿದರು. ಜನಪ್ರತಿನಿಧಿಗಳು, ಅಧಿಕಾರಿಗಳು ಸಹಕಾರದಿಂದ ಕೆಲಸ ಮಾಡಿದರೆ ಜನರಿಗೆ ಸಮರ್ಪಕವಾಗಿ ಯೋಜನೆಗಳನ್ನು ತಲುಪಿಸಲು ಸಾಧ್ಯ ಎಂದರು.