'ಮೈಸೂರು-ಕುಶಾಲನಗರ ನಾಲ್ಕು ಪಥದ ಹೆದ್ದಾರಿ ಕಾಮಗಾರಿ ಒಂದು ತಿಂಗಳಲ್ಲಿ ಆರಂಭ'

30mdk09
Published on

ಮಡಿಕೇರಿ:

ಮೈಸೂರು-ಕುಶಾಲನಗರ ನಾಲ್ಕು ಪಥದ ಹೆದ್ದಾರಿ ಕಾಮಗಾರಿಯನ್ನು ಒಂದು ತಿಂಗಳಲ್ಲಿ ಆರಂಭಿಸಲಾಗುವುದು ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು. ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಅಭಿವೃದ್ಧಿ ಮತ್ತು ಉಸ್ತುವಾರಿ ಸಮಿತಿ(ದಿಶಾ) ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮೈಸೂರು-ಕುಶಾಲನಗರ ನಾಲ್ಕು ಪಥದ ಹೆದ್ದಾರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಈಗಾಗಲೇ ಚಾಲನೆ ನೀಡಿದ್ದು ೪,೧೩೦ ಕೋಟಿ ರೂ. ವೆಚ್ಚದಲ್ಲಿ ೯೩ ಕಿ.ಮೀ. ಉದ್ದದ ಹೆದ್ದಾರಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ ಎಂದರು.

ಕುಶಾಲನಗರ-ಸಂಪಾಜೆ ಮಾರ್ಗದಲ್ಲಿ ಅಪಘಾತ ಸ್ಥಳಗಳನ್ನು ಗುರುತಿಸಿ ವರದಿ ನೀಡಬೇಕು. ಇಂತಹ ಸ್ಥಳಗಳಲ್ಲಿ ಅಪಘಾತ ತಪ್ಪಿಸಲು ಅಗತ್ಯ ಕ್ರಮವಹಿಸಬೇಕು. ಮದೆನಾಡು ಬಳಿಯ ಕರ್ತೋಜಿ ಗುಡ್ಡ ಮೇಲ್ಭಾಗದಲ್ಲಿ ಬಿರುಕು ಬಿಟ್ಟಿದ್ದು, ಮಳೆಗಾಲದಲ್ಲಿ ಮಣ್ಣು ರಸ್ತೆಗೆ ಬರುವ ಸಾಧ್ಯತೆ ಇದೆ. ಆದ್ದರಿಂದ ತಡೆಗೋಡೆ ನಿರ್ಮಿಸಬೇಕು. ಹೆದ್ದಾರಿಯಲ್ಲಿ ಸಾರಿಗೆ ಸಂಚಾರಕ್ಕೆ ಯಾವುದೇ ರೀತಿಯ ವ್ಯತ್ಯಯ ಉಂಟಾಗದಂತೆ ಗಮನಹರಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಭಾಗಮಂಡಲ ಮೇಲುಸೇತುವೆ ನಿರ್ಮಾಣ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಿ ಸಾರ್ವಜನಿಕರ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು. ಸರ್ಕಾರದ ವಿವಿಧ ವಸತಿ ಯೋಜನೆಯನ್ನು ಅನುಷ್ಠಾನಗೊಳಿಸಬೇಕು. ನಿವೇಶನ ಹಾಗೂ ವಸತಿ ರಹಿತರಿಗೆ ವಸತಿ ಹಾಗೂ ನಿವೇಶನ ಕಲ್ಪಿಸಬೇಕು. ನಗರ ಮತ್ತು ಪಟ್ಟಣ ಪ್ರದೇಶದಲ್ಲಿ ಕುಡಿಯುವ ನೀರು ಸಮರ್ಪಕ ನಿರ್ವಹಣೆ ಮಾಡಬೇಕು. ಕುಡಿಯುವ ನೀರು ವ್ಯತ್ಯಯ ಉಂಟಾಗದಂತೆ ಗಮನಹರಿಸಬೇಕು. ಎಂದ ಸಂಸದ, ಜಲಜೀವನ್ ಮಿಷನ್ ಯೋಜನೆಯಡಿ ಪ್ರತಿ ಕುಟುಂಬಕ್ಕೂ ನಲ್ಲಿ ನೀರು ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಕೊಡಗು ಜಿಲ್ಲೆಯಲ್ಲಿ ೧.೩೬ ಲಕ್ಷ ಮನೆಗಳ ಗುರಿಯಲ್ಲಿ ಈಗಾಗಲೇ ೧.೧೪ ಲಕ್ಷ ಮನೆಗಳಿಗೆ ನಲ್ಲಿ ನೀರು ಸಂಪರ್ಕ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.
ಶಾಸಕ ಎ.ಎಸ್. ಪೊನ್ನಣ್ಣ ಮಾತನಾಡಿ ಮಳೆಗಾಲದಲ್ಲಿ ಹೆದ್ದಾರಿಯಲ್ಲಿ ಅಡಚಣೆ ಉಂಟಾಗದಂತೆ ಗಮನಹರಿಸಬೇಕು. ಕರ್ತೋಜಿ ಬಳಿ ಗುಡ್ಡ ಕುಸಿತ ಹಾಗೂ ಕೊಯನಾಡು ಬಳಿ ಪ್ರವಾಹ ಉಂಟಾಗದಂತೆ ಮುನ್ನೆಚ್ಚರ ವಹಿಸಬೇಕು ಎಂದು ಸೂಚಿಸಿದರು.

ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಮಾತನಾಡಿ ಮುಂಗಾರು ಎದುರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದೆ. ಈಗಾಗಲೇ ಜಿಲ್ಲಾ ಮಟ್ಟದ ಅಧಿಕಾರಿಗಳ ಜೊತೆ ಸಭೆ ನಡೆಸಲಾಗಿದೆ. ವಿವಿಧ ಇಲಾಖಾ ಹಂತದಲ್ಲಿ ಹಾಗೆಯೇ ತಾಲೂಕು ಮಟ್ಟದಲ್ಲಿಯೂ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಭೋಜೇಗೌಡ ಜಿಲ್ಲಾಡಳಿತ ಭವನ ಬಳಿಯ ತಡೆಗೋಡೆ ಕಾಮಗಾರಿ ಪ್ರಸ್ತಾಪಿಸಿ ಮಾತನಾಡಿ ತಡೆಗೋಡೆ ನಿರ್ಮಾಣ ಮಾಡಿದ ಟೆಂಡರ್‌ದಾರರನ್ನು ಕಪ್ಪುಪಟ್ಟಿಗೆ ಸೇರಿಸುವಂತೆ ಸೂಚಿಸಿದರು.
ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಜಿಲ್ಲೆಯ ಆರು ಕಡೆಗಳಲ್ಲಿ ಆಶ್ರಯ ವಸತಿ ಯೋಜನೆಯಡಿ ಮನೆಗಳ ನಿರ್ಮಾಣ ಸಂಬಂಧ ಸುಮಾರು ೨೧ ಎಕರೆ ಭೂಮಿ ಗುರುತಿಸಲಾಗಿದೆ. ಆ ನಿಟ್ಟಿನಲ್ಲಿ ಗ್ರಾ.ಪಂ.ಮಟ್ಟದಲ್ಲಿ ನಿವೇಶನ ರಹಿತರಿಗೆ ನಿವೇಶನ ಕಲ್ಪಿಸಿ ವಸತಿ ಯೋಜನೆ ಅನುಷ್ಠಾನಗೊಳಿಸಲಾಗುವುದು. ಗ್ರಾ.ಪಂ.ವ್ಯಾಪ್ತಿಯಲ್ಲಿ ನಿವೇಶನ ರಹಿತರನ್ನು ಗುರುತಿಸಿ ಹಂಚಿಕೆ ಮಾಡಬೇಕಿದೆ ಎಂದರು.

ಮಾದಾಪುರ ಬಳಿಯ ಜಂಬೂರಿನಲ್ಲಿ ಈಗಾಗಲೇ ಪ್ರಾಕೃತಿಕ ವಿಕೋಪದಡಿ ನೀಡಲಾಗಿರುವ ಬಡಾವಣೆಯಲ್ಲಿ ಕುಡಿಯುವ ನೀರಿಗೆ ತೊಂದರೆಯಾಗುತ್ತಿದ್ದು, ಈ ಬಗ್ಗೆ ಗಮನಹರಿಸಬೇಕಿದೆ ಎಂದು ಶಾಸಕ ಮಂಥರ್‌ಗೌಡ ಹೇಳಿದರು.
ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಮಾತನಾಡಿ ಹೆದ್ದಾರಿಯಲ್ಲಿ ಟಿಂಬರ್ ಲಾರಿಗಳನ್ನು ನಿಯಂತ್ರಿಸಬೇಕು. ಮನೆ ನಿರ್ಮಾಣಕ್ಕೆ ಕೇರಳದಿಂದ ಜಲ್ಲಿ ಬರುತ್ತಿಲ್ಲ. ವಸತಿ ಯೋಜನೆಗಳಿಗೆ ಯಾವುದೇ ತೊಂದರೆಯಾಗದಂತೆ ಗಮನಹರಿಸಬೇಕು ಎಂದರು.

ಶಾಸಕ ಎ.ಎಸ್.ಪೊನ್ನಣ್ಣ ಮಧ್ಯಪ್ರವೇಶಿಸಿ ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಇನ್ನೂ ಹಲವು ಗ್ರಾಮಗಳ ಮನೆಗಳಿಗೆ ಜಲಜೀವನ್ ಮಿಷನ್ ಯೋಜನೆ ತಲುಪಬೇಕಿದೆ ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಅರ್ಹರಿಗೆ ಪೌಷ್ಠಿಕ ಆಹಾರ ವಿತರಿಸಬೇಕು. ಕಾರ್ಯಕ್ರಮಗಳನ್ನು ಅರ್ಹರಿಗೆ ತಲುಪಿಸುವಂತೆ ನಿರ್ದೇಶನ ನೀಡಿದರು. ಪಡಿತರ ಚೀಟಿಗಾಗಿ ಸಲ್ಲಿಸಿರುವ ಅರ್ಜಿಗಳನ್ನು ಪರಿಶೀಲಿಸಿ ಪಡಿತರ ಚೀಟಿ ನೀಡಬೇಕು. ಭಾರತ ಸಂಚಾರ ನಿಗಮದಿಂದ ಅಗತ್ಯವಿರುವ ಕಡೆಗಳಲ್ಲಿ ಟವರ್ ನಿರ್ಮಾಣ ಮಾಡಿ ಎಲ್ಲೆಡೆ ನೆಟ್‌ವರ್ಕ್ ಲಭ್ಯವಾಗುವಂತೆ ಮಾಡಬೇಕು. ಮಳೆಗಾಲದಲ್ಲಿ ರಸಗೊಬ್ಬರ ಸೇರಿದಂತೆ ಬಿತ್ತನೆ ಬೀಜ ವಿತರಣೆಯಲ್ಲಿ ಯಾವುದೇ ರೀತಿಯ ವ್ಯತ್ಯಯ ಉಂಟಾಗದಂತೆ ಗಮನಹರಿಸಬೇಕು ಎಂದು ಪ್ರತಾಪ್ ಸಿಂಹ ಸೂಚಿಸಿದರು.

ನಾಗರಹೊಳೆ ವ್ಯಾಪ್ತಿಯಲ್ಲಿ ಸದ್ಯಕ್ಕೆ ತಾತ್ಕಾಲಿಕ ಅಂಗನವಾಡಿ ನಿರ್ಮಾಣ ಮಾಡಿ ಮಕ್ಕಳಿಗೆ ಸರಿಯಾದ ಶಿಕ್ಷಣ ಕೊಡಿಸುವಂತೆ ಶಾಸಕ ಎ.ಎಸ್.ಪೊನ್ನಣ್ಣ ಅಧಿಕಾರಿಗಳಿಗೆ ಸೂಚಿಸಿದರು.

ಜಿ.ಪಂ.ಸಿಇಒ ಡಾ.ಎಸ್.ಆಕಾಶ್, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರರಾಜ್, ಡಿಎಫ್‌ಒ ಶಿವರಾಮ್ ಬಾಬು, ಉಪ ವಿಭಾಗಾಧಿಕಾರಿ ಯತೀಶ್ ಉಲ್ಲಾಳ್, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net