ಕಾಲಹರಣ ಮಾಡದೇ ಕೆರೆ ತುಂಬಿಸಿ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸೂಚನೆ

Disha Committee Meeting Mandya
Published on

ಮಂಡ್ಯ: ಕೃಷ್ಣರಾಜಸಾಗರ ಅಣೆಕಟ್ಟೆ ಭರ್ತಿಯಾಗಿರುವುದರಿಂದ ಕಾಲಹರಣ ಮಾಡದೇ ಕೂಡಲೇ ಜಿಲ್ಲೆಯ ಕೆರೆ ಕಟ್ಟೆಗಳಿಗೆ ನೀರು ತುಂಬಿಸಿ ಎಂದು ಅಧಿಕಾರಿಗಳಿಗೆ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ಸೂಚನೆ ನೀಡಿದರು.

ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ದಿಶಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇನ್ನೂ ಎರಡು ತಿಂಗಳು ಮಳೆ ಬರಲಿದೆ. ಈ ಹಿನ್ನೆಲೆಯಲ್ಲಿ ಕೆರೆ ಕಟ್ಟೆ ನೀರು ಹರಿಸಿ. ಇಲ್ಲದಿದ್ದರೆ ತಮಿಳುನಾಡಿನವರು ನೀರಿಗೆ ಡಿಮಾಂಡ್ ಮಾಡುತ್ತಾರೆ ಎಂದರು.

ಕಾವೇರಿ ನೀರಾವರಿ ನಿಗಮದ ಅಧೀಕ್ಷಕ ಇಂಜಿನಿಯರ್ ರಘುರಾಮ್ ಮಾತನಾಡಿ, ನಿಗಮದ ವ್ಯಾಪ್ತಿಯಲ್ಲಿ 224 ಕೆರೆಗಳಿವೆ. ಈ ಪೈಕಿ ಬಹುತೇಕ ನೀರಿದೆ. 17 ಕೆರೆಯಲ್ಲಿ ಮಾತ್ರ ಶೇ.25ರಷ್ಟು ನೀರಿನ ಸಂಗ್ರಹವಿದೆ ಎಂದರು. ಹೇಮಾವತಿ ನೀರಾವರಿ ನಿಗಮದ ಇಂಜಿನಿಯರ್ ಮಾತನಾಡಿ, ಹೇಮಾವತಿ ವ್ಯಾಪ್ತಿಯಲ್ಲಿ 271 ಕೆರೆ ಇದ್ದು, ಶೇ.70ರಷ್ಟು ಭಾಗ ತುಂಬಿವೆ. ಕೆ.ಆರ್.ಪೇಟೆ, ನಾಗಮಂಗಲ, ಪಾಂಡವಪುರ ತಾಲೂಕಿನ ಕೆರೆಗಳಿಗೆ ಐಸಿಸಿ ಸಭೆ ನಂತರ ತುಂಬಿಸಲಾಗುವುದು ಎಂದು ವಿವರಿಸಿದರು.

ಈ ವೇಳೆ ವಿಧಾನ ಪರಿಷತ್ ಸದಸ್ಯ ವಿವೇಕಾನಂದ ಮಾತನಾಡಿ, ಕೊಪ್ಪ ಹೋಬಳಿಯಲ್ಲಿ ಕೆರೆ ತುಂಬಿಸಿಲ್ಲ. ಸಭೆಗೆ ಸುಳ್ಳು ಮಾಹಿತಿ ಕೊಡಬೇಡಿ. ಕೆರೆಯಲ್ಲಿ ನೀರಿಲ್ಲದೆ ಜನ, ಜಾನುವಾರುಗಳಿಗೆ ಸಮಸ್ಯೆಯಾಗುತ್ತಿದೆ ಎಂದರು. ಕೆ.ಆರ್.ಪೇಟೆ ಶಾಸಕ ಎಚ್.ಟಿ.ಮಂಜು ಹಾಗೂ ದಿಶಾ ಸಮಿತಿ ಸದಸ್ಯ, ಮಾಜಿ ಶಾಸಕ ಡಾ.ಕೆ.ಅನ್ನದಾನಿ ಇದಕ್ಕೆ ದನಿಗೂಡಿಸಿ ತಮ್ಮ ತಾಲೂಕು ವ್ಯಾಪ್ತಿಯಲ್ಲಿ ಕೆರೆಗೆ ನೀರು ತುಂಬಿಸಿ ಎಂದರು. ಜಿಲ್ಲಾಧಿಕಾರಿ ಡಾ.ಕುಮಾರ ಅವರು, ಕಾವೇರಿ ನೀರಾವರಿ ನಿಗಮ ವ್ಯಾಪ್ತಿಯ ಸಹಾಯಕ ಇಂಜಿನಿಯರ್‌ಗಳ ಸಭೆ ಕರೆದು ಕೆರೆಗಳನ್ನು ತುಂಬಿಸಲು ಕ್ರಮಕೈಗೊಳ್ಳುವಂತೆ ಅಧೀಕ್ಷಕ ಇಂಜಿನಿಯರ್ ರಘುರಾಮ್‌ಗೆ ಸೂಚಿಸಿದರು.

ಮಳವಳ್ಳಿ ತಾಲೂಕಿಗೆ ನೀರು ಬರುವ ಹೆಬ್ಬಕವಾಡಿ ನಾಲೆಯ ಕಾಮಗಾರಿ ಇನ್ನೂ ಮುಗಿದಿಲ್ಲ. ಇನ್ನು ನೀರು ಬರುವುದಾದರೂ ಹೇಗೆ ಎಂದು ಮಾಜಿ ಶಾಸಕ ಕೆ.ಅನ್ನದಾನಿ ಪ್ರಶ್ನಿಸಿದಾಗ ಉತ್ತರಿಸಿದ ಅಧೀಕ್ಷಕ ಇಂಜಿನಿಯರ್ ರಘುರಾವ, ಜು.15ರಿಂದ ದುರಸ್ತಿ ಕೆಲಸವನ್ನು ನಿಲ್ಲಿಸಲಾಗುವುದು. ನಂತರದಲ್ಲಿ ನೀರು ಹರಿಸಿ ಕೆರೆಗಳನ್ನು ತುಂಬಿಸಲಾಗುವುದು ಎಂದು ತಿಳಿಸಿದರು.

ಮಳೆಯಿಂದ ಹಾನಿಗೊಳಗಾದ ಮನೆಗಳಿಗೆ ಕೇವಲ 20 ರಿಂದ 30 ಸಾವಿರ ರೂ ನೀಡಿದರೆ ನಿರಾಶ್ರಿತರು ಆ ಹಣದಿಂದ ಪುನಃ ಮನೆ ಕಟ್ಟಲು ಸಾಧ್ಯವೇ?. ಪರಿಹಾರದ ಹಣವನ್ನು ಹೆಚ್ಚು ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡುವಂತೆ ಜಿಲ್ಲಾಧಿಕಾರಿಗೆ ಶಾಸಕ ಎಚ್.ಟಿ. ಮಂಜು ಹೇಳಿದರು. ಅನ್ನದಾನಿ ಮಾತನಾಡಿ, ರಾಜ್ಯ ಮತ್ತು ಕೇಂದ್ರದ ಸಹಯೋಗದಲ್ಲಿ ಜಿಲ್ಲೆಯಲ್ಲಿ ನಡೆಯುತ್ತಿರುವ ವೃದ್ಧಾಶ್ರಮಗಳಿಗೆ 18 ಲಕ್ಷ (ಕೇಂದ್ರ ವಲಯ) ರೂ. ಹಾಗೂ ರಾಜ್ಯ ಸರ್ಕಾರ 12 ಲಕ್ಷ (ರಾಜ್ಯ ವಲಯ) ರೂ. ನೀಡುತ್ತಿದ್ದು, ಇದು ಸಾಲದಾಗಿದೆ. ಆದ್ದರಿಂದ ಈ ಸಹಾಯ ಧನವನ್ನು ಹೆಚ್ಚಳ ಮಾಡುವಂತೆ ಸಂಬಂಧಿಸಿದ ಮನವಿ ಮಾಡಿದರು.

ಹೃದಯಾಘಾತಕ್ಕೆ 22 ಸಾವು: ಜಿಲ್ಲೆಯಲ್ಲಿ ಕಳೆದ ಮೂರು ತಿಂಗಳಲ್ಲಿ 22 ಜನ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಇವರಲ್ಲಿ 50 ವರ್ಷ ಮೇಲ್ಪಟ್ಟವರೇ ಹೆಚ್ಚಾಗಿದ್ದಾರೆ. ಹಾಸನದಂತೆ ಇಲ್ಲಿ ಯಾವುದೇ ಮಧ್ಯ ವಯಸ್ಸಿನವರು ಮೃತಪಟ್ಟಿಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಮೋಹನ್ ಸಭೆಗೆ ತಿಳಿಸಿದಾಗ, ಮಿಮ್ಸ್‌ನಲ್ಲಿ ಹೃದ್ರೋಗ ತಜ್ಞರು ಇಲ್ಲವೇ ಎಂದು ಸಚಿವ ಎಚ್.ಡಿ. ಕುಮಾರಸ್ವಾಮಿ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿ ಡಾ.ಕುಮಾರ ಅವರು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾದರೆ ಹೃದ್ರೋಗ ತಜ್ಞರನ್ನು ನೇಮಕ ಮಾಡಿಕೊಳ್ಳಬಹುದಾಗಿದೆ. ಪ್ರಸ್ತುತ ಹೃದ್ರೋಗ ತಜ್ಞರು ಇಲ್ಲದ್ದರಿಂದ ಮೈಸೂರಿನ ಜಯದೇವ ಆಸ್ಪತ್ರೆಗೆ ರೋಗಿಗಳನ್ನು ಕಳುಹಿಸಲಾಗುತ್ತಿದೆ ಎಂದರು.

ಸರ್ಕಾರದ ಗಮನಕ್ಕೆ ತನ್ನಿ: ಅಂಗನವಾಡಿ ಮತ್ತು ಶಾಲಾ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿರುವ ಮೊಟ್ಟೆ ದರ 7 ರೂ ಆಗಿದೆ. ರಾಜ್ಯ ಸರ್ಕಾರ ಕೇವಲ 6 ರೂ. ನೀಡುತ್ತಿದ್ದು, ಉಳಿಕೆ ಹಣವನ್ನು ಆಯಾ ಶಾಲೆಯ ಮುಖ್ಯ ಶಿಕ್ಷಕರೇ ಭರಿಸುತ್ತಿದ್ದಾರೆ ಎಂಬ ಮಾಹಿತಿ ಇದೆ. ಉಳಿದ 1 ರೂ.ಗಳನ್ನು ಅವರಿಗೆ ಕೊಡುವುದು ಯಾವಾಗ?. ಆದ್ದರಿಂದ 7 ರೂ. ನೀಡುವಂತೆ ಸರ್ಕಾರಕ್ಕೆ ಪತ್ರ ಬರೆಯಿರಿ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಸಲಹೆ ನೀಡಿದರು.

ಸಭೆಯಲ್ಲಿ ಶಾಸಕ ರವಿಕುಮಾರ್ ಗಣಿಗ, ಜಿಪಂ ಸಿಇಒ ಕೆ.ಆರ್.ನಂದಿನಿ, ಜಿಲ್ಲಾ ಪೊಲೀಸ್ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ ಇತರರಿದ್ದರು.

ಶಾಸಕ ರವಿಕುಮಾರ್ ಗಣಿಗ ತರಾಟೆ

ಬೆಂಗಳೂರು-ಮೈಸೂರು ದಶಪಥ ರಾಷ್ಟ್ರೀಯ ಹೆದ್ದಾರಿಗೆ ಸಂಬಂಧಿಸಿದಂತೆ ಅಂಡರ್‌ಪಾಸ್ ಕಾಮಗಾರಿ ಪ್ರಾರಂಭಿಸದಿರುವುದು ಹಾಗೂ ಅವೈಜ್ಞಾನಿಕವಾಗಿ ಮೇಲ್ಸೇತುವೆ ಅಳವಡಿಸಿದ್ದಾರೆಂದು ಶಾಸಕ ರವಿಕುಮಾರ್ ಗಣಿಗ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಮಂಡ್ಯ ನಗರದ ಸಾರಿಗೆ ಬಸ್ ನಿಲ್ದಾಣ ಹಾಗೂ ಸರ್ಕಾರಿ ಮಹಿಳಾ ಕಾಲೇಜಿನ ಸಮೀಪ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಹಾಕಿರುವ ಸ್ಕೈವಾಕ್ ಮೇಲ್ಸೇತುವೆ ಅವೈಜ್ಞಾನಿಕವಾಗಿದೆ. ಒಂದೆಡೆ ವಿದ್ಯುತ್ ಪರಿವರ್ತಕ ಇರುವ ಕಡೆ ಹತ್ತಲು ಜಾಗ ಮಾಡಿದ್ದಾರೆ. ಇನ್ನೊಂದೆಡೆ ಮೆಟ್ಟಿಲು ಎತ್ತರದಲ್ಲಿದೆ. ತಲೆಯಲ್ಲಿ ಮಿದುಳು ಇದ್ದರೆ ಇಂತಹ ಕೆಲಸ ಮಾಡುವುದಿಲ್ಲ. ಇವರ ಅವೈಜ್ಞಾನಿಕ ಕೆಲಸದಿಂದ ವೃದ್ಧರು ಸೇರಿದಂತೆ ಯಾರೂ ಮೆಟ್ಟಿಲು ಹತ್ತಲು ಆಗುತ್ತಿಲ್ಲ ಎಂದರು. ನಗರಸಭೆ ಅಧ್ಯಕ್ಷ ಎಂ.ವಿ.ಪ್ರಕಾಶ್, ಸ್ಕೈವಾಕ್ ಮೇಲ್ಸುತುವೆಗಳಿಗೆ ವಿದ್ಯುತ್ ವ್ಯವಸ್ಥೆ ಇಲ್ಲದ ಕಾರಣ ರಾತ್ರಿ ವೇಳೆ ಕಾನೂನುಬಾಹಿರ ಚಟುವಟಿಕೆಗಳು ನಡೆಯುತ್ತಿವೆ. ಇದು ಉಪಯೋಗಕ್ಕೆ ಬರಬೇಕಾದರೆ ಲಿಫ್ಟ್ ವ್ಯವಸ್ಥೆ ಮಾಡಬೇಕಾಗಿದೆ ಎಂದರು.

ಮಂಡ್ಯ ತಾಲೂಕಿನ ಹನಕೆರೆ ಹಾಗೂ ಶ್ರೀರಂಗಪಟ್ಟಣ ತಾಲೂಕು ಗೌಡಹಳ್ಳಿ ಬಳಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಗೆ ಅಂಡರ್‌ಪಾಸ್ ಅವಶ್ಯಕವಾಗಿ ಬೇಕಾಗಿದೆ. ಹನಕೆರೆ ಬಳಿ ಅಂಡರ್‌ಪಾಸ್ ಮಾಡುವಂತೆ ಶಾಸಕ ರವಿಕುಮಾರ್ ಅವರು ಧರಣಿ ನಡೆಸಿದಾಗ, ಎನ್‌ಎಚ್ ಅಧಿಕಾರಿಗಳು ಅಂಡರ್‌ಪಾಸ್ ಮಂಜೂರು ಮಾಡಿದ್ದಾರೆ. ಆದರೆ, ಇನ್ನೂ ಕಾಮಗಾರಿ ಆರಂಭಿಸಿಲ್ಲ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಸಚಿವರ ಗಮನಕ್ಕೆ ತಂದರು.

ಬೆಂ-ಮೈ ರಾಷ್ಟ್ರೀಯ ಹೆದ್ದಾರಿಯಲ್ಲಿ 2023ರಲ್ಲಿ-125, 2024ರಲ್ಲಿ-88, 2025ರ ಜನವರಿಯಿಂದ ಈವರೆಗೆ 45 ಜನರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಇದಕ್ಕೆ ಅತಿವೇಗವೇ ಕಾರಣ. ಈ ಹಿನ್ನೆಲೆಯಲ್ಲಿ ಅತಿವೇಗ ನಿಯಂತ್ರಿಸಲು ಹೆಚ್ಚು ಸ್ಥಳಗಳಲ್ಲಿ ಸ್ಪೀಡ್ ಗೇಜಿಂಗ್ ಕ್ಯಾಮೆರಾ ಅಳವಡಿಸಬೇಕಾಗಿದೆ. ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ತಾವು ಸೂಚನೆ ನೀಡುವಂತೆ ಮನವಿ ಮಾಡಿದರು.

Disha Committee Meeting Mandya

100 ಕೋಟಿ ರೂ ವೆಚ್ಚದಲ್ಲಿ ಅಭಿವೃದ್ಧಿ

ಕೇಂದ್ರ ಸರ್ಕಾರದ ಸ್ವದೇಶ ದರ್ಶನ 2.0 ಯೋಜನೆಯಡಿ 100 ಕೋಟಿ ರೂ ವೆಚ್ಚದಲ್ಲಿ ಶ್ರೀರಂಗಪಟ್ಟಣ ಸ್ಮಾರಕಗಳ ಅಭಿವೃದ್ಧಿ ಪಡಿಸುವಂತೆ ಕೇಂದ್ರ ಸರ್ಕಾರದ ಪ್ರವಾಸೋದ್ಯಮ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಶ್ರೀರಂಗಪಟ್ಟಣ ತಾಲೂಕಿನಲ್ಲಿ ಇರುವ ಸ್ಮಾರಕಗಳನ್ನು ಅಭಿವೃದ್ಧಿ ಪಡಿಸುವುದರ ಜತೆಗೆ ಪ್ರವಾಸೋದ್ಯಮಕ್ಕೆ ಹೆಚ್ಚು ಒತ್ತು ನೀಡಲಾಗುವುದು. ಇದರಿಂದ ಸ್ಥಳೀಯವಾಗಿ ಹೆಚ್ಚಿನ ಉದ್ಯೋಗ ಸೃಷ್ಠಿಯಾಗಲಿದೆ ಎಂದು ಸಚಿವ ಎಚ್.ಡಿ.ಕುಮಾರಸ್ವಾಮಿ ಸಭೆಯಲ್ಲಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net