ರೈತರಿಗೆ ನೀರು ಕೊಡದೇ ಏನ್ಮಾಡ್ತಿದ್ದೀರಿ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ತರಾಟೆ

Disha Committee Meeting Mandya
Published on

ಮಂಡ್ಯ: ಕೆಆರ್‌ಎಸ್ ಅಣೆಕಟ್ಟೆ ಸಂಪೂರ್ಣ ಭರ್ತಿಯಾಗಿದೆ. ತಮಿಳುನಾಡಿಗೆ ಹೆಚ್ಚು ನೀರು ಹರಿದು ಹೋಗಿದೆ. ಇನ್ನೂ ಮದ್ದೂರು, ಮಳವಳ್ಳಿ ತಾಲೂಕಿನ ಕೆರೆಗಳನ್ನು ತುಂಬಿಸಿಲ್ಲ. ಸೆಪ್ಟಂಬರ್ ತಿಂಗಳಿಗೆ ಕಾಲಿಡುತ್ತಿದ್ದೇವೆ. ಆದರೂ ಭತ್ತದ ನಾಟಿಗೆ ನೀರು ಕೊಟ್ಟಿಲ್ಲ. ಇಷ್ಟು ದಿನದಿಂದ ಏನು ಮಾಡುತ್ತಿದ್ದೀರಿ ಎಂದು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳನ್ನು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ತರಾಟೆಗೆ ತೆಗೆದುಕೊಂಡರು.

ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ದಿಶಾ ಸಮಿತಿ ಸಭೆಯಲ್ಲಿ ನಿಗಮದ ಅಧಿಕಾರಿಗಳ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದರು. ಕಳೆದ ವರ್ಷ ಬರಗಾಲ ಇತ್ತು. ಈ ವರ್ಷ ಉತ್ತಮ ಮಳೆಯಾಗಿದೆ. ಆದರೂ ಏಕೆ ಕೊನೆಯ ಭಾಗಕ್ಕೆ ನೀರು ಹೋಗುತ್ತಿಲ್ಲವೆಂದು ಪ್ರಶ್ನಿಸಿದರು. ಇದಕ್ಕೆ ನಿಗಮದ ಅಧಿಕಾರಿಗಳು ಸಬೂಬು ಹೇಳಲು ಮುಂದಾದಾಗ ತರಾಟೆಗೆ ತೆಗೆದುಕೊಂಡಾಗ, ಈ ಹಿಂದೆ ಇಂತಹ ಸಮಸ್ಯೆ ಇರಲಿಲ್ಲ. ಈ ಬಾರಿ ಏಕೆ ಆಗುತ್ತಿದೆ. ಕೂಡಲೇ ಸಮಸ್ಯೆ ಬಗೆಹರಿಯಬೇಕು. ಕೊನೆ ಭಾಗಕ್ಕೆ ನೀರು ಕೊಡಬೇಕು ಎಂದು ತಾಕೀತು ಮಾಡಿದರು.

ಹಕ್ಕುಪತ್ರದ ಆಧಾರ ಪಡೆಯಿರಿ: ನಗರದಲ್ಲಿ ಬಡವರಿಗೆ ಮನೆ ನಿರ್ಮಿಸಿಕೊಡಲು ಇರುವ ಯೋಜನೆ ನನೆಗುದಿಗೆ ಬಿದ್ದಿರುವ ಬಗ್ಗೆ ಸಭೆಯಲ್ಲಿ ಚರ್ಚೆಗೆ ಕಾರಣವಾಯಿತು. ಶಾಸಕ ರವಿಕುಮಾರ್ ಗಣಿಗ ವಿಷಯ ಪ್ರಸ್ತಾಪಿಸಿ, ಮಂಡ್ಯ ಗಾಂಧಿನಗರದಲ್ಲಿ 225 ಫಲಾನುಭವಿಗಳಿಗೆ ಮನೆ ಕಟ್ಟಿಕೊಳ್ಳಲು ಆಧಾರವಿಲ್ಲವೆನ್ನುವ ಕಾರಣಕ್ಕೆ ಬ್ಯಾಂಕ್‌ನಿಂದ ಸಾಲ ಕೊಡುತ್ತಿಲ್ಲ. ನಾನು ವೈಯಕ್ತಿಕವಾಗಿ ಹಣ ಕೊಡುವುದಾಗಿಯೂ ಹೇಳಿದ್ದೇನೆ. ಇದಕ್ಕೆ ಪೂರಕವಾಗಿ ಬ್ಯಾಂಕ್‌ನಿಂದಲೂ ಸಾಲ ಕೊಟ್ಟರೆ ಅಷ್ಟು ಕುಟುಂಬಕ್ಕೆ ಭದ್ರತೆ ಒದಗಿಸಿದಂತಾಗುತ್ತದೆ ಎಂದರು. ಎಚ್‌ಡಿಕೆ ಪ್ರತಿಕ್ರಿಯಿಸಿ, ಬ್ಯಾಂಕ್ ಅಧಿಕಾರಿಗಳು ಹಕ್ಕುಪತ್ರದ ಆಧಾರದ ಮೇಲೆ ಸಾಲ ಕೊಡಿ. ಈ ಬಗ್ಗೆ ಪರಿಶೀಲನೆ ನಡೆಸಿ ಎಂದು ಸೂಚನೆ ನೀಡಿದರು.

ಮಿಮ್ಸ್ ಪಕ್ಕದ ತಮಿಳುಕಾಲನಿ ನಿವಾಸಿಗಳಿಗೆ ಚಿಕ್ಕಮಂಡ್ಯ ಸಮೀಪ ಮನೆ ನಿರ್ಮಿಸಿಕೊಡಲಾಗಿದೆ. ಆದರೆ ಜಿ+3 ಎನ್ನುವ ಕಾರಣಕ್ಕೆ ಹೋಗುತ್ತಿಲ್ಲ. ಈ ಜಾಗ ಖಾಲಿಯಾದರೆ ಮಿಮ್ಸ್‌ಗೆ ಸೇರಿಸಿಕೊಂಡು ಒಂದಷ್ಟು ಕಾರ್ಯಚಟುವಟಿಕೆ ಮಾಡಬಹುದು ಎಂದು ಡಿಸಿ ಹೇಳಿದರು. ಎಚ್‌ಡಿಕೆ ಪ್ರತಿಕ್ರಿಯಿಸಿ, ಫಲಾನುಭವಿಗಳ ಮನವೊಲಿಸಿ ಚಿಕ್ಕಮಂಡ್ಯಕ್ಕೆ ತೆರಳುವಂತೆ ಮಾಡಿ. ಅವರಿಗೆ ಬೇಕಾದ ಸೌಲಭ್ಯವನ್ನು ಒದಗಿಸಿ. ಜಾಗ ಸಿಕ್ಕರೆ ಮಿಮ್ಸ್ ಅಭಿವೃದ್ಧಿ ಮಾಡಬಹುದು ಎಂದರು.

23 ಕೋಟಿ ರೂ ವೆಚ್ಚದ ಯೋಜನೆ: ಕಾವೇರಿ ನೀರು ಕಲುಷಿತಗೊಳ್ಳುತ್ತಿರುವ ಬಗ್ಗೆ ಕುಮಾರಸ್ವಾಮಿ ಸಭೆಯಲ್ಲಿ ಪ್ರಸ್ತಾಪಿಸಿದರು. ಇದಕ್ಕೆ ಉತ್ತರಿಸಿದ ಡಿಸಿ, ಕೊಳಚೆ ಕಾವೇರಿ ನೀರಿಗೆ ಸೇರುತ್ತಿರುವುದರಿಂದ ಸಮಸ್ಯೆಯಾಗುತ್ತಿದೆ. ಈ ನಿಟ್ಟಿನಲ್ಲಿ ರಾಜ್ಯಸರ್ಕಾರದಿಂದ ನಿಯೋಜಿಸಿರುವ ಸಮಿತಿ ಪರಿಶೀಲಿಸಿ ತೆಗೆದುಕೊಳ್ಳಬೇಕಾದ ಕ್ರಮದ ಬಗ್ಗೆ ವರದಿ ನೀಡಲಿದೆ. ಅದರಂತೆ 23 ಕೋಟಿ ರೂ ವೆಚ್ಚದಲ್ಲಿ ಯೋಜನೆ ಸಿದ್ಧಪಡಿಸಿ ಪ್ರಸ್ತಾವನೆ ಸಲ್ಲಿಸಲಾಗುತ್ತಿದೆ ಎಂದು ವಿವರಿಸಿದರು.

ಜಿಲ್ಲೆಯಲ್ಲಿ ಕೆಲವರಿಗೆ ಮಾಸಾಶನ ಸ್ಥಗಿತಗೊಂಡಿರುವ ಕುರಿತು ಕೆ.ಆರ್.ಪೇಟೆ ಶಾಸಕ ಎಚ್.ಟಿ.ಮಂಜು ಚರ್ಚೆ ನಡೆಸಿದರು. ಮರಣ ಹೊಂದಿರುವವರ ಪಿಂಚಣಿ ಸ್ಥಗಿತಗೊಂಡರೆ ಸಮಸ್ಯೆ ಇಲ್ಲ. ಆದರೆ ಅರ್ಹರಿಗೂ ಹಣ ಬರುತ್ತಿಲ್ಲ ಎಂದರು. ಇದಕ್ಕೆ ಸ್ಪಷ್ಟನೆ ನೀಡಿದ ಡಿಸಿ ಡಾ.ಕುಮಾರ, ಎರಡು ರೀತಿಯಲ್ಲಿ ಇಂತಹ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಎರಡು ಮೂರು ತಿಂಗಳು ಪಿಂಚಣಿ ಪಡೆಯದೆ ಹಾಗೂ ಅಧಿಕಾರಿಗಳು ಮನೆಗೆ ಭೇಟಿ ನೀಡಿ ಪರಿಶೀಲಿಸಿದಾಗ ಫಲಾನುಭವಿ ಇಲ್ಲದಿದ್ದರೆ ಪಿಂಚಣಿ ಸ್ಥಗಿತಗೊಂಡಿರುತ್ತವೆ. ಜತೆಗೆ ಮೊದಲಿನಿಂದ ಪಿಂಚಣಿ ಬರುತ್ತಿರುವ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡದಿದ್ದರೂ ಹಣ ಬರುವುದಿಲ್ಲ. ಆದಾಗ್ಯೂ ಈ ಬಗ್ಗೆ ಗಮನಹರಿಸಲಾಗುವುದು ಎಂದರು.

ಸಭೆಯಲ್ಲಿ ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್, ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಕೇಂದ್ರ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಕೃಷ್ಣಯ್ಯ, ಕೇಂದ್ರ ಸಚಿವರ ಕಾರ್ಯದರ್ಶಿ ತೇಜಸ್ವಿನಾಯಕ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net