ಪರಿಷತ್ ನಾಮಕರಣ ಬೆನ್ನಲ್ಲೇ ಬಿಜೆಪಿಯಲ್ಲಿ ಅಸಮಾಧಾನ

Vishwanath
Published on

ಬೆಂಗಳೂರು: ವಿಧಾನ ಪರಿಷತ್​ಗೆ ನಾಮನಿರ್ದೇಶಿತ ಸದಸ್ಯರಾಗಲು ತೆರೆಮರೆಯಲ್ಲಿ ಸತತ ಪ್ರಯತ್ನ ನಡೆಸಿದ್ದ ಆಕಾಂಕ್ಷಿಗಳಲ್ಲಿ ಅಸಮಾಧಾನ ಮನೆ ಮಾಡಿದೆ. ಬಿಜೆಪಿ ನಾಯಕರಾದ ನಿರ್ಮಲ್​ಕುಮಾರ್ ಸುರಾನ, ಜಗ್ಗೇಶ್, ಗೋ.ಮಧುಸೂದನ್, ಪರಮಶಿವಯ್ಯ ಹೆಸರು ಕೊನೆಯವರೆಗೂ ಕೇಳಿ ಬರುತ್ತಿದ್ದವು. ಮಹಿಳಾ ಕೋಟಾದಲ್ಲಿ ತಾರಾ ಅನೂರಾಧ, ಶ್ರುತಿ, ಮಾಳವಿಕಾ ಅವಿನಾಶ್ ಹೆಸರು ಚಾಲ್ತಿಯಲ್ಲಿದ್ದವು. ಇನ್ನು ಸಂಘಟನೆ ನೆಲೆಯಲ್ಲಿ ಬಿಜೆಪಿ ಜಿಲ್ಲಾ ಅಧ್ಯಕ್ಷರೊಬ್ಬರಿಗೆ ಮತ್ತು ಕೇಂದ್ರ ಕಚೇರಿಯಲ್ಲಿ ಕೆಲಸ ಮಾಡುವ ಕಾರ್ಯಕರ್ತರೊಬ್ಬರಿಗೆ ಅದೃಷ್ಟ ಒಲಿಯಬಹುದು ಎನ್ನುವ ಲೆಕ್ಕಾಚಾರ ಇತ್ತು. ಆದರೆ, ಈ ಬಾರಿ ಸಂಘದ ನೆಲೆಯಲ್ಲಿ ಯೋಚಿಸಿದವರಿಗೆ, ಯಾವುದೇ ಲೆಕ್ಕಾಚಾರ ಫಲಿಸಿಲ್ಲ. ಹೈಕಮಾಂಡ್ ಕೂಡ ಸಿಎಂ ಯಡಿಯೂರಪ್ಪ ಅವರ ಶಿಫಾರಸಿಗೆ ಮಣೆ ಹಾಕಿದೆ. ಸಿಎಂ ಯಾರಿಗೂ ಗುಟ್ಟು ಬಿಟ್ಟುಕೊಡದೆ, ಮೌನವಾಗಿದ್ದಕೊಂಡೇ ಎಲ್ಲ್ಲನ್ನೂ ಸಾಧಿಸಿದ್ದಾರೆ ಎನ್ನುವುದು ಪಕ್ಷದೊಳಗಿನ ಒಂದು ಗುಂಪು ಚರ್ಚೆ ನಡೆಸುತ್ತಿದೆ. ಪಕ್ಷದೊಳಗೆ ಮಡುಗಟ್ಟಿರುವ ಅಸಮಾಧಾನ ಚರ್ಚೆಗೆ ಮಾತ್ರ ಸೀಮಿತವಾಗಿದ್ದು, ಇದು ಭಿನ್ನಮತ ಸೃಷ್ಟಿಸುವ ಮಟ್ಟಿಗೆ ಬೆಳೆಯಲಾರದು. ಪಕ್ಷದೊಳಗೆ ಇಂತಹ ಪ್ರಕ್ರಿಯೆ ಸಹಜವಾದದ್ದು ಎಂಬುದು ಬಿಜೆಪಿ ನಾಯಕರ ಸಮರ್ಥನೆ.

ಕಾಂಗ್ರೆಸ್​ನಲ್ಲಿಯೇ ವಿಶ್ವನಾಥ್ ಪುತ್ರ!

ಮೈಸೂರು: ವಿಧಾನ ಪರಿಷತ್​ಗೆ ನಾಮನಿರ್ದೇಶನಗೊಂಡಿರುವ ಎಚ್.ವಿಶ್ವನಾಥ್ ಬಿಜೆಪಿ ಪ್ರತಿನಿಧಿಸುತ್ತಿದ್ದಾರೆ. ಆದರೆ, ಅವರ ಪುತ್ರ ಅಮಿತ್ ದೇವರಹಟ್ಟಿ ಈಗಲೂ ಮೈಸೂರು ಜಿಲ್ಲಾ ಪಂಚಾಯಿತಿಯ ಕಾಂಗ್ರೆಸ್ ಸದಸ್ಯರಾಗಿದ್ದಾರೆ! 2016ರ ಫೆಬ್ರವರಿಯಲ್ಲಿ ನಡೆದ ಜಿಪಂ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಪಡೆದು ಭೇರ್ಯ ಕ್ಷೇತ್ರದಿಂದ ಸ್ಪರ್ಧಿಸಿ ಅಮಿತ್ ಗೆಲುವು ಸಾಧಿಸಿದ್ದರು. ಆಗ ಅವರ ತಂದೆ ವಿಶ್ವನಾಥ್ ಕಾಂಗ್ರೆಸ್​ನಲ್ಲೇ ಇದ್ದರು. ಆನಂತರದ ಬೆಳವಣಿಗೆಯಲ್ಲಿ ವಿಶ್ವನಾಥ್ ಜೆಡಿಎಸ್​ಗೆ ಹೋಗಿ, ಬಿಜೆಪಿಗೆ ಬಂದು ಎಂಎಲ್​ಸಿ ಆದರೂ ಅವರ ಪುತ್ರ ಈಗಲೂ ಕಾಂಗ್ರೆಸ್​ನಲ್ಲೇ ಇರುವುದು ರಾಜಕೀಯ ವಲಯದಲ್ಲಿ ಅಚ್ಚರಿ ಮೂಡಿಸಿದೆ.

ಮಾತಿಗೆ ತಪ್ಪದ ಮಗ ಹಾಗೂ ನಾಯಕ ಎಂಬುದನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಾಬೀತು ಮಾಡಿದ್ದಾರೆ. ನಾನು ಮಂತ್ರಿ ಪದವಿ ಬಯಸಿ ಬಿಜೆಪಿಗೆ ಸೇರಲಿಲ್ಲ. ನನಗೆ ಮಂತ್ರಿ ಸ್ಥಾನ ನೀಡುವುದು ಸಿಎಂ ವಿವೇಚನೆಗೆ ಬಿಟ್ಟಿದ್ದು. ಅದು ಅವರ ಪರಮಾಧಿಕಾರವಾಗಿದೆ. | ಎಚ್.ವಿಶ್ವನಾಥ್ ಎಂಎಲ್​ಸಿ

ಸಚಿವ ಸ್ಥಾನ ಸಿಗಲ್ಲ!

ಮೈಸೂರು: ನನ್ನ ಮಾತು ಕೇಳಿದ್ದರೆ ಈಗ ಎಚ್.ವಿಶ್ವನಾಥ್ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು ಆಗಿರುತ್ತಿದ್ದರು. ಇದೀಗ ಕಷ್ಟಪಟ್ಟು ವಿಧಾನ ಪರಿಷತ್​ಗೆ ನಾಮನಿರ್ದೇಶನಗೊಂಡಿದ್ದಾರೆ. ಆದರೆ ಈ ಸಂದರ್ಭದಲ್ಲಿ ಮಂತ್ರಿಯಾಗುವುದು ಸ್ವಲ್ಪ ಕಷ್ಟ ಎಂದು ಸಂಸದ ವಿ.ಶ್ರೀನಿವಾಸಪ್ರಸಾದ್ ಅಭಿಪ್ರಾಯಪಟ್ಟರು. ಗá-ರá-ವಾರ ತಮ್ಮ ನಿವಾಸದಲ್ಲಿ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಚ್.ವಿಶ್ವನಾಥ್ ಇದೀಗ ಅಟ್ಟಕ್ಕೆ ಏರಿದ್ದಾರೆ. ಸ್ವರ್ಗಕ್ಕೆ ಏರೋದು ಬಾಕಿ ಇದೆ. ಅವರು ಛಲ ಬಿಡದ ತ್ರಿವಿಕ್ರಮ. ಆದರೆ ಸರ್ಕಾರದಲ್ಲಿ ಉಳಿದಿರುವುದು ಕೆಲವೇ ಕೆಲವು ಸಚಿವ ಸ್ಥಾನ ಮಾತ್ರ. ಅವರಿಗೆ ಎಚ್ಚರಿಕೆಯಿಂದ ಅವಕಾಶ ಕಲ್ಪಿಸಿ ಕೊಡಬೇಕಿದೆ. ಏಕೆಂದರೆ, ಈಗಾಗಲೇ ಸಾಮಾಜಿಕ ನ್ಯಾಯದ ಅನುಸಾರ ಕೆ.ಎಸ್.ಈಶ್ವರಪ್ಪ, ಭೈರತಿ ಬಸವರಾಜ್ ಮಂತ್ರಿಯಾಗಿದ್ದಾರೆ. ಮುಂದೆ ಎಂಟಿಬಿ ನಾಗರಾಜ್, ಆರ್.ಶಂಕರ್ ಸಚಿವರಾಗಬಹುದು. ಹೀಗಿರುವಾಗ ವಿಶ್ವನಾಥ್​ಗೆ ಸಚಿವ ಸ್ಥಾನ ಕಷ್ಟವಾಗಬಹುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net