ಕಾಂಗ್ರೆಸ್​ಗೆ ಮುಖಭಂಗ: ಬಿಜೆಪಿಗೆ ಅಧ್ಯಕ್ಷ ಪಟ್ಟ

DSC_3015
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಧಾರವಾಡ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (ಕೆಎಂಎಫ್)ದ ಅಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ಏರ್ಪಡಿಸಿದ್ದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ನಿರ್ದೇಶಕ ಶಂಕರ ಮುಗದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ನಿರ್ದೇಶಕರಾದ ಶಂಕರ ಮುಗದ, ಗೀತಾ ಮರಲಿಂಗಣ್ಣವರ ಹಾಗೂ ಸರ್ಕಾರದಿಂದ ನಾಮ ನಿರ್ದೇಶನಗೊಂಡ ಶಿವಲೀಲಾ ಕುಲಕರ್ಣಿ ನಾಮಪತ್ರ ಸಲ್ಲಿಕೆ ಮಾಡಿದ್ದರು. ಆದರೆ ಗೀತಾ ಮರಲಿಂಗಣ್ಣವರ ನಾಮಪತ್ರ ಹಿಂಪಡೆದ ಕಾರಣ ಶಂಕರ ಮುಗದ ಹಾಗೂ ಶಿವಲೀಲಾ ಕುಲಕರ್ಣಿ ಮಧ್ಯೆ ಸ್ಪರ್ಧೆ ಏರ್ಪಟ್ಟಿತ್ತು.
ಒಕ್ಕೂಟದ 9 ಜನ ನಿರ್ದೇಶಕರು ಸೇರಿ ಒಟ್ಟು 14 ಮತಗಳು ಚಲಾವಣೆಯಾಗಿದ್ದವು. ಈ ಪೈಕಿ ಶಂಕರ ಮುಗದ 8 ಮತಗಳನ್ನು ಪಡೆದರೆ, ಶಿವಲೀಲಾ ಕುಲಕರ್ಣಿ 6 ಮತಗಳನ್ನು ಪಡೆದರು. ಶಂಕರ ಮುಗದ 2 ಮತಗಳ ಅಂತರದಿಂದ ಜಯಗಳಿಸುವ ಮೂಲಕ 3ನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾದರು. ಇನ್ನು ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ನಿರ್ದೇಶಕ ಸುರೇಶ್ಚಂದ್ರ ಹೆಗಡೆ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಯಾದರು.
ಬಿಜೆಪಿ ಬೆಂಬಲಿತರೇ ಹೆಚ್ಚಿನ ಸಂಖ್ಯೆಯಲ್ಲಿ ನಿರ್ದೇಶಕರಾಗಿ ಆಯ್ಕೆಯಾಗಿದ್ದರೂ ಅಧ್ಯಕ್ಷ ಗಾದಿಗೆ ಏರಲು ಕಾಂಗ್ರೆಸ್​ ಮಾಡಿದ್ದ ಶತ ಪ್ರಯತ್ನ ವಿಫಲವಾದಂತಾಗಿದೆ. ಧಾರವಾಡ, ಉತ್ತರ ಕನ್ನಡ, ಗದಗ ಜಿಲ್ಲಾ ವ್ಯಾಪ್ತಿಯ ಹಾಲು ಒಕ್ಕೂಟದ ಒಟ್ಟು 9 ನಿರ್ದೇಶಕ ಸ್ಥಾನಕ್ಕೆ ಒಬ್ಬರು ಅವಿರೋಧವಾಗಿ ಆಯ್ಕೆಯಾಗಿದ್ದರೆ, ಉಳಿದವರು ಜೂ. 30ರಂದು ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿದ್ದರು.
ಬೆಂಬಲಿಗರ ವಿಜಯೋತ್ಸವ: ಶಂಕರ ಮುಗದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಅಧಿಕೃತ ಘೋಷಣೆ ಆಗತ್ತಿದ್ದಂತೆ ಬೆಂಬಲಿಗರು ಘೋಷಣೆಗಳನ್ನು ಮೊಳಗಿಸಿದರು. ಒಕ್ಕೂಟದ ಆವರಣದಲ್ಲೇ ಪಟಾಕಿ ಸಿಡಿಸಿ, ಗುಲಾಲು ಎರಚಿ ಸಂಭ್ರಮಿಸಿದರು. ಶಂಕರ ಮುಗದ ಅವರನ್ನು ಹೆಗಲ ಮೇಲೆ ಹೊತ್ತ ಬೆಂಬಲಿಗರು ಜಯ ಘೋಷಗಳನ್ನು ಮೊಳಗಿಸಿ ವಿಜಯೋತ್ಸವ ಆಚರಿಸಿದರು.
ಗಣನೆಗೆ ಬಾರದ ಅರ್ಜಿ: ನೂತನ ಅಧ್ಯಕ್ಷ ಶಂಕರ ಮುಗದ ಪ್ರತಿನಿಧಿಸುವ ಶಿವಳ್ಳಿ ಹಾಲು ಉತ್ಪಾದಕರ ಸಹಕಾರ ಸಂವನ್ನು ಕರ್ನಾಟಕ ಸಹಕಾರ ಸಂಗಳ ಕಾಯ್ದೆ 1959ರ ಕಲಂ 30(1)ರ ಅನ್ವಯ ರದ್ದುಗೊಳಿಸಲಾಗಿದೆ. ಹೀಗಾಗಿ ಶಂಕರ ಮುಗದ ಸ್ಪರ್ಧೆ ಹಾಗೂ ಚುನಾವಣೆ ಫಲಿತಾಂಶ ಘೋಷಣೆ ರದ್ದು ಮಾಡುವಂತೆ ಚುನಾವಣಾಧಿಕಾರಿಗೆ ಶಿವಲೀಲಾ ಕುಲಕರ್ಣಿ ಅರ್ಜಿ ಸಲ್ಲಿಸಿದ್ದರು. ಆದರೆ ನಾಮಪತ್ರಗಳ ಪರಿಶೀಲನೆ ಅವಧಿ ಮುಗಿದ ಬಳಿಕ ಅರ್ಜಿ ಸಲ್ಲಿಸಿದ್ದರಿಂದ ಅದನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ ಎಂದು ಚುನಾವಣಾಧಿಕಾರಿ ಡಾ. ಸಂತೋಷ ಬಿರಾದಾರ ತಿಳಿಸಿದರು.

ರೈತರು, ಗ್ರಾಹಕರು, ಕಾಮಿರ್ಕ ವರ್ಗ ಹಾಗೂ ಸಿಬ್ಬಂದಿ ಅಭಿವೃದ್ಧಿಯೇ ಮೊದಲ ಆದ್ಯತೆ. ನನ್ನ ಈ ಅವಧಿಯಲ್ಲಿ ಕೆಎಂಎಫ್​ ಒಂದು ರೀತಿ ಎಂಎನ್​ಸಿ ಕಂಪನಿ ತರಹ ಕಾರ್ಯ ನಿರ್ವಹಿಸಲಿದೆ. ಕೇಂದ್ರ ಸರ್ಕಾರದಿಂದ 3 ಜಿಲ್ಲೆಗಳಿಗೂ ವಿಶೇಷ ಅನುದಾನ ತರುವ ಮೂಲಕ ರೈತರಿಗೆ ಆಕಳು ಕೊಡಿಸುವ ಹಾಗೂ ಗ್ರಾಹಕರಿಗೆ ಗುಣಮಟ್ಟದ ಉತ್ಪನ್ನ ನೀಡುವ ಯೋಜನೆ ಇದೆ. ರಾಜ್ಯ ಸರ್ಕಾರದಿಂದ ರಾಜ್ಯಾದ್ಯಂತ ಹಾಲು ಒಕ್ಕೂಟಗಳಿಗೆ 1075 ಕೋಟಿ ರೂ. ಬಾಕಿ ಹಣ ಬರಬೇಕಿದೆ. ಇದನ್ನು ತರುವುದರ ಜತೆಗೆ ಈ ಹಿಂದೆ ಜಾರಿಯಲ್ಲಿದ್ದ ಅಮೃತ ಯೋಜನೆಗೆ ಮರು ಚಾಲನೆ ಕೊಡಿಸಲು ಪ್ರಯತ್ನಿಸಲಾಗುವುದು.*ಶಂಕರ ಮುಗದ, ಧಾರವಾಡ ಹಾಲು ಒಕ್ಕೂಡದ ನೂತನ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net