

ಉಪ್ಪಿನಬೆಟಗೇರಿ: ಸ್ವಾತಂತ್ರ್ಯ ಸಂಗ್ರಾಮದಲ್ಲಿ ಜನರನ್ನು ಒಗ್ಗೂಡಿಸಿ ಹೋರಾಟ ಮಾಡುವ ಉದ್ದೇಶದಿಂದ ಗಣೇಶ ಹಬ್ಬಕ್ಕೆ ಚಾಲನೆ ಕೊಡಲಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಹಬ್ಬವನ್ನು ಸಂಪ್ರದಾಯ ಬದ್ಧವಾಗಿ ಆಚರಿಸದೆ ಅಪಚಾರ ಮಾಡುವತ್ತ ಸಾಗಿರುವುದು ಖೇದಕರ ಸಂಗತಿ ಎಂದು ಪ್ರಭಾರಿ ಗ್ರಾಮೀಣ ಸಿಪಿಐ ಮುರುಗೇಶ ಟಿ.ಎಸ್. ವಿಷಾದ ವ್ಯಕ್ತಪಡಿಸಿದರು.
ಸ್ಥಳೀಯ ಶ್ರೀ ಗುರು ವಿರೂಪಾಕ್ಷೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದ ಸಭಾ ಭವನದಲ್ಲಿ ಗರಗ ಆರಕ್ಷಕ ಠಾಣೆ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ಗಣೇಶ ಚತುರ್ಥಿ ಹಾಗೂ ಈದ್ವಿುಲಾದ್ ಹಬ್ಬದ ಶಾಂತಿ ಸಭೆಯಲ್ಲಿ ಅವರು ವ0ಾತನಾಡಿದರು.
ಡಿಜೆ ಸಿಸ್ಟಮ್ ಬಳಸುವುದರಿಂದ ಕರ್ಕಶ ಶಬ್ದ ಉಂಟಾಗಿ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಯಾರಿಗೂ ತೊಂದರೆಯಾಗದ ರೀತಿಯಲ್ಲ ಭಕ್ತಿ ಪ್ರಧಾನದ ಹಾಡುಗಳು, ಕೋಲಾಟ, ಜಾಂಜ್ ಮೇಳ ಸೇರಿದಂತೆ ಮನಸ್ಸಿಗೆ ಮುದ ನೀಡುವ ಹಾಡುಗಳನ್ನು ಹಾಕಬೇಕು ಎಂದರು.
ಗಣೇಶ ಮಹಾ ಮಂಡಳದವರು ಕಡ್ಡಾಯವಾಗಿ ಸ್ಥಳೀಯ ಗ್ರಾಮ ಪಂಚಾಯಿತಿ, ಕೆಇಬಿ ಹಾಗೂ ಸಂಬಂಧಪಟ್ಟ ಆರಕ್ಷಕ ಠಾಣೆಯಿಂದ ಅನುಮತಿ ಪಡೆಯಬೇಕು ಎಂದರು.
ವಿದ್ಯಾದಾನ ಸಮಿತಿ ಚೇರ್ಮನ್ ವೀರಣ್ಣಾ ಪರಾಂಡೆ ಮಾತನಾಡಿ, ವಿಘ್ನ ನಿವಾರಣೆಗಾಗಿ ವಿನಾಯಕನ ಪ್ರತಿಷ್ಠಾಪನೆ ಮಾಡಿ ಭಕ್ತಿಯಿಂದ ಪೂಜಿಸಿ ಕಷ್ಟದಿಂದ ಪಾರು ಮಾಡುವಂತೆ ಬೇಡಿಕೊಳ್ಳುತ್ತೇವೆ. ಆದರೆ, ಅದರಲ್ಲಿ ನಾವೇನಾದರು ಲೋಪ ಮಾಡಿದರೆ ಶಿಕ್ಷೆಗೆ ಗುರಿಯಾಗುತ್ತೇವೆ. ಯಾರೂ ಕೂಡ ಗಣೇಶನ ಮೆರವಣಿಗೆಯ ಮುಂದೆ ದುರ್ವರ್ತನೆ ತೋರಬಾರದು ಎಂದರು.
ಗರಗ ಪಿಎಸ್ಐ ಸಿದ್ರಾಮಪ್ಪ ಉನ್ನದ ಮಾತನಾಡಿ, ಗಣೇಶ ಮಂಡಳಿಯವರು ಮಂಟಪದಲ್ಲಿ ಮುಂಜಾನೆ 6 ರಿಂದ ರಾತ್ರಿ 10 ವರೆಗೆ ಮಾತ್ರ ಧ್ವನಿವರ್ಧಕ ಬಳಸಬೇಕು. ಸಮಿತಿಯವರು ಗಣೇಶ ಪ್ರತಿಷ್ಠಾಪನೆಯಿಂದ ವಿಸರ್ಜನೆವರೆಗೂ ಪೆಂಡಾಲಿನಲ್ಲಿಯೇ ವಾಸ್ತವ್ಯ ಮಾಡಬೇಕು. ಜೂಜಾಟ ಮತ್ತಿತರ ಕೆಟ್ಟ ಅಭ್ಯಾಸಗಳನ್ನು ಮಾಡಬಾರದು ಎಂದರು.
ಗಣೇಶ ವಿಸರ್ಜನೆ ಮಾಡುವ ಬಾವಿ, ಹಳ್ಳ, ಹಾಗೂ ಕೆರೆಗಳ ನೀರಿನ ಆಳವನ್ನು ಮೊದಲೇ ಪರಿಶೀಲಿಸಬೇಕು. ಯಾವುದೆ ಅಹಿತಕರ ಘಟನೆಗಳಿಗೆ ಆಸ್ಪದ ಕೊಡದೆ ಪರಸ್ಪರ ಸಹೋದರತ್ವ ಭಾವನೆಯಿಂದ ಗಣೇಶ ಹಾಗೂ ಈದಮಿಲಾದ ಎರಡು ಹಬ್ಬಗಳನ್ನು ಆಚರಿಸಬೇಕು ಎಂದರು.
ಜಿ.ಆರ್. ಜವಳಗಿ, ಮುಸ್ತಾಕ್ ಅಹ್ಮದ್ ಮಕಾಂದಾರ ಮಾತನಾಡಿದರು. ಸಭೆಯಲ್ಲಿ ಪಿಕೆಪಿಎಸ್ ಅಧ್ಯಕ್ಷ ರಾಮಲಿಂಗಪ್ಪ ನವಲಗುಂದ, ಗ್ರಾಪಂ ಸದಸ್ಯರಾದ ಮಹಾವೀರ ಅಷ್ಟಗಿ, ಬಸೀರ್ ಅಹ್ಮದ್ ಮಾಳಗಿಮನಿ, ಮುಸ್ತಾಕ ನದಾಫ್, ಸುರೇಶ ಬಾಬು ತಳವಾರ ಸೇರಿದಂತೆ 18 ಗಣೇಶ ಮಹಾಮಂಡಳದ ಸದಸ್ಯರು, ಹಿಂದು-ಮುಸ್ಲಿಂ ಬಾಂಧವರು ಉಪಸ್ಥಿತರಿದ್ದರು.