ರೋಗ ಲಕ್ಷಣಗಳಿದ್ದರೆ ವೈದ್ಯರ ಭೇಟಿ ಮಾಡಿ

oplus_0
oplus_0
Published on

ದೇವದುರ್ಗ: ಅನಾಫಿಲಿಸ್ ಸೊಳ್ಳೆ ಕಚ್ಚುವುದರಿಂದ ಮಲೇರಿಯಾ ಜ್ವರ ಹರಡಲಿದ್ದು, ಜ್ವರದ ಬಗ್ಗೆ ನಿರ್ಲಕ್ಷ್ಯ ಮಾಡದೆ ತಕ್ಷಣ ಚಿಕಿತ್ಸೆ ಪಡೆಯಬೇಕು ಎಂದು ತಾಲೂಕು ಆರೋಗ್ಯ ಅಧಿಕಾರಿ ಡಾ.ಬನದೇಶ್ವರ ಹೇಳಿದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಜಿಲ್ಲಾಡಳಿತ, ಜಿಪಂ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಕಚೇರಿಯಿಂದ ಆಯೋಜಿಸಿದ್ದ ವಿಶ್ವ ಮಲೇರಿಯಾ ದಿನಾಚರಣೆ ಹಾಗೂ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಭಾನುವಾರ ಮಾತನಾಡಿದರು. ಮಲೇರಿಯಾ ಬಂದಾಗ ದಿನ ಬಿಟ್ಟು ದಿನ ಜ್ವರ ಬರುವುದು, ವಾಂತಿ, ನಡುಕ ಹಾಗೂ ಸ್ನಾಯುಗಳ ಸೆಳೆತದಂತಹ ಲಕ್ಷಣ ಕಂಡು ಬರಲಿವೆ ಎಂದರು.

ರೋಗದ ಲಕ್ಷಣ ಕಂಡುಬಂದರೆ ನಿರ್ಲಕ್ಷ್ಯ ಮಾಡದೆ ವೈದ್ಯರ ಭೇಟಿ ಮಾಡಿ ರಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕು. 14 ದಿನ ಚಿಕಿತ್ಸೆ ಪಡೆದರೆ ರೋಗ ಸಂಪೂರ್ಣವಾಗಿ ನಿವಾರಣೆಯಾಗಲಿದೆ. ಜನರು ಸ್ವಚ್ಛತೆಗೆ ಆದ್ಯತೆ ನೀಡಬೇಕು. ಮನೆಯ ಮುಂದೆ ನೀರು ನಿಲ್ಲದಂತೆ ನೋಡಿಕೊಂಡರೆ ಸೊಳ್ಳೆ ಉತ್ಪಾದನೆ ತಡೆಯಬಹುದು. ಬೇಸಿಗೆ ಇರುವ ಕಾರಣ ಹಿರಿಯ ನಾಗರಿಕರು, ಮಹಿಳೆಯರು ಆರೋಗ್ಯದ ಬಗ್ಗೆ ಜಾಗೃತಿ ವಹಿಸಬೇಕೆಂದು ಸಲಹೆ ನೀಡಿದರು.

ತೀವ್ರ ತಾಪಮಾನ ಇರುವುದರಿಂದ ಬಾಯಾರಿಕೆಯಾಗದಿದ್ದರೂ ಹೆಚ್ಚು ನೀರು ಕುಡಿಯಬೇಕು. ತೆಳುವಾದ ಹತ್ತಿಯ ಬಟ್ಟೆಗಳನ್ನು ಧರಿಸಬೇಕು. ಬೆಳಗ್ಗೆ 11ಗಂಟೆಯಿಂದ 4ಗಂಟೆಯವರೆಗೆ ಬಿಸಿಲಿನಲ್ಲಿ ಕೆಲಸ ಮಾಡಬಾರದು. ಮದ್ಯಪಾನ, ಟಿ, ಕಾಫಿ ಹಾಗೂ ಹೆಚ್ಚು ಸಕ್ಕರೆಯುಳ್ಳ ತಂಪು ಪಾನಿಯಗಳನ್ನು ಸೇವಿಸಬಾರದು. ಮಜ್ಜಿಗೆ ಲಸ್ಸಿ, ನಿಂಬೆಹಣ್ಣನ ಪಾನೀಯಗಳನ್ನು ಸೇವಿಸಬೇಕು. ಹೆಚ್ಚು ನೀರಿನ ಅಂಶವುಳ್ಳ ಹಣ್ಣುಗಳಾದ ಕಲ್ಲಂಗಡಿ, ದ್ರಾಕ್ಷಿ, ಕಿತ್ತಳೆ ಹಣ್ಣುಗಳನ್ನು ಸೇವಿಸಬೇಕು ಎಂದು ಟಿಎಚ್‌ಒ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net