ಭತ್ತದ ಬೆಳೆಗೆ ಕೀಟದ ಕಂಟಕ: ಜಿಲ್ಲೆಯಲ್ಲಿ ಕಾಣಿಸಿಕೊಳ್ಳುತ್ತಿರುವ ರೋಗ

Disease of rice crop Mandya
Published on

ಮಂಡ್ಯ: ಜಿಲ್ಲೆಯಲ್ಲಿ ಮಳೆಯ ಅಭಾವದ ನಡುವೆಯೂ ಸಮೃದ್ಧವಾಗಿ ಬೆಳೆದುನಿಂತಿರುವ ಭತ್ತದ ಬೆಳೆಗೆ ಕೀಟ ಹಾಗೂ ರೋಗದ ಕಂಟಕ ಎದುರಾಗಿದೆ. ಈ ಹಿನ್ನೆಲೆಯಲ್ಲಿ ವಲಯ ಕೃಷಿ ಸಂಶೋಧನಾ ಕೇಂದ್ರದ ಕೃಷಿ ವಿಜ್ಞಾನಿಗಳು ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಜಾಗೃತಿ ಮೂಡಿಸುತ್ತಿದ್ದಾರೆ.

ಈ ವರ್ಷ ಮುಂಗಾರು ನಿರೀಕ್ಷೆಯಂತಾಗಲಿಲ್ಲ. ಆದ್ದರಿಂದ ಬರಗಾಲ ಮುಂದುವರೆಯುವ ಆತಂಕ ಎದುರಾಗಿತ್ತು. ಆದಾಗ್ಯೂ ಕಾವೇರಿ ಕಣಿವೆಯಲ್ಲಿ ಭರ್ಜರಿ ಮಳೆಯಾದ ಪರಿಣಾಮ ಕೆಆರ್‌ಎಸ್ ಡ್ಯಾಂ ಭರ್ತಿಯಾಯಿತು. ಅಂತೆಯೇ ನಾಲೆಗೆ ನೀರು ಹರಿಸಿದ ಪರಿಣಾಮ ರೈತರು ಭತ್ತ ಬೆಳೆಯಲು ನೆರವಾಯಿತು. ಆದರೀಗ ಕಷ್ಟಪಟ್ಟು ಬೆಳೆದಿರುವ ಬೆಳೆಗೆ ರೋಗ ಬಾಧಿಸುತ್ತಿವೆ. ನಿರ್ಲಕ್ಷೃ ವಹಿಸಿದರೆ ನಷ್ಟ ಎದುರಿಸಬೇಕಾದ ಅನಿವಾರ್ಯತೆ ಬರಲಿದೆ.

ಉತ್ತಮ ಫಸಲಿನ ನಿರೀಕ್ಷೆ: ಜಿಲ್ಲೆಯಲ್ಲಿ ಈ ಸಾಲಿನಲ್ಲಿ ಭತ್ತದ ಬಿತ್ತನೆ ಪ್ರಮಾಣ ನಿಗದಿತ ಗುರಿಗಿಂತ ಕೊಂಚ ಹೆಚ್ಚಿದೆ. ಈ ಮುಂಗಾರಿನಲ್ಲಿ 57,700 ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಬಿತ್ತನೆ ಮಾಡುವ ಗುರಿ ಇತ್ತಾದರೂ ಪ್ರಸ್ತುತ 57,804 ಹೆಕ್ಟೇರ್‌ನಲ್ಲಿ ಭತ್ತ ಬೆಳೆಯಲಾಗಿದೆ. ಅಂತೆಯೇ ಮಂಡ್ಯ ತಾಲೂಕಿನಲ್ಲಿ 11,300 ಹೆಕ್ಟೇರ್ ಗುರಿಗೆ 11,399 ಸಾಧನೆ, ಮದ್ದೂರಿನಲ್ಲಿ 11,300 ಹೆಕ್ಟೇರ್‌ಗೆ 11,104, ಮಳವಳ್ಳಿಯಲ್ಲಿ 10,300 ಹೆಕ್ಟೇರ್‌ಗೆ 9,412, ಶ್ರೀರಂಗಪಟ್ಟಣದಲ್ಲಿ 9,150 ಹೆಕ್ಟೇರ್‌ಗೆ 9,150, ಪಾಂಡವಪುರದಲ್ಲಿ 4,400 ಹೆಕ್ಟೇರ್‌ಗೆ 4,438, ಕೆ.ಆರ್.ಪೇಟೆಯಲ್ಲಿ 9,950 ಹೆಕ್ಟೇರ್‌ಗೆ 11,141 ಹಾಗೂ ನಾಗಮಂಗಲ ತಾಲೂಕಿನಲ್ಲಿ 1,300 ಹೆಕ್ಟೇರ್‌ಗೆ 1,160 ಹೆಕ್ಟೇರ್‌ನಲ್ಲಿ ಭತ್ತ ಬೆಳೆಯಲಾಗಿದೆ.

ಮಳೆಯ ಪ್ರಮಾಣ ಕಡಿಮೆ ಎನಿಸಿದರೂ ಈ ಬಾರಿ ಉತ್ತಮ ಫಸಲಿನ ನಿರೀಕ್ಷೆ ಇದೆ. ಆದರೆ ವಾತಾವರಣದಲ್ಲಿನ ಬದಲಾವಣೆ, ಅಧಿಕ ಯೂರಿಯಾ ಬಳಕೆ, ಪೊಟ್ಯಾಷ್ ರಸಗೊಬ್ಬರ ಕಡಿಮೆ ಬಳಕೆಯಿಂದಾಗಿ ಭತ್ತಕ್ಕೆ ಹಲವು ರೋಗ ಕಾಡಲಾರಂಭಿಸಿದೆ. ರೈತರು ಹೆಚ್ಚಿನ ಶ್ರಮ ವಹಿಸಿ ಬೆಳೆದಿರುವ ಬೆಳೆಯನ್ನು ಉಳಿಸಿಕೊಳ್ಳಬೇಕಿದೆ. ಈಗಾಗಲೇ ಬೆಳೆಗೆ ರೋಗ ಹರಡಿರುವುದು ರೈತರಿಗೆ ತಲೆನೋವು ತರಿಸಿದೆ. ಈ ಹಿನ್ನೆಲೆಯಲ್ಲಿ ವಿಜ್ಞಾನಿಗಳು ಹಾಗೂ ಅಧಿಕಾರಿಗಳು ಬೆಳೆ ಸಮೀಕ್ಷೆ ಮಾಡುವ ಜತೆಗೆ ಕೀಟ, ರೋಗ ಬಾಧೆಗಳ ನಿರ್ವಹಣೆ ಮಾಡುವ ಬಗ್ಗೆ ತಾಂತ್ರಿಕ ಮಾಹಿತಿ ನೀಡುತ್ತಿದ್ದಾರೆ. ಜಿಲ್ಲೆಯಲ್ಲಿ ಈಗಷ್ಟೇ ರೋಗ ಕಾಣಿಸಿಕೊಳ್ಳಲಾರಂಭಿಸಿರುವುದರಿಂದ ಹೆಚ್ಚಿನ ಮುರ್ತುವರ್ಜಿ ವಹಿಸಲೇಬೇಕಿದೆ.

ಪ್ರಸ್ತುತ ಜಿಲ್ಲೆಯಲ್ಲಿ ಭತ್ತದ ಬೆಳೆಗೆ ಪ್ರಮುಖವಾಗಿ ಎರಡು ರೋಗ ಹಾಗೂ ನಾಲ್ಕು ಕೀಟದ ಕಾಟ ಎದುರಾಗಿದೆ. ಮುಖ್ಯವಾಗಿ ಬೆಂಕಿ ರೋಗದಿಂದ ಗರಿಗಳ ಮೇಲೆ ವಜ್ರಾಕಾರದ ಕಂದು ಚುಕ್ಕೆಗಳು ಉಂಟಾಗಿ ಅದರ ಮಧ್ಯಭಾಗವು ಬೂದಿ ಬಣ್ಣ ಹೊಂದಿರುತ್ತದೆ. ತೆನೆಗಳ ಕುತ್ತಿಗೆಯ ಮೇಲೆ ಕಪ್ಪು ಮಚ್ಚೆ ಇದ್ದು, ಕಾಳು ಜೊಳ್ಳಾಗಹುದು. ಇದರ ನಿರ್ವಹಣೆಗಾಗಿ 0.5 ಗ್ರಾಂ ಟ್ರೈಪ್ಲೊಕ್ಸಿಸ್ಟ್ರಾಬಿನ್ ಶೇ.25 ಟೆಬುಕೊನಝೋಲ್, ಶೇ.50 ಡಬ್ಲುೃಜಿ ಸಂಯುಕ್ತ ಶಿಲೀಂದ್ರನಾಶಕವನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.

ಇನ್ನು ಎಲೆ ಕವಚ ಒಣಗುವ ರೋಗದಿಂದ ಕಂದು ಅಂಚುಳ್ಳ ಹುಲ್ಲಿನ ಬಣ್ಣದ ಉದ್ದದ ಮಚ್ಚೆಗಳು ಕಾಣಿಸಿಕೊಳ್ಳುತ್ತವೆ. ಇದನ್ನು ನಿರ್ವಹಣೆ ಮಾಡಲು ಗದ್ದೆಯ ನೀರನ್ನು ಬಸಿದು 2 ಮಿ.ಲೀ ಹೆಕ್ಸಾಕೋನಜೋಲ್(5 ಎಸ್.ಸಿ) ಅಥವಾ 1 ಗ್ರಾಂ ಟ್ರೈಸೈಕ್ಲೋಜೋಲ್ ಶೇ.45 ಹೆಕ್ಸಾಕೋನಜೋಲ್, ಶೇ.10ರಷ್ಟು ಡಬ್ಲುೃಜಿ ಸಂಯುಕ್ತ ಶಿಲೀಂದ್ರನಾಶಕವನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net