

ಮಾಯಕೊಂಡ: ದಾವಣಗೆರೆ ತಾಲೂಕಿನ ಮಾಯಕೊಂಡ, ಆನಗೋಡು ಹಾಗೂ ಅಣಜಿ ಹೋಬಳಿಗಳಲ್ಲಿ ಜಮೀನುಗಳಿಗೆ ಸೋಮವಾರ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಡಿ.ಎಂ. ಶ್ರೀಧರ್ ಮೂರ್ತಿ ಹಾಗೂ ಉಪ ನಿರ್ದೇಶಕ ಅಶೋಕ್ ಭೇಟಿ ನೀಡಿ ಮೆಕ್ಕೆಜೋಳ ಬೆಳೆಯ ರೋಗಬಾಧೆ ಪರಿಶೀಲನೆ ಮಾಡಿದರು.
ಮೇ ಕೊನೆಯ ವಾರ ಮತ್ತು ಜೂನ್ ಮೊದಲ ವಾರ ಬಿತ್ತನೆ ಮಾಡಿರುವ ಮೆಕ್ಕೆಜೋಳ ಮೊಣಕಾಲು ಎತ್ತರಕ್ಕೆ ಬೆಳೆದು ನಿಂತಿದೆ. ಈ ಬಾರಿ ಮುಂಗಾರು ಹಂಗಾಮಿನ ಮಳೆ ಬೇಗ ಪ್ರಾರಂಭವಾಗಿದ್ದು, ಬಿತ್ತನೆ ಮಾಡಿರುವ ಮೆಕ್ಕೆಜೋಳದ ಜತೆಗೆ ಮುಳ್ಳುಸಜ್ಜೆ ಕಳೆ ಬೆಳೆದಿದೆ. ಕಳೆ ನಾಶಪಡಿಸಲು ಕೃಷಿಕರು ಹರಸಾಹಸ ಪಡುತ್ತಿದ್ದಾರೆ.
ಈ ವೇಳೆ ಸಹಾಯಕ ನಿರ್ದೇಶಕ ಡಿ.ಎಂ. ಶ್ರೀಧರ್ವುೂರ್ತಿ ಮಾತನಾಡಿ, ಬಿತ್ತನೆ ಮಾಡಿರುವ ಮೆಕ್ಕೆಜೋಳ ಉತ್ತಮವಾಗಿ ಬೆಳೆದು ನಿಂತಿದ್ದು ರೈತರು ಮುಂಜಾಗ್ರತೆಯಾಗಿ ಕಳೆಗಳನ್ನು ನಾಶಪಡಿಸಿದ್ದಾರೆ. ಆದ್ದರಿಂದ ಮೆಕ್ಕೆಜೋಳ ನಳನಳಿಸುತ್ತಿವೆ. ಕೆಲವು ಜಮೀನುಗಳಲ್ಲಿ ಲದ್ದಿ ಹುಳು ಬಾಧೆ ಇದ್ದು, ನಿವಾರಣೆಗೆ ರೈತ ಸಂಪರ್ಕ ಕೇಂದ್ರಗಳಲ್ಲಿ ಸಿಗುವ ಎಮೋಮಿತ್ರಿನ್ ಬೆಂಜೊವಿಟ್ ಕೀಟನಾಶಕವನ್ನು ಪ್ರತಿ ಲೀಟರ್ ನೀರಿಗೆ ಎರಡು ಮಿಲಿಯಂತೆ ಬೆರೆಸಿ ಸಿಂಪಡಿಸಬೇಕು ಎಂದು ತಿಳಿಸಿದರು.
ಉಪನಿರ್ದೇಶಕ ಅಶೋಕ್ ಮಾತನಾಡಿ, ಬೆಳೆಗಳಿಗೆ ಅತ್ಯಧಿಕ ಕೀಟನಾಶಕವನ್ನು ಸಿಂಪಡಣೆ ಮಾಡುವುದರಿಂದ ಭೂಮಿಯಲ್ಲಿರುವ ಜೀವಕೋಶಗಳು ನಾಶವಾಗುವ ಜತೆಗೆ ಭೂಮಿ ಫಲವತ್ತತೆ ಕಳೆದುಕೊಳ್ಳುತ್ತದೆ. ಆದ್ದರಿಂದ ರೈತರು ಬಹುಬೆಳೆ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು. ಅವರೆ, ತೊಗರಿ ಬೆಳೆ ಬೆಳೆದರೆ ಮಾತ್ರ ಮುಳ್ಳುಸಜ್ಜೆಯಂತಹ ಕಳೆ ನಾಶಪಡಿಸಬಹುದು ಎಂದು ಸಲಹೆ ನೀಡಿದರು.
ಮೆಕ್ಕೆಜೋಳ ಬೆಳೆಗೆ ಕಳೆನಾಶಕ ಸಿಂಪಡಣೆ ಮಾಡುವುದಕ್ಕಿಂತ ಮುಳ್ಳುಸಜ್ಜೆ ಕೀಳಿಸಿದರೆ ಸೂಕ್ತ ಎನ್ನುತ್ತಾರೆ ಕೃಷಿ ಅಧಿಕಾರಿಗಳು ಹಾಗೂ ತಜ್ಞರು.
ಈ ವೇಳೆ ಮಾಯಕೊಂಡ ಮತ್ತು ಆನಗೋಡು ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳಾದ ಕೆ. ಬೀರಪ್ಪ, ಶ್ರೀನಿವಾಸ್, ಮಂಜುನಾಥ್ ಪ್ರವೀಣ್, ದಿಂಡದಹಳ್ಳಿ ರೈತ ಹೊಸೂರಪ್ಪ ಇದ್ದರು.