ಗೋ ಉತ್ಪನ್ನ ನಿರ್ಲಕ್ಷ್ಯದಿಂದ ಖಾಯಿಲೆ ಹೆಚ್ಚಳ

mng-nov10-gou1
ಕದ್ರಿ ಶ್ರೀ ಮಂಜುನಾಥ ದೇವಸ್ಥಾನ ಆವರಣದಲ್ಲಿ ಭಾನುವಾರ ಪಜೀರಿನ ಗೋಶಾಲೆಗೆ ಗೋ ಹೊರೆಕಾಣಿಕೆ ಮೆರವಣಿಗೆಗೆ ಕರಾವಳಿ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಎಸ್. ಗಣೇಶ್ ರಾವ್ ಚಾಲನೆ ನೀಡಿದರು.
Published on

ಮಂಗಳೂರು: ಗೋವು ಹಾಗೂ ಗೋವಿನ ಉತ್ಪನ್ನಗಳನ್ನು ನಿರ್ಲಕ್ಷ್ಯ ಮಾಡಿದ ಕಾರಣ ಮಾನವನಿಗೆ ಕ್ಯಾನ್ಸರ್, ರಕ್ತದೊತ್ತಡ, ಮಧುಮೇಹದಂತಹ ಕಾಯಿಲೆಗಳು ಹೆಚ್ಚುತ್ತಿವೆ. ಗೋವಿನ ಹಾಲು, ಉತ್ಪನ್ನಗಳು ಅಮೃತ ಸಮಾನವಾಗಿದ್ದು, ದೇವರನ್ನು ಪೂಜಿಸುವಂತೆ ಗೋವುಗಳನ್ನು ಮನಸ್ಸಿಟ್ಟು ಪೋಷಣೆ ಮಾಡಬೇಕಿದೆ ಎಂದು ಕರಾವಳಿ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಎಸ್. ಗಣೇಶ್ ರಾವ್ ಹೇಳಿದರು.

ವಿಶ್ವಹಿಂದು ಪರಿಷತ್ ಸಹಯೋಗದ ಸೇವಾ ಸಂಸ್ಥೆ ಗೋವನಿತಾಶ್ರಯ ಟ್ರಸ್ಟ್ ಮಂಗಳೂರು ವತಿಯಿಂದ ಗೋವಿಗಾಗಿ ಹೊರೆಕಾಣಿಕೆ ಅರ್ಪಣೆ ಅಂಗವಾಗಿ ನಗರದ ಕದ್ರಿ ಶ್ರೀ ಮಂಜುನಾಥ ದೇವಸ್ಥಾನ ಆವರಣದಲ್ಲಿ ಭಾನುವಾರ ಪಜೀರಿನ ಗೋಶಾಲೆಗೆ ಗೋ ಹೊರೆಕಾಣಿಕೆ ಮೆರವಣಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ರೈತರಿಗೆ ಗೋವು ಸ್ನೇಹಿತ. ಅಭಿವೃದ್ಧಿ, ವಿಜ್ಞಾನದ ಹೆಸರಿನಲ್ಲಿ ನಾವಿಂದು ಗೋವನ್ನು ಮರೆತಿದ್ದೇವೆ. ಆದರೆ, ಪಜೀರಿನ ಗೋಶಾಲೆಯನ್ನು ಗೋವನಿತಾಶ್ರಯ ಟ್ರಸ್ಟ್ ಪೂಜೆಯ ರೀತಿಯಲ್ಲಿ ನಡೆಸುತ್ತಿದೆ. ನೂರಾರು ಗೋವುಗಳನ್ನು ಪಜೀರು ಗೋಶಾಲೆಯಲ್ಲಿ ಸಾಕುತ್ತಿರುವುದು ಶ್ಲಾಘನೀಯ. ಇಲ್ಲಿನ ಗೋವುಗಳನ್ನು ಸಾಕಲು ಸಮಾಜ ನೆರವು ನೀಡಬೇಕು ಎಂದರು.

ಮೇಯರ್ ಮನೋಜ್‌ಕುಮಾರ್ ಕೋಡಿಕಲ್ ಮಾತನಾಡಿ, ಗೋವುಗಳ ಅಕ್ರಮ ಸಾಗಣೆ ವೇಳೆ ಬಜರಂಗದಳ ಕಾರ್ಯಕರ್ತರು ರಕ್ಷಣೆ ಮಾಡಿದ ಗೋವುಗಳನ್ನು ಪಜೀರಿನ ಗೋಶಾಲೆಯಲ್ಲಿ ಪೋಷಣೆ ಮಾಡಲಾಗುತ್ತಿದೆ. ಅನಾಥ ಗೋವುಗಳನ್ನೂ ಇಲ್ಲಿ ಸಾಕಲಾಗುತ್ತಿದೆ. ಇದಕ್ಕೆ ತಿಂಗಳಿಗೆ ಲಕ್ಷಾಂತರ ಖರ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಗೋ ಪ್ರೇಮಿಗಳು, ಸಾರ್ವಜನಿಕರು ಪಜೀರಿನ ಗೋಶಾಲೆಗೆ ಸಹಕಾರ ನೀಡಬೇಕು. ಗೋವುಗಳನ್ನು ದತ್ತು ಪಡೆದು ಅವುಗಳ ಆಹಾರಕ್ಕೆ ನೆರವಾಗಬೇಕು ಎಂದರು.

ಕದ್ರಿ ದೇವಳದ ತಂತ್ರಿ ದೇರೆಬೈಲ್ ವಿಠ್ಠಲದಾಸ ತಂತ್ರಿ, ವಿಶ್ವಹಿಂದು ಪರಿಷತ್ ಪ್ರಾಂತ ಕಾರ್ಯಾಧ್ಯಕ್ಷ ಪ್ರೊ.ಎಂ.ಬಿ. ಪುರಾಣಿಕ್, ಬಿಲ್ಡರ್ ಕರುಣಾಕರ, ಕಲ್ಕೂರ ಪ್ರತಿಷ್ಠಾನ ಅಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯೆ ಚಂದ್ರಕಲಾ ರಾವ್, ವಿಹಿಂಪ ಜಿಲ್ಲಾಧ್ಯಕ್ಷ ಎಚ್.ಕೆ. ಪುರುಷೋತ್ತಮ, ಪ್ರಮುಖರಾದ ಡಾ.ಪಿ. ಅನಂತಕೃಷ್ಣ ಭಟ್, ಶರಣ್ ಪಂಪ್‌ವೆಲ್, ಜಗದೀಶ ಶೇಣವ, ರಾಮಕೃಷ್ಣ ರಾವ್, ಶುಭಾ ಜಯರಾಮ ಭಟ್, ಕುಸುಮಾ ದೇವಾಡಿಗ, ಕಾರ್ಪೋರೇಟರ್‌ಗಳಾದ ವನಿತಾ ಪ್ರಸಾದ್, ಕಿರಣ್ ಕೋಡಿಕಲ್, ಶೈಲೇಶ್ ಶೆಟ್ಟಿ, ಮನೋಹರ ಕದ್ರಿ, ಗುಜರಾತಿ ಸಮಾಜದ ಪ್ರಹ್ಲಾದ್ ಉಪಸ್ಥಿತರಿದ್ದರು.

ಶಿವಾನಂದ ಮೆಂಡನ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಬಳಿಕ ಜಿಲ್ಲೆಯ ವಿವಿಧ ಸ್ಥಳಗಳಿಂದ ಆಗಮಿಸಿದ ಹೊರೆಕಾಣಿಕೆ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಿಂದ ಪಜೀರು ಗೋಶಾಲೆಗೆ ಮೆರವಣಿಗೆಯಲ್ಲಿ ತೆರಳಿತು.

--------------

ಮನೆಯಲ್ಲಿ ಗೋವುಗಳಿದ್ದರೆ ಆ ಮನೆಗೆ ಭೂಷಣ. ಆದ್ದರಿಂದ ಗೋವುಗಳನ್ನು ಸಾಕುವುದಕ್ಕೆ ಆದ್ಯತೆ ನೀಡಬೇಕು. ಹೆತ್ತವರನ್ನು ಪೂಜಿಸುವಂತೆ ನಮಗೆ ಬದುಕು ನೀಡುವ ಗೋವನ್ನು ಕೂಡ ಪೂಜಿಸಬೇಕು. ಇದರಿಂದ ಭಗವಂತನ ಅನುಗೃಹವೂ ಪ್ರಾಪ್ತಿಯಾಗುತ್ತದೆ. ಹಿಂದೆ ಪ್ರತಿ ಮನೆಯಲ್ಲಿ ಗೋವುಗಳಿದ್ದವು. ಈಗ ಗೋವು ಸಾಕುವವರ ಸಂಖ್ಯೆಯೂ ಕಡಿಮೆಯಾಗಿದೆ. ಗೋ ಸಂಪತ್ತು ಉಳಿಸುವ ಕಾರ್ಯ ಸಮಾಜದ ಎಲ್ಲರಿಂದಲೂ ಆಗಬೇಕು.

-ಪ್ರೊ.ಎಂ.ಬಿ. ಪುರಾಣಿಕ್,

ವಿಶ್ವಹಿಂದು ಪರಿಷತ್ ಪ್ರಾಂತ ಕಾರ್ಯಾಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net