

ಬೆಳಗಾವಿ: ಪ್ರತಿ ಮನೆಗೆ ಒಬ್ಬರು ಯೋಗ ಶಿಕ್ಷಕರಿದ್ದರೆ ಆರೋಗ್ಯಯುತ ಸಮಾಜ ನಿರ್ಮಾಣವಾಗುತ್ತದೆ ಎಂದು ಯೋಗ ಗುರು, ಪತಂಜಲಿ ಯೋಗ ಪೀಠ ಕರ್ನಾಟಕದ ರಾಜ್ಯ ಪ್ರಭಾರಿ ಭವರಲಾಲ್ ಆರ್ಯ ಹೇಳಿದರು.
ಬೆಳಗಾವಿ ಪತಂಜಲಿ ಯೋಗ ಸಮಿತಿಯಿಂದ ನಗರದ ಇನ್‌ಸ್ಟಿಟ್ಯೂಟ್ ಆ್ ಇಂಜಿನಿಯರ್ಸ್ ಬೆಳಗಾವಿ ವಿಭಾಗದ ಸಭಾಭವನದಲ್ಲಿ ಶನಿವಾರ ಆಯೋಜಿಸಿದ್ದ ಪತಂಜಲಿ ಯೋಗ ಶಿಕ್ಷಕರ ತರಬೇತಿ ಶಿಬಿರದ ಸಮಾರೋಪದಲ್ಲಿ ಅವರು ಮಾತನಾಡಿದರು.
ಬೆಳಗಾವಿ ಪತಂಜಲಿ ಯೋಗ ಸಮಿತಿ ಒಂದು ತಿಂಗಳಿನಿಂದ ನೂರಾರು ಸಾಧಕರಿಗೆ ಯೋಗ ಶಿಕ್ಷಕರ ತರಬೇತಿ ನೀಡಿ ಅವರನ್ನು ಪರಿಪೂರ್ಣ ಯೋಗ ಶಿಕ್ಷಕರನ್ನಾಗಿಸಿದೆ. ಈ ತರಬೇತಿ ಪಡೆದ ಶಿಬಿರಾರ್ಥಿಗಳು ಯೋಗ ಶಿಕ್ಷಕರಾಗಿದ್ದೀರಿ. ನೀವು ಸಾರ್ವಜನಿಕ ಸ್ಥಳಗಳಲ್ಲಿ ಯೋಗ ಕಲಿಸಿಕೊಡುವ ಮೂಲಕ ಸಾರ್ವಜನಿಕರ ಆರೋಗ್ಯ ಕಾಪಾಡಬಹುದು ಎಂದರು.
ಪತಂಜಲಿ ಯೋಗ ಸಮಿತಿ ಉತ್ತರ ಕರ್ನಾಟಕದ ರಾಜ್ಯ ಪ್ರಭಾರಿ ಕಿರಣ ಮನ್ನೋಳ್ಕರ್ ಮಾತನಾಡಿ, ನಾವು ಕಲಿತ ಯೋಗ, ಪ್ರಾಣಾಯಾಮ, ಧ್ಯಾನದ ಅಭ್ಯಾಸವನ್ನು ಇತರರಿಗೂ ಕಲಿಸೋಣ. ಯೋಗಕ್ಕೆ ಇತಿಮಿತಿ ಇಲ್ಲ. ಸಂಪೂರ್ಣ ಜೀವನವೇ ಯೋಗ ಕಲಿಕೆಗೆ ಇದೆ ಎಂದರು.
ಪತಂಜಲಿ ಕಿಸಾನ್ ಸೇವಾ ಸಮಿತಿ, ಕರ್ನಾಟಕದ ರಾಜ್ಯ ಪ್ರಭಾರಿ ಸಂಜಯ ಕುಸ್ತಿಗಾರರು ಮಾತನಾಡಿ, ಯೋಗ ನಮ್ಮ ಜೀವನದ ಅವಿಭಾಜ್ಯ ಅಂಗವಾಗಬೇಕು. ಕೃಷಿಕರಾಗಿದ್ದಲ್ಲಿ ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಳ್ಳೋಣ. ನೈಸರ್ಗಿಕ ಆರೋಗ್ಯಕರ ಆಹಾರ ಸೇವಿಸೋಣ. ಕೃಷಿಕರಲ್ಲದವರು ಮನೆ ಸುತ್ತಲಿನ ಖಾಲಿ ಜಾಗಗಳಲ್ಲಿ ಸಾವಯವ ಕೃಷಿ ಮಾಡೋಣ ಎಂದರು. ಪತಂಜಲಿ ಯೋಗ ಸಮಿತಿ ಬೆಳಗಾವಿಯ ಜಿಲ್ಲಾ ಪ್ರಭಾರಿ ಮೋಹನ ಬಾಗೇವಾಡಿ, ಜಿಲ್ಲಾ ಸಮಿತಿ ಸದಸ್ಯರಾದ ಜ್ಯೋತಿಬಾ ಭದ್ವಾಂಕರ, ಚಂದ್ರಕಾಂತ ಖಂಡಾಗಲೇ, ಪಟೇಲ್ ಜೀ, ರಮೇಶ ಮಹಡಿಕ್, ಸಂಗೀತ ಕೋನಾಪುರೆ, ರೂಪಾ ಕೊಠಾರಿ, ಅಂಜನಾ ಹಲಕರ್ಣಿ, ವಿನಾಯಕ ಮನ್ನೋಲ್ಕರ್, ವಿದ್ಯಾ ಅನಂತ ಜೋಶಿ, ಶ್ರೀದೇವಿ, ಚೈತನ್ಯ, ಚಿಕ್ಕೋಡಿ ಜಿಲ್ಲಾ ಸಂಯೋಜಕ ಬಾಲಕೃಷ್ಣ ಕೊಳೇಕರ, ಗೋಕಾಕ ತಾಲೂಕು ಪ್ರಭಾರಿ ಯಲ್ಲಪ್ಪ ಕುರುಬಗಟ್ಟಿ ಇತರರಿದ್ದರು. ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.