ಸೂಕ್ತ ನಿರ್ವಹಣೆಯಿಂದ ರೋಗ ಹತೋಟಿ

sri krushi
ಶೃಂಗೇರಿಯಲ್ಲಿ ಎಲೆಚುಕ್ಕಿ ರೋಗಪೀಡಿತ ತೋಟದಲ್ಲಿ ಶಿವಮೊಗ್ಗ ನವುಲೆ ಅಡಕೆ ಸಂಶೋಧನಾ ಕೇಂದ್ರದ ವಿಜ್ಞಾನಿಗಳು ಪರಿಶೀಲಿಸಿದರು. ಡಾ. ಶ್ರೀಶೈಲ್ ಸೋನಿಯಲ್, ಡಾ. ಪ್ರಶಾಂತ್, ಡಾ. ಪ್ರದೀಪ್, ಶ್ರೀಕೃಷ್ಣ ಇತರರಿದ್ದರು.
Published on

ಶೃಂಗೇರಿ: ಅತಿಯಾದ ಮಳೆಯಿಂದ ಅಡಕೆಗೆ ಎಲೆಚುಕ್ಕಿ ರೋಗ ಕಾಣಿಸಿಕೊಂಡಿದೆ. ಸೂಕ್ತ ನಿರ್ವಹಣಾ ಕ್ರಮಗಳನ್ನು ಅಳವಡಿಸಿಕೊಂಡರೆ ರೋಗವನ್ನು ಸಂಪೂರ್ಣವಾಗಿ ಹತೋಟಿಗೆ ತರಬಹುದು ಎಂದು ಶಿವಮೊಗ್ಗ ನವುಲೆ ಅಡಕೆ ಸಂಶೋಧನಾ ಕೇಂದ್ರದ ಸಹಪ್ರಾಧ್ಯಾಪಕ ಡಾ. ನಾಗರಾಜಪ್ಪ ಅಡಿವಪ್ಪರ್ ತಿಳಿಸಿದರು.

ತಾಲೂಕಿನ ಎಲೆಚುಕ್ಕಿ ರೋಗ ತೋಟಗಳನ್ನು ವೀಕ್ಷಿಸಿ ಮಾತನಾಡಿದ ಅವರು, ಅಡಕೆ ಸೋಗೆಗಳ ಮೇಲೆ ಹಳದಿ ಮತ್ತು ಕಪ್ಪುಬಣ್ಣದ ಚಿಕ್ಕಗಾತ್ರದ ಚುಕ್ಕಿಗಳನ್ನು ಶಿಲೀಂಧ್ರ ಉಂಟುಮಾಡುತ್ತದೆ. ಅಂತಹ ಚುಕ್ಕಿಗಳ ಸುತ್ತ ಹಳದಿ ಬಣ್ಣದ ಆವರಣವಿದ್ದು ಗರಿಗಳು ಒಣಗಲು ಪ್ರಾರಂಭವಾಗಿ ಅಸ್ತಿತ್ವ ಕಳೆದುಕೊಳ್ಳತ್ತವೆ. ಇಂಥ ಸಂದರ್ಭದಲ್ಲಿ ಕೊಟ್ಟಿಗೆ ಗೊಬ್ಬರದ ಜತೆ ಶಿಫಾರಿತ ಪೋಷಕಾಂಶಗಳಾದ ಸಾರಜನಕ, ರಂಜಕ, ಪೊಟ್ಯಾಶ್ ನೀಡಬೇಕು. ಹೆಚ್ಚಿನ ಮಾಹಿತಿಗಾಗಿ ತಾಲೂಕಿನ ಅಡಕೆ ಸಂಶೋಧನಾ ಕೇಂದ್ರ, ತೋಟಗಾರಿಕೆ ಇಲಾಖೆಯನ್ನು ಸಂಪರ್ಕಿಸಬಹುದು ಎಂದು ಹೇಳಿದರು.
ಶಿವಮೊಗ್ಗದ ಸಸ್ಯರೋಗ ಶಾಸ್ತ್ರ ತಜ್ಞ ಡಾ. ಶ್ರೀಶೈಲ್ ಸೋನಿಯಲ್ ಮಾತನಾಡಿ, ರೋಗ ಬಾಧಿತ ಒಣಗಿದ ಗರಿಗಳನ್ನು ತೆಗೆದು ನಾಶಮಾಡಬೇಕು. ತೋಟಗಳಲ್ಲಿ ಬಿಸಿಲು ಬೀಳುವಂತೆ ಮಾಡಲು ಅಂತರ್ ಬೆಳೆಗಳ ರೆಂಬೆಗಳನ್ನು ಕತ್ತರಿಸಬೇಕು. ಶಿಲೀಂಧ್ರವು ರೋಗಗ್ರಸ್ತ ಗರಿಗಳಲ್ಲಿ ವಾಸವಾಗುತ್ತದೆ. ಮಳೆಹನಿಗಳ ಚಿಮ್ಮುವಿಕೆಯಿಂದ ಶಿಲೀಂಧ್ರದ ಕಣಗಳು ಗಾಳಿಗೆ ಸೇರಿ ಹೊಸಗರಿಗಳನ್ನು ಪ್ರವೇಶಿಸುತ್ತದೆ. ಹಾಗಾಗಿ ಮಣ್ಣಿನ ರಸಸಾರಕ್ಕೆ ಅನುಗುಣವಾಗಿ ಭೂಮಿಗೆ ಸುಣ್ಣ ನೀಡಬೇಕು ಎಂದು ಹೇಳಿದರು.
ರೈತರಾದ ನಟರಾಜ್, ಚಂದ್ರಶೇಖರ್, ಶಿವಶಂಕರ್, ಕಾರಬೈಲು ಚಂದ್ರಶೇಖರ್, ನಾಗರತ್ನಮ್ಮ, ಸುಬ್ರಹ್ಮಣ್ಯ ಇತರರ ರೋಗಪೀಡಿತ ತೋಟಗಳಿಗೆ ವಿಜ್ಞಾನಿ ತಂಡ ಭೇಟಿ ನೀಡಿತು. ಶಿವಮೊಗ್ಗದ ಡಾ. ಪ್ರದೀಪ್ ಗೋಪಾಕ್ಕಳಿ, ಡಾ. ಪ್ರಶಾಂತ್, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಶ್ರೀಕೃಷ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net