ರಕ್ತದಾನದಿಂದ ರೋಗಗಳು ನಿಯಂತ್ರಣ

Bankapura
Published on

ಶಿಗ್ಗಾಂವಿ(ಗ್ರಾ): ವರ್ಷದಲ್ಲಿ ಮೂರು ಬಾರಿ ಮಹಿಳೆಯರು ಮತ್ತು ನಾಲ್ಕು ಬಾರಿ ಪುರುಷರು ರಕ್ತದಾನ ಮಾಡುವುದರಿಂದ ಹೃದಯಾಘಾತ, ಬೊಜ್ಜಿನಂತಹ ರೋಗಗಳನ್ನು ತಡೆಗಟ್ಟಬಹುದು ಎಂದು ಹಾವೇರಿ ರಕ್ತ ನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ. ಬಸವರಾಜ ತಳವಾರ ಹೇಳಿದರು.

ತಾಲೂಕಿನ ಕಬನೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಗತ್‌ಸಿಂಗ್ ಯುವ ಸೇನೆ, ಜಿಲ್ಲಾ ಆಸ್ಪತ್ರೆ ಹಾವೇರಿ ರಕ್ತ ನಿಧಿ ಕೇಂದ್ರ ಹಾಗೂ ಸಾರ್ವಜಕ ಆಸ್ಪತ್ರೆ ಶಿಗ್ಗಾಂವಿ ಸಹಯೋಗದಲ್ಲಿ ಶನಿವಾರ ಏರ್ಪಡಿಸಿದ್ದ ರಕ್ತದಾನ ಶಿಬಿರದಲ್ಲಿ ಅವರು ಮಾತನಾಡಿದರು. ಎಲ್ಲರೂ ಸ್ವಯಂ ಪ್ರೇರಿತರಾಗಿ ಬಂದು ರಕ್ತದಾನ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು. ಅಂದಾಗ ಮಾತ್ರ ಇನ್ನೊಬ್ಬರ ಮರಣವನ್ನು ತಡೆಯಲು ಸಾಧ್ಯವಾಗುತ್ತದೆ ಎಂದರು.

ಜಿಪಂ ಮಾಜಿ ಸದಸ್ಯ ಬಿ.ಟಿ. ಇನಾಮತಿ ಮಾತನಾಡಿ, ಯುವಕರು ಹೆಚ್ಚು ಹೆಚ್ಚು ರಕ್ತದಾನ ಮಾಡುವ ಹವ್ಯಾಸ ಬೆಳೆಸಿಕೊಳ್ಳಬೇಕು ಮತ್ತು ಯುವಕರು ದುಶ್ಚಟಕ್ಕೆ ಬಲಿಯಾಗದ ರೀತಿಯಲ್ಲಿ ಜಾಗೃತರಾಗಬೇಕು ಎಂದರು.

ಶಿಬಿರದಲ್ಲಿ 45ಕ್ಕೂ ಅಧಿಕ ಜನ ರಕ್ತದಾನ ಮಾಡಿದರು. ಅಶೋಕ ಓಲೇಕಾರ, ಚೇತನ.ಬಿ, ಕೆ.ಬಿ.ಇನಾಮತಿ, ಎಸ್.ಎಸ್. ಮುತ್ತಗಿ, ಆರೋಗ್ಯ ಇಲಾಖೆ ಸಿಬ್ಬಂದಿಗಳಾದ ಬಸವರಾಜ ಕಮತದ, ಪುಷ್ಪಾವತಿ, ಸಿದ್ದು ಹಿರಗಣ್ಣವರ, ಸೌಭಾಗ್ಯ ಕಬನೂರ. ಭಗತ್‌ಸಿಂಗ್ ಯುವಸೇನೆಯ ಪದಾಧಿಕಾರಿಗಳು ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net