ಆಡಳಿತ ಮಂಡಳಿ, ಶೇರುದಾರರ ಮಧ್ಯೆ ವಾಕ್ಸಮರ

JLR ph 1 Sep 23 Varshika Mahasabe-
Published on

ಜಗಳೂರು: ಷೇರುದಾರರಿಗೆ ಬಾಂಡ್ ವಿತರಿಸದ ಹಿನ್ನೆಲೆ ಗೊಂದಲದ ಗೂಡಾದ ಸೊಕ್ಕೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಶನಿವಾರ ರದ್ದುಗೊಂಡಿತು.
ಸಂಘದ ಕಚೇರಿ ಆವರಣದಲ್ಲಿ ಶನಿವಾರ ಅಧ್ಯಕ್ಷ ಎ.ಕೆ ಚೌಡಪ್ಪ ಇವರ ಅಧ್ಯಕ್ಷತೆಯಲ್ಲಿ ವಾರ್ಷಿಕ ಮಹಾಸಭೆ ಆಯೋಜಿಸಲಾಗಿತ್ತು. ಆದರೆ ಸರಿಯಾದ ಸಮಯಕ್ಕೆ ಷೇರುದಾರರು, ರೈತರು ಆಗಮಿಸದೇ ಮಧ್ಯಾಹ್ನ 12.30 ಆರಂಭಗೊಂಡಿತು.
ಹಿಂದಿನ ವಾರ್ಷಿಕ ಮಹಾಸಭೆಯ ನಡಾವಳಿಗಳನ್ನು ಸಂಘದ ಸಿಇಒ ಡಿ.ಎಚ್ ಜಗದೀಶ್ ಸಭೆಯಲ್ಲಿ ಮಂಡಿಸುತ್ತಿದ್ದಂತೆ ನೆರೆದಿದ್ದ ಷೇರುದಾರರು- ರೈತರು, ಮೊದಲು ಎಷ್ಟು ಜನ ಷೇರುದಾರರಿದ್ದಾರೆ. ಸಾಲ ಎಷ್ಟು ಮಂಜೂರಾಗಿದೆ. ಬಾಂಡ್‌ಗಾಗಿ 10 ಸಾವಿರ ರೂಗಳನ್ನು ಪಡೆದಿರುವ ತಾವು ಬಾಂಡ್‌ಗಳನ್ನು ಏಕೆ ವಿತರಣೆ ಮಾಡಿಲ್ಲ ಎಂದು ಪ್ರಶ್ನಿಸಿದರು.
1976ರಲ್ಲಿ ಸಂಘ ಆರಂಭವಾಗಿದ್ದು ಅಂದಿನಿಂದ ಈವರೆಗೂ ರೈತರಿಗೆ ಅನ್ಯಾಯವಾಗುತ್ತಿದೆ. ಮಂಜೂರಾದ ಸಾಲವನ್ನು ನೇರವಾಗಿ ರೈತರ ಖಾತೆಗೆ ಜಮಾ ಮಾಡುತ್ತಿಲ್ಲ. ಒಟ್ಟು ಸಂಘದಲ್ಲಿ 1090 ಷೇರುದಾರರಿದ್ದು, ಅದರಲ್ಲಿ 819 ಸದಸ್ಯರು ಸಾಲ ಸೌಲಭ್ಯ ಪಡೆದುಕೊಂಡಿದ್ದಾರೆ. ಸಾಲ ಪಡೆದವರಿಂದ ಬಾಂಡ್ ಸೇರಿದಂತೆ ವಿವಿಧ ಕಾರಣಗಳ ನೆಪವೊಡ್ಡಿ ಸಾವಿರಾರು ರೂಪಾಯಿಗಳನ್ನು ಕಡಿತ ಮಾಡುತ್ತಾರೆ. ಹಾಗಾದರೆ ಕೋಟ್ಯಂತರ ರೂ. ಏನಾಗಿದೆ. ರೈತರಿಗೆ ಬಾಂಡ್ ವಿತರಣೆ ಮಾಡಿಲ್ಲ. ಸಣ್ಣವರಿಂದ ದೊಡ್ಡ ಅಧಿಕಾರಿಗಳವರೆಗೂ ಭ್ರಷ್ಟಚಾರ ಮಾಡಿದ್ದಾರೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ತನಿಖೆ ನಡೆಸಬೇಕು ಎಂದು ಷೇರುದಾರ ಮಾರಪ್ಪ, ಮಲ್ಲೇಶ್ ಒತ್ತಾಯಿಸಿದರು.
ಸಿಇಒ ವಿರುದ್ಧ ಮುಗಿ ಬಿದ್ದ ಷೇರುದಾರರು:
ಕಳೆದ ನಾಲ್ಕು ವರ್ಷಗಳಿಂದಲೂ ಸಂಘದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳಾಗಿಲ್ಲ. ಮುಂಗಾರಿನಲ್ಲಿ ಗೊಬ್ಬರ, ಬೀಜ ವಿತರಣೆ ಮಾಡಲು ಸಾಧ್ಯವಾಗಿಲ್ಲ. ಸಾಲ ಕೊಡುವಾಗ 1 ಲಕ್ಷಕ್ಕೆ 15 ಸಾವಿರ ರೂ.ಗಳವರೆಗೆ ಕಡಿತ ಮಾಡಿ ಉಳಿದ ಹಣವನ್ನು ತಿಂಗಳಿಗೋ ಅಥವಾ ಎರಡು ತಿಂಗಳಿಗೋ ಖಾತೆಗಳಿಗೆ ಜಮಾ ಮಾಡುತ್ತಾರೆ. ಆದರೆ ಈವರೆಗೂ ಒಬ್ಬ ರೈತರಿಗೂ ಬಾಂಡ್ ಕೊಟ್ಟಿಲ್ಲ. ಹಾಗಾಗಿ ಬಾಂಡ್ ಕೊಡಿ ಇಲ್ಲವೇ ಹಣ ವಾಪಸು ಕೊಡುವಂತೆ ಷೇರುದಾರರು ಸಿಇಒ ವಿರುದ್ಧ ಮುಗಿಬಿದ್ದರು.

"ವಾರ್ಷಿಕ ಸಭೆ ಹಮ್ಮಿಕೊಳ್ಳಲಾಗಿತ್ತು. ಆದರೆ ಷೇರುದಾರರು ಬಾಂಡ್ ನೀಡುವವರೆಗೂ ಸಭೆಯನ್ನು ನಡೆಸುವಂತಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಆದ್ದರಿಂದ ಮುಂದಿನ ವಾರ್ಷಿಕ ಸಭೆಯ ದಿನವನ್ನು ಮತ್ತೆ ತಿಳಿಸಲಾಗುವುದು."
ಡಿ.ಎಚ್. ಜಗದೀಶ್, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net