

ಬೆಂಗಳೂರು: ಬೆಂಗಳೂರಿನ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ತಮ್ಮ ಸಲಹೆ ನೀಡಿದ್ದಾರೆ. ಸುರಂಗ ರಸ್ತೆ, ಫ್ಲೈ ಓವರ್ ಅಥವಾ ಇತರೆ ಮಾದರಿ ಯೋಜನೆ ಜಾರಿ ಮಾಡಲು ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಲು ತಿಳಿಸಿದ್ದಾರೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ, ಡಿಸಿಎಂ ಡಿ.ಕೆ.ಶಿವಕುಮಾರ್ ಸುದ್ದಿಗಾರರಿಗೆ ವಿವರಿಸಿದ್ದಾರೆ.
ಬೆಂಗಳೂರು ಸಂಚಾರ ದಟ್ಟಣೆ ನಿವಾರಣೆ ಸಂಬಂಧ ಕೇಂದ್ರ ಸಚಿವ ನಿತಿನ್ ಗಡ್ಕರಿ ಜತೆ ಚರ್ಚೆ ಮಾಡಲಾಗಿದ್ದು, ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ವಿಸ್ತೃತ ಯೋಜನಾ ವರದಿ ಸಲ್ಲಿಸುವಂತೆ ತಿಳಿಸಿದ್ದಾರೆ ಎಂದರು.ಈಗಾಗಲೇ ಬಿಬಿಎಂಪಿ ಹಾಗೂ ಬಿಡಿಎ ಮೂಲಕ ಎಕ್ಸೃ್ ಪ್ರೆಷನ್ ಆಫ್ ಇ-ಟ್ರಸ್ಟ್ ಮೂಲಕ ಜಾಗತಿಕ ಟೆಂಡರ್ ಕರೆಯಲಾಗಿದ್ದು, ಟೆಂಡರ್ ಸಲ್ಲಿಕೆಗೆ ಆಗಸ್ಟ್ 8 ಕೊನೇ ದಿನವಾಗಿದೆ ಎಂದು ಹೇಳಿದರು.
ಬೆಂಗಳೂರು ಸಂಚಾರ ದಟ್ಟಣೆ ನಿವಾರಣೆ ಸಂಬಂಧ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ನಿನ್ನೆ ಭೇಟಿ ಮಾಡಿ ಚರ್ಚಿಸಿದ್ದೇನೆ. ಬೆಂಗಳೂರಿನಲ್ಲಿ ನಾಲ್ಕು ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗಿದ್ದು, ಈ ರಸ್ತೆಗಳ ಮೂಲಕ ಬೆಂಗಳೂರಿಗೆ ಹೆಚ್ಚಿನ ವಾಹನಗಳು ಆಗಮಿಸಿ ಸಂಚಾರ ದಟ್ಟಣೆಗೆ ಕಾರಣವಾಗಿವೆ. ಈ ಸಂಚಾರ ದಟ್ಟಣೆ ನಿವಾರಣೆಗೆ ಕೇಂದ್ರ ಹೆದ್ದಾರಿ ಪ್ರಾಧಿಕಾರದ ಮೂಲಕ ಕ್ರಮ ಕೈಗೊಳ್ಳಬೇಕು. ಅದಕ್ಕೆ ಬೇಕಾದ ಸಹಕಾರ ನೀಡಬೇಕು ಎಂದು ಕೋರಿದ್ದೇನೆ ಎಂದರು.
ಸಂಚಾರ ದಟ್ಟಣೆ ನಿಯಂತ್ರಣ ಮಾಡಿ ಬೆಂಗಳೂರಿನ ಚಿತ್ರಣ ಬದಲಿಸಬೇಕಿದೆ. ದೆಹಲಿ, ಮುಂಬೈ ನಗರಗಳಲ್ಲೂ ಸಂಚಾರ ದಟ್ಟಣೆ ಹೆಚ್ಚಾಗಿದ್ದರೂ, ಬೆಂಗಳೂರನ್ನು ಜಾಗತಿಕ ನಗರ ಎಂದು ಸ್ವೀಕರಿಸಿರುವ ಹಿನ್ನೆಲೆಯಲ್ಲಿ ಕೇವಲ ಬೆಂಗಳೂರಿನ ಸಂಚಾರ ದಟ್ಟಣೆ ಬಗ್ಗೆ ಮಾತ್ರ ಹೆಚ್ಚಾಗಿ ಮಾತನಾಡುತ್ತಾರೆ. ಸಂಚಾರ ದಟ್ಟಣೆ ನಿವಾರಣೆಗೆ ಕಾರ್ಯಕ್ರಮ ರೂಪಿಸಲು ನಾವು ಸಜ್ಜಾಗುತ್ತಿದ್ದೇವೆ ಎಂದು ವಿವರಿಸಿದರು.
ಈಗಾಗಲೇ ಚೀನಾ, ಸಿಂಗಾಪುರ, ಇಸ್ರೇಲ್ ಸೇರಿದಂತೆ ಹತ್ತಾರು ಕಂಪನಿಗಳು ಬಂದು ತಮ್ಮ ವಿಚಾರ ತಿಳಿಸಿವೆ. ಈ ಕಂಪನಿಗಳಿಗೆ ಈಗಾಗಲೇ ಎಕ್ಸೃ್ಪ್ರೆಷನ್ ಆಫ್ ಇ-ಟ್ರಸ್ಟ್ ಮೂಲಕ ಕರೆಯಲಾಗಿರುವ ಟೆಂಡರ್‌ನಲ್ಲಿ ಭಾಗವಹಿಸಿ, ಇಡೀ ಯೋಜನೆ ಹೇಗೆ ಜಾರಿ ಮಾಡಬಹುದು ಎಂದು ವಿವರಿಸುವಂತೆ ತಿಳಿಸಿದ್ದೇವೆ ಎಂದರು.