

ಲಕ್ಷ್ಮೇಶ್ವರ: ಬ್ಯಾನರ್, ಕಟೌಟ್ ಅಳವಡಿಸುವುದು, ನಿಯಮ ಮೀರಿ ಅಭಿಮಾನದ ಸಂಭ್ರಮಾಚರಣೆ ಆಚರಿಸುವುದಕ್ಕೆ ಸರ್ಕಾರ ಕೆಲ ನಿರ್ಬಂಧಗಳನ್ನು ವಿಧಿಸಬೇಕು ಎಂಬ ಮಾತುಗಳು ಕೇಳಿ ಬರುತ್ತಿವೆ. ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಕಟ್ಟುನಿಟ್ಟಿನ ನಿಯಮ ಜಾರಿಗೊಳಿಸಲಾಗುವುದು ಎಂದು ಸಚಿವ ಎಚ್.ಕೆ. ಪಾಟೀಲ ಸುಳಿವು ನೀಡಿದರು.
ತಾಲೂಕಿನ ಸೂರಣಗಿ ಗ್ರಾಮದಲ್ಲಿ ಚಿತ್ರನಟ ಯಶ್ ಕಟೌಟ್ ನಿಲ್ಲಿಸುವ ಸಂದರ್ಭದಲ್ಲಿ ವಿದ್ಯುತ್ ತಂತಿ ಸ್ಪರ್ಶದಿಂದ ಮೃತಪಟ್ಟಿದ್ದ ಮೂವರು ಯುವಕರ ಮನೆಗೆ ಶುಕ್ರವಾರ ಭೇಟಿ ನೀಡಿ, ಪರಿಹಾರದ ಚೆಕ್ ವಿತರಿಸಿ ಪತ್ರಕರ್ತರೊಂದಿಗೆ ಮಾತನಾಡಿ ಸಚಿವರು, ವಿದ್ಯುತ್ ಅವಘಡದಲ್ಲಿ ಸಾವಿಗೀಡಾದ ಯುವಕರು ಈ ಕುಟುಂಬಕ್ಕೆ ಆಧಾರವಾಗಿದ್ದರು. ಇಂತಹ ದುರ್ಘಟನೆಗಳು ಸಂಭವಿಸುವುದು ದುರ್ದೈವದ ಸಂಗತಿ. ಇಂತಹ ಘಟನೆಗಳು ಮರುಕಳಿಸಬಾರದು ಎಂದರು.
ಶಾಸಕರಾದ ಜಿ.ಎಸ್. ಪಾಟೀಲ ಮಾತನಾಡಿ, ಮೃತರ ಕುಟುಂಬಕ್ಕೆ ಮಾದಿಗ ಅಭಿವೃದ್ಧಿ ನಿಗಮದಿಂದ ಸೌಲಭ್ಯ, ಸಹಾಯಧನ ಕೊಡಿಸುವ ಬಗ್ಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.