ಕಾರ್ಯಪ್ಪ ಕಾಲೇಜು ಕುರಿತು ಸಿಎಂ ಜತೆ ಚರ್ಚೆ: ಎಂ.ಸಿ.ನಾಣಯ್ಯ ಭರವಸೆ

17adarshkdga1
Published on

ಮಡಿಕೇರಿ: ಅಮೃತ ಮಹೋತ್ಸವದ ಸಂಭ್ರಮದಲ್ಲಿರಬೇಕಾದ ಫೀ.ಮಾ.ಕೆ.ಎಂ.ಕಾರ್ಯಪ್ಪ ಕಾಲೇಜು ಇಂದು ಮಂಗಳೂರು ವಿಶ್ವ ವಿದ್ಯಾನಿಲಯ ಮತ್ತು ಕೊಡಗು ವಿಶ್ವವಿದ್ಯಾನಿಲಯದ ಮಧ್ಯೆ ಸಿಲುಕಿ ಮೂಲಭೂತ ಸಮಸ್ಯೆಯನ್ನು ಎದುರಿಸುತ್ತಿದೆ. ಈ ಬಗ್ಗೆ ಮುಖ್ಯಮಂತ್ರಿಗಳ ಗಮನಸೆಳೆದು ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳುವುದಾಗಿ ಮಾಜಿ ಸಚಿವ ಮೇರಿಯಂಡ ಸಿ.ನಾಣಯ್ಯ ಭರವಸೆ ನೀಡಿದರು.


ಕೊಡವ ಮಕ್ಕಡ ಕೂಟ, ಮಂಗಳೂರು ವಿಶ್ವವಿದ್ಯಾನಿಲಯದ ಕೊಡವ ಸಾಂಸ್ಕೃತಿಕ ಅಧ್ಯಯನ ಪೀಠ ಮತ್ತು ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಕಾಲೇಜಿನ ಸಭಾಂಗಣದಲ್ಲಿ ಲೇಖಕ ನಾಗೇಶ್ ಕಾಲೂರು ಬರೆದಿರುವ ಶ್ರೀ ಕಾವೇರಿ ದರ್ಶನಂ ಮತ್ತು ಕೊಡಗಿನಿಂದ ಗಿರಿಯವರೆಗೆ(ಮೂಲ ಲೇಖಕರು ದಿ.ಮಳವಂಡ ಗೌರಮ್ಮ ಅಚ್ಚಯ್ಯ) ಕೃತಿಗಳ ಬಿಡುಗಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.


ಮೂಲಭೂತ ಸೌಲಭ್ಯಗಳಿಂದ ವಂಚಿತವಾಗುತ್ತದೆ ಎಂಬ ಕಾರಣಕ್ಕೆ ತನ್ನ ಅಧಿಕಾರ ಅವಧಿಯಲ್ಲಿಯೇ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜನ್ನು ಮಂಗಳೂರು ವಿಶ್ವ ವಿದ್ಯಾನಿಲಯದ ಭಾಗವಾಗಿ ಮಾಡಲಾಗಿತ್ತು. ಆದರೆ, ಇಂದು ಕೊಡಗಿನ ಪ್ರತಿಷ್ಠಿತ ಕಾಲೇಜು ಮೂಲಭೂತ ಸಮಸ್ಯೆಗಳನ್ನು ಎದುರಿಸುತ್ತಿರುವುದು ಬೇಸರದ ವಿಚಾರ ಎಂದ ಅವರು, ಇದು ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದ ಮೇಲೆ ಪ್ರಭಾವ ಬೀರಲಿದೆ ಎಂದು ಆತಂಕ ವ್ಯಕ್ತಪಡಿಸಿದರು.


ತಾನು ಈ ಕಾಲೇಜಿನ ಹಳೇ ವಿದ್ಯಾರ್ಥಿಯಾಗಿದ್ದು, ಕಾಲೇಜಿನ ಸಮಸ್ಯೆಯನ್ನು ಮುಖ್ಯಮಂತ್ರಿಗಳ ಬಳಿ ಚರ್ಚಿಸಿ ಸಮಸ್ಯೆ ಪರಿಹಾರಕ್ಕೆ ಮುಂದಾಗುವುದಾಗಿ ತಿಳಿಸಿದರು.


ಸಾಹಿತಿ ನಾಗೇಶ್ ಕಾಲೂರು ಮಾತನಾಡಿ, ಪ್ರಕೃತಿಯನ್ನು ಉಳಿಸಬೇಕು. ರಾಸಾಯನಿಕ ಗೊಬ್ಬರಗಳ ಬಳಕೆ ಕಡಿಮೆ ಮಾಡಬೇಕು. ಜಲ ಸಂರಕ್ಷಣೆಗೆ ಮುಂದಾಗಬೇಕೆಂದು ಕರೆ ನೀಡಿದರು.


ಶ್ರೀ ಕಾವೇರಿ ದರ್ಶನಂ ಪುಸ್ತಕ ಪ್ರಾಕೃತಿಕ ವಿಕೋಪದ ಸಂದರ್ಭ ಸೃಷ್ಠಿಯಾಯಿತು. ಪುರಾಣದಲ್ಲಿರುವ ವಿವಿಧ ವಿಚಾರವನ್ನು ಈ ಪುಸ್ತಕದಲ್ಲಿ ಉಲ್ಲೇಖಿಸಲಾಗಿದ್ದು, ಹಿಂದಿನ ಕಾಲದ ಹಲವು ಸಂಸ್ಕೃತಿಯನ್ನು ಇದರಲ್ಲಿ ಕ್ರೋಡಿಕರಿಸಲಾಗಿದೆ. ಇದರಲ್ಲಿ ೧೮ ಅಧ್ಯಾಯಗಳಿದ್ದು, ಬೇರೆ ಬೇರೆ ಕಥೆಗಳನ್ನು ಉಲ್ಲೇಖ ಮಾಡಲಾಗಿದೆ ಎಂದು ತಿಳಿಸಿದರು.


ವಿಪರೀತ ರಸಾಯನಿಕ ಗೊಬ್ಬರದ ಸಿಂಪಡಣೆ, ಕಳೆನಾಶಕ, ಯಂತ್ರಗಳ ಬಳಕೆಯಿಂದ ಕೊಡಗಿನಂತ ಸೂಕ್ಷ್ಮ ಪ್ರದೇಶದಲ್ಲಿ ಜಲಮೂಲಗಳನ್ನು ನಾಶ ಮಾಡುತ್ತಿದ್ದೇವೆ. ಕಾವೇರಿಯ ಒಡಲನ್ನು ಯಾವ ರೀತಿ ಶೋಷಣೆ ಮಾಡುತ್ತಿದ್ದೇವೆ ಎಂಬುವುದನ್ನು ಮನನ ಮಾಡಿಕೊಂಡು ಅದರ ರಕ್ಷಣೆಗೆ ಮುಂದಾಗಬೇಕು ಎಂದು ಕರೆ ನೀಡಿದರು.


ಮಂಗಳೂರು ವಿಶ್ವ ವಿದ್ಯಾನಿಲಯದ ನಿವೃತ್ತ ಪ್ರೊ.ಕೋಡಿರ ಲೋಕೇಶ್ ಮಾತನಾಡಿ, ಮನುಷ್ಯನ ಜೀವದಲ್ಲಿ ಧಾರ್ಮಿಕತೆ ಅತ್ಯಂತ ಮುಖ್ಯವೆನಿಸುತ್ತದೆ. ಧಾರ್ಮಿಕ ಜೀವನ ಪುರಾಣದಿಂದ ಕೂಡಿರುತ್ತದೆ. ಪುರಾಣ ಎಂಬುವುದು ಮನುಷ್ಯನ ನಂಬಿಕೆ. ಅದನ್ನ ತೆಗೆದು ಹಾಕಿದರೆ ಮನುಷ್ಯನ ಜೀವನ ಯಾಂತ್ರೀಕೃತಗೊಳ್ಳುತ್ತದೆ ಎಂದರು.


ಕೊಡಗಿನಿಂದ ಗಿರಿಯವರೆಗೆ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಪದ್ಮಶ್ರೀ ಐಮುಡಿಯಂಡ ರಾಣಿ ಮಾಚಯ್ಯ, ವಿದ್ಯಾರ್ಥಿಗಳು ತಾವು ಮಾಡುವ ಕೆಲಸವನ್ನು ಹೃದಯದಿಂದ ಮಾಡಬೇಕು. ತಮ್ಮ ಗುರಿಯನ್ನು ಸಾಧಿಸುವ ಛಲ ಹೊಂದಿರಬೇಕು. ಸಾಹಿತ್ಯ ಕ್ಷೇತ್ರದಲ್ಲಿ ಹೆಚ್ಚು ಗುರುತಿಸಿಕೊಳ್ಳಬೇಕು. ತಂದೆತಾಯಿಯನ್ನು ಸಮಾಜದಲ್ಲಿ ಗೌರವದಿಂದ ಕಾಣಬೇಕು ಎಂದರು.


ಕಾಲೇಜಿನ ಪ್ರಾಂಶುಪಾಲ ಪ್ರೊ. ಬಿ.ರಾಘವ ಮಾತನಾಡಿ, ಮಾಜಿ ಸಚಿವ ಎಂ.ಸಿ.ನಾಣಯ್ಯರವರು ಕಾಲೇಜಿನ ಸಮಸ್ಯೆಯನ್ನು ಪರಿಹರಿಸಲು ತಮ್ಮದೇ ಆದ ಪ್ರಯತ್ನ ಮಾಡಲು ಮುಂದಾಗಿರುವುದಕ್ಕೆ ಅಭಿನಂದನೆ ಸಲ್ಲಿಸಿದರು.


ವಿದ್ಯಾರ್ಥಿಗಳು ಮೊಬೈಲ್‌ಗಳಿಗೆ ಹೆಚ್ಚು ದಾಸರಾಗದೆ ತಮ್ಮದೇ ಆದ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುವ ಮೂಲಕ ಶೈಕ್ಷಣಿಕ ಜ್ಞಾನಾರ್ಜನೆಯನ್ನು ಸಂಪಾದಿಸಿಕೊಳ್ಳಬೇಕು ಎಂದು ಕರೆ ನೀಡಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜೀರ ಅಯ್ಯಪ್ಪ, ವಿದ್ಯಾರ್ಥಿಗಳು ಹೆಚ್ಚು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ಪುಸ್ತಕಗಳನ್ನು ಓದದಿದ್ದರೆ ಇತರರೊಂದಿಗೆ ವ್ಯವಹರಿಸಲು ಸಾಧ್ಯವಿಲ್ಲ. ಸಾಮಾಜಿಕ ಜಾಲತಾಣವನ್ನು ಉತ್ತಮ ಕಾರ್ಯಗಳಿಗೆ ಸದುಪಯೋಗ ಪಡಿಸಿಕೊಂಡು ಓದಿನೆಡೆಗೆ ಹೆಚ್ಚಿನ ಗಮನ ಹರಿಸಬೇಕು ಎಂದು ಕರೆ ನೀಡಿದರು.


ಕಾರ್ಯಕ್ರಮದಲ್ಲಿ ಐಮುಡಿಯಂಡ ರಾಣಿ ಮಾಚಯ್ಯ, ಶ್ರೀಕಾವೇರಿ ದರ್ಶನಂ ಲೇಖಕ, ಕೊಡಗಿನಿಂದ ಗಿರಿಯವರೆಗೆ(ಮೂಲ ಲೇಖಕರು ದಿ.ಮಳವಂಡ ಗೌರಮ್ಮ ಅಚ್ಚಯ್ಯ) ಭಾಷಾಂತರಕಾರ ನಾಗೇಶ್ ಕಾಲೂರು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.


ಕೊಡವ ಸಾಂಸ್ಕೃತಿಕ ಅಧ್ಯಯನ ಪೀಠದ ಸಂಯೋಜಕಿ ಡಾ.ಎಂ.ಎಂ.ಮೀನಾಕ್ಷಿ, ಬೊಪ್ಪಂಡ ಶಾಮ್ ಪೂಣಚ್ಚ, ಪುತ್ತರಿರ ವನಿತಾ ಮುತ್ತಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net