

ಹುಬ್ಬಳ್ಳಿ: ಬಸವಜಯ ಮೃತ್ಯುಂಜಯ ಸ್ವಾಮೀಜಿಗಳ ಹೋರಾಟದ ಬಗ್ಗೆ ಸಿಎಂ ಜತೆ ರ್ಚಚಿಸುವೆ. ಆ. 15ರ ನಂತರ ಸಿಎಂ ಜತೆ ಮತ್ತೊಮ್ಮೆ ಸಭೆ ನಡೆಸಲಾಗುವುದು. ಆಗ ಪಂಚಮಸಾಲಿ ಸಮಾಜದ ಬೇಡಿಕೆಗಳು ಈಡೇರಲಿವೆ ಎಂದು ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ ಭರವಸೆ ನೀಡಿದರು.
ನಗರದ ಗೋಕುಲ ರಸ್ತೆಯ ಖಾಸಗಿ ಹೋಟೆಲ್ನಲ್ಲಿ ಗುರುವಾರ ಏರ್ಪಡಿಸಿದ್ದ ಹುಬ್ಬಳ್ಳಿಯಲ್ಲಿ ಪಂಚಮಸಾಲಿ ಮೀಸಲಾತಿಗಾಗಿ ಚಳವಳಿಗಾರರ ಮಹತ್ವದ ದುಂಡು ಮೇಜಿನ ಸಭೆಯಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.
ಈಗಾಗಲೇ ಹೋರಾಟ ಮಾಡಿದ್ದರ ಮಾಹಿತಿ ಸಿಎಂ ಗಮನಕ್ಕೆ ಇದೆ. ಆದರೂ ಮತ್ತೊಮ್ಮೆ ಅವರಿಗೆ ವಿಷಯ ಮುಟ್ಟಿಸಲಾಗುವುದು. ಆತಂಕಪಡುವ ಅಗತ್ಯವಿಲ್ಲ ಎಂದರು.
ನ್ಯಾಯವಾದಿ ದಿನೇಶ ಪಾಟೀಲ ಮಾತನಾಡಿ, 3 ‘ಬಿ’ಯಲ್ಲಿ ಮೊದಲು 19 ಒಳಪಂಗಡಗಳನ್ನು ಸೇರಿಸಲಾಗಿತ್ತು. ಒಂದು ತಿಂಗಳಲ್ಲಿಯೇ 18 ಒಳಪಂಗಡಗಳನ್ನು ತೆಗೆದು 2 ಎ ಮೀಸಲಾತಿ ನೀಡಲಾಯಿತು. ಮೀಸಲಾತಿ ನೀಡಿದ್ದಕ್ಕೆ ನಮ್ಮ ಆಕ್ಷೇಪವಿಲ್ಲ. ಆದರೆ, ಸಮಾಜ ಕಲ್ಯಾಣ ಇಲಾಖೆ ನೀಡಿದ ಆದೇಶ ಆಧರಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ನಾವು ಕೊಟ್ಟ ಪಟ್ಟಿಯನ್ನು ಹಿಂದುಳಿದ ವರ್ಗಗಳ ಆಯೋಗ ಪಡೆದಿದೆ. ಅದಕ್ಕೆ ತಕಾರರು ಮಾಡಿದೆ. ಕಾನೂನಾತ್ಮಕವಾಗಿ ಕೇಳಿದ ಮೀಸಲಾತಿಗೆ ಈ ತರಹ ಅಡ್ಡಿಪಡಿಸುವ ಅಗತ್ಯವಿಲ್ಲ. ಈಗ ಕೇಂದ್ರ ಸರ್ಕಾರ ಒಬಿಸಿ ಮೀಸಲಾತಿಯನ್ನು ರಾಜ್ಯ ಸರ್ಕಾರಕ್ಕೆ ವಹಿಸಿದೆ. ಹಾಗಾಗಿ ನಮ್ಮ ಮೀಸಲಾತಿ ನಮಗೆ ಕೊಡಿ ಎಂದು ಆಗ್ರಹಿಸಿದರು.
ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವ ವಹಿಸಿದ್ದರು. ದಿನೇಶ ಪಾಟೀಲ, ಅನಿಲಕುಮಾರ ಪಾಟೀಲ, ಚಂದ್ರಶೇಖರ ಭದ್ರವಾಡಗಿ, ಗಿರೀಶ ಪಾಟೀಲ, ವೀರೇಶ ಉಂಡಿ, ಗಂಗಾಧರ ದೊಡ್ಡವಾಡ ಇತರರು ಇದ್ದರು.
ಮೊಳಗಿದ ಸಮಾಜದ ಧ್ವನಿ
ಪಂಚಮಸಾಲಿ ಮೀಸಲಾತಿಗಾಗಿ ಚಳವಳಿಗಾರರ ದುಂಡು ಮೇಜಿನ ಸಭೆ ರಾಜ್ಯದ ಧ್ವನಿಯಾಗಿ ಮಾರ್ಪಟ್ಟಿತು. ಬೆಳಗ್ಗೆಯಿಂದ ಏರ್ಪಡಿಸಿದ್ದ ಸಭೆಯಲ್ಲಿ ಮುಖಂಡರು ಮಾತನಾಡಿ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು. ಮೀಸಲಾತಿ ಸಿಗುವವರೆಗೆ ಹೋರಾಟ ನಿಲ್ಲಿಸುವುದು ಬೇಡ ಎಂಬ ಒಕ್ಕೊರಲಿನ ಅಭಿಪ್ರಾಯಕ್ಕೆ ಬರಲಾಯಿತು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನಿರ್ವಹಿಸಬೇಕಾದ ಕರ್ತವ್ಯ, ನಮ್ಮ ಹಕ್ಕುಗಳೇನು ಎನ್ನುವ ಕುರಿತು ಸುದೀರ್ಘ ಚರ್ಚೆ ನಡೆಸಲಾಯಿತು. ರಾಜ್ಯದ ಮೈಸೂರು, ಚಾಮರಾಜನಗರ, ಬೀದರ, ಬೆಳಗಾವಿ, ಬಳ್ಳಾರಿ, ಹಾವೇರಿ ಸೇರಿದಂತೆ ವಿವಿಧ ಜಿಲ್ಲೆಗಳ ಸಮಾಜದ ನಾಯಕರು ಆಗಮಿಸಿದ್ದರು.