

ಮೈಸೂರು: ನೆರೆ ಪೀಡಿತ ನಂಜನಗೂಡು ತಾಲೂಕು ಬೊಕ್ಕಹಳ್ಳಿ ಗ್ರಾಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೆವಪ್ಪ, ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಅವರು ಶನಿವಾರ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸಿದರು.
ಕಪಿಲಾ ನದಿಯ ಪ್ರವಾಹದಿಂದ ಹಾನಿ ಆಗಿರುವ ಬೆಳೆ ಹಾಗೂ ಮನೆಗಳಿಗೆ ನೀರು ನುಗ್ಗಿ ಹಾನಿ ಆಗಿರುವ ಕುರಿತು ಪರಿಶೀಲನೆ ನಡೆಸಿದ ಅವರು, ಬಳಿಕ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ಆರಂಭಿಸಿರುವ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ ಸಂತ್ರಸ್ತರ ಯೋಗಕ್ಷೇಮ ವಿಚಾರಿಸಿದರು.
ಶಾಲೆಯ ಪಕ್ಕದ ಅಂಗನವಾಡಿ ಕೇಂದ್ರದಲ್ಲಿ ಸಂತ್ರಸ್ತರಿಗೆ ವೈದ್ಯಕೀಯ ನೆರವು ನೀಡಲಾಗುತ್ತಿದು,್ದ ಈ ಸಂಬಂಧ ಪರಿಶೀಲನೆ ನಡೆಸಿ ಸಂತ್ರಸ್ತರಿಗೆ ಅಗತ್ಯ ನೆರವು ಒದಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅಲ್ಲದೆ, ಸಂತ್ರಸ್ತರಿಗೆ ಹೊದಿಕೆ, ಆಹಾರ ಸಾಮಗ್ರಿ ವಿತರಿಸಲಾಯಿತು.
ಮಳೆ ಬಂದಾಗಲೆಲ್ಲಾ ಇಂತಹದ್ದೇ ಸಮಸ್ಯೆ ಉಂಟಾಗುತ್ತಿದೆ. ಪ್ರವಾಹ ಬಂದಾಗ, ಜಲಾಶಯದಿಂದ ಹೆಚ್ಚಿನ ನೀರು ಹೊರಬಿಟ್ಟಾಗ ನದಿ ಪಾತ್ರದ ಅಕ್ಕಪಕ್ಕ ವಾಸಿಸುವ ಜನರು ಜೀವಭಯದಲ್ಲಿ ಬದುಕಬೇಕಿದೆ. ಈ ಸಮಸ್ಯೆ ಬಗೆಹರಿಸುವಂತೆ ಮನವಿ ಸಲ್ಲಿಸಿದರೂ ಯಾರು ಸೂಕ್ತವಾಗಿ ಸ್ಪಂದಿಸುತ್ತಿಲ್ಲ. ಮುಖ್ಯಮಂತ್ರಿ ಶುಕ್ರವಾರವೇ ಬರುತ್ತಾರೆ ಎಂದುಕೊಂಡಿದ್ದೆವು. ಶನಿವಾರ ಬರುತ್ತಾರೆ ಎಂದು ಅಧಿಕಾರಿಗಳು ಹೇಳಿದ್ದರು. ಆದರೆ ಸಿದ್ದರಾಮಯ್ಯ ಅವರು ಬರಲೇ ಇಲ್ಲ ಎಂದು ನೆರೆದಿದ್ದವರು ಬೇಸರ ಹೊರ ಹಾಕಿದರು.
ವರುಣ ಕ್ಷೇತ್ರಕ್ಕೆ ನಮ್ಮ ಬೊಕ್ಕಹಳ್ಳಿ ಗ್ರಾಮವೂ ಸೇರುತ್ತದೆ. ಈಗ ಈ ಕ್ಷೇತ್ರವನ್ನು ಪ್ರತಿನಿಧಿಸುವ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿದ್ದಾರೆ. ಹಾಗಾಗಿ ಸಮಸ್ಯೆಯನ್ನು ಬಗೆಹರಿಸುತ್ತಾರೆ ಎನ್ನುವ ವಿಶ್ವಾಸವಿದೆ ಎಂದರು.
ಮನವಿ ಆಲಿಸಿದ ಡಾ.ಎಚ್.ಸಿ.ಮಹದೇವಪ್ಪ ಅವರು, ಕಬಿನಿ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದ ನೀರು ಹರಿದು ಬಂದಿದ್ದರಿಂದ ನೀರು ಹೆಚ್ಚಾಗಿ ಪ್ರವಾಹ ಉಂಟಾಗಿದೆ. ಜಿಲ್ಲಾಡಳಿತ ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದರಿಂದ ಕಡಿಮೆ ಪ್ರಮಾಣದ ಹಾನಿ ಆಗಿದೆ. ಎನ್‌ಡಿಆರ್‌ಎಫ್ ನಿಯಮಾವಳಿ ಪ್ರಕಾರ ಪರಿಹಾರ ನೀಡಲಾಗುವುದು ಎಂದು ಭರವಸೆ ನೀಡಿದರು.
ಮುಖ್ಯಮಂತ್ರಿಗಳೇ ಬರಬೇಕಿತ್ತು. ಆದರೆ ಶಿರಾಡಿ ಘಾಟ್‌ಗೆ ಹೋಗಬೇಕಾದ್ದರಿಂದ ಅಲ್ಲಿ ಹೋಗಿದ್ದಾರೆ. ನಿಮ್ಮ ಅಹವಾಲುಗಳನ್ನು ನೇರ ಅವರಿಗೆ ತಲುಪಿಸಲಾಗುವುದು. ಗ್ರಾಮದ 46 ಮನೆಗಳಿಗೆ ನೀರು ಬಂದಿದೆ. ಕಾಳಜಿ ಕೇಂದ್ರದಲ್ಲಿ 446 ಜನ ಸೌಲಭ್ಯ ಪಡೆಯುತ್ತಿದ್ದು, 80 ಕುಟುಂಬಗಳು ಪ್ರವಾಹದಿಂದ ಬಾಧಿತವಾಗಿವೆ. ಈ 80 ಕುಟುಂಬಗಳನ್ನು ಬೇರೆಡೆಗೆ ಸ್ಥಳಾಂತರಿಸಲು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಕ್ರಮ ವಹಿಸಲಾಗುವುದು ಎಂದರು.
ವಿಧಾನ ಪರಿಷತ್ ಸದಸ್ಯರಾದ ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ಸೂಕ್ತ ಜಾಗವನ್ನು ಗುರುತಿಸಿ ಅಲ್ಲಿ ಮನೆ ನಿರ್ಮಿಸಿಕೊಳ್ಳಲು ಅವಕಾಶ ಕಲ್ಪಿಸಲಾಗುವುದು. ಮನೆ ನಿರ್ಮಾಣಕ್ಕೆ ಸಹಾಯಧನ ನೀಡಲು ಸರ್ಕಾರದಿಂದ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ಗ್ರಾಮದ ಮುಖಂಡ ಬೊಕ್ಕಹಳ್ಳಿ ನಂಜುಂಡಸ್ವಾಮಿ ಮಾತನಾಡಿ, ಗ್ರಾಮ ಪ್ರತಿ ವರ್ಷ ಮುಳುಗಡೆ ಆಗುತ್ತದೆ. ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸಬೇಕು. ಬೇರೆ ಕಡೆ ನಿವೇಶನಗಳನ್ನು ಕೊಟ್ಟು ಮನೆ ನಿರ್ಮಿಸುವ ಕೆಲಸ ಅಗಬೇಕು ಎಂದು ಮನವಿ ಮಾಡಿದರು.
ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಂ. ಗಾಯತ್ರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಇತರರು ಇದ್ದರು.
ವಾಡಿಕೆಗಿಂತ ಶೇ.75 ಹೆಚ್ಚು ಮಳೆ
ವಾಡಿಕೆಗಿಂತ ಈ ಬಾರಿ ಶೇ.75 ರಷ್ಟು ಹೆಚ್ಚು ಮಳೆ ಸುರಿದಿದ್ದು, ಕಳೆದ ತಿಂಗಳು ಶೇ.54ರಷ್ಟು ಅಧಿಕ ಮಳೆ ಸುರಿದಿದೆ. ನದಿಗೆ ಅಪಾರ ಪ್ರಮಾಣದ ನೀರು ಹೊರಬಿಟ್ಟಿರುವುದರಿಂದ ಬೊಕ್ಕಹಳ್ಳಿ ಗ್ರಾಮಕ್ಕೆ ಹೆಚ್ಚು ನೀರು ನುಗ್ಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇಪ್ಪ ಪ್ರತಿಕ್ರಿಯಿಸಿದರು.
ಗ್ರಾಮಸ್ಥರು ಸ್ಥಳಾಂತರಕ್ಕೆ ಒತ್ತಾಯಿಸುತ್ತಿದ್ದರೂ ಅಂತಹ ಸಂದರ್ಭ ಸೃಷ್ಟಿಯಾಗಿಲ್ಲ. ಅದರೂ ಗ್ರಾಮಸ್ಥರ ಮನವಿ ಮೇರೆಗೆ ಸರ್ಕಾರಿ ಜಾಗದ ಲಭ್ಯತೆಯ ಆಧಾರದಂತೆ ಗ್ರಾಮ ಸ್ಥಳಾಂತರಿಸಲು ಪರಿಶೀಲಿಸಲಾಗುವುದು ಎಂದು ಪರಿಶೀಲನೆ ಬಳಿ ಮಾಧ್ಯಮಕ್ಕೆ ತಿಳಿಸಿದರು.
ಈ ಬಾರಿ ಕಬಿನಿ ಜಲಾಶಯದಿಂದ ಕಪಿಲಾ ನದಿಗೆ 80 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರು ಬಂದಿದ್ದರಿಂದ ಗ್ರಾಮದ ಕೆಲವು ಜಮೀನು ಮುಳುಗಡೆಯಾಗಿ, ಕೆಲವು ಮನೆಗಳಿಗೆ ಭಾಗಶಃ ಹಾನಿಯಾಗಿದೆ. 80 ಮನೆಗಳಿಗೆ ನೀರು ನುಗ್ಗಿದ್ದು, 215 ಜನರನ್ನು ಸ್ಥಳಾಂತರಿಸಲಾಗಿದೆ. 78 ಜನರು ಕಾಳಜಿ ಕೇಂದ್ರದಲ್ಲಿ ಉಳಿದಿದ್ದಾರೆ. ಜಿಲ್ಲಾಡಳಿತ ತಗ್ಗಿನ ಪ್ರದೇಶದ ಮನೆಗಳವರಿಗೆ ಜಾಗೃತಿ ಮೂಡಿಸುವುದರೊಂದಿಗೆ ಊಟ, ವಸತಿಗಳೊಂದಿಗೆ ಸಮರ್ಪಕ ವ್ಯವಸ್ಥೆಗಳನ್ನು ಕಲ್ಪಿಸಿದೆ ಎಂದರು.
ಮಳೆಯಿಂದ ಜಿಲ್ಲೆಯಲ್ಲಿ ಒಟ್ಟಾರೆ 345 ಮನೆಗಳಿಗೆ ಹಾನಿಯಾಗಿದ್ದು, 256 ಮನೆಗಳಿಗೆ ಪರಿಹಾರ ನೀಡಲಾಗಿದೆ. ಒಂದು ಜೀವಹಾನಿ ಅಗಿದ್ದು, ಮೂರು ಹಸುಗಳು ಮೃತಪಟ್ಟಿವೆ. ಉಳಿದಂತೆ 268 ಮನೆಗಳು ಭಾಗಶಃ ಹಾನಿಯಾಗಿದ್ದು, ನಿಯಮಾವಳಿಯಂತೆ ಪರಿಹಾರ ನೀಡಲಾಗಿದೆ. 220 ಶಾಲೆಗಳು, 60 ಅಂಗನವಾಡಿ ಕೇಂದ್ರಗಳು, 40 ರಿಂದ 50 ಕಿಮೀ ಗ್ರಾಮೀಣ ರಸ್ತೆ, 25 ಕಿಮೀ ಲೋಕೋಪಯೋಗಿ ರಸ್ತೆ ಹಾಳಾಗಿದೆ ಎಂದರು.
ಮನೆಗಳಿಗೆ ಸಣ್ಣ ತೊಂದರೆ ಅಗಿದ್ದರೆ 6 ಸಾವಿರ ರೂ., ಪೂರ್ತಿ ಹಾನಿ ಆಗಿದ್ದರೆ 1.25 ಲಕ್ಷ ರೂ. ನೀಡಲಾಗುತ್ತಿದೆ. ಆದರೆ, ಈ ಪರಿಹಾರ ಯಾವುದಕ್ಕೂ ಸಾಲುವುದಿಲ್ಲ. ಹಾಗಾಗಿ ರಾಜೀವ್‌ಗಾಂಧಿ ವಸತಿ ಯೋಜನೆ ಮುಖಾಂತರ ಮನೆ ನಿರ್ಮಿಸಿಕೊಡಲು ತೀರ್ಮಾನ ಮಾಡಲಾಗಿದೆ ಎಂದು ಹೇಳಿದರು.
ಡಾ.ಯತೀಂದ್ರ ಸಿದ್ದರಾಮಯ್ಯಗೆ ಮನವಿ
ಮೈಸೂರು: ಬೊಕ್ಕಹಳ್ಳಿಗೆ ಆಗಮಿಸಿದ ವಿಧಾನ ಪರಿಷತ್ತಿನ ಸದಸ್ಯ ಡಾ.ಯತೀಂದ್ರ ಅವರಿಗೆ ಮನವಿ ಪತ್ರ ಸಲ್ಲಿಸಲು ಗ್ರಾಮಸ್ಥರು ಮುಗಿ ಬಿದ್ದರು. ಮುಖ್ಯಮಂತ್ರಿ ಪ್ರತಿನಿಧಿಸಿರುವ ವರುಣ ಕ್ಷೇತ್ರದ ಗ್ರಾಮಕ್ಕೆ ಸಿದ್ದರಾಮಯ್ಯ ಅವರು ಆಗಮಿಸಲಿದ್ದಾರೆ ಎನ್ನುವ ನಿರೀಕ್ಷೆ ಇತ್ತು. ಇದಕ್ಕಾಗಿ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿತ್ತು. ಆದರೆ ಕಾರ್ಯ ಒತ್ತಡದಲ್ಲಿ ಅಂತಿಮ ಕ್ಷಣದಲ್ಲಿ ಭೇಟಿ ರದ್ದುಗೊಳಿಸಿ, ಸಕಲೇಶಪುರದ ಕಡೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಯಾಣ ಬೆಳೆಸಿದರು. ಹೀಗಾಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಡಾ.ಯತೀಂದ್ರ ಗ್ರಾಮಕ್ಕೆ ಭೇಟಿ ನೀಡಿ ಜನರ ಅಹವಾಲು ಆಲಿಸಿದರು. ಈ ವೇಳೆ ಯತೀಂದ್ರ ಅವರಿಗೆ ಜನರು ಮನವಿ ಪತ್ರ ಸಲ್ಲಿಸಲು ಮುಗಿ ಬಿದ್ದರು. ಮನವಿ ಪತ್ರ ಸಲ್ಲಿಸಲು ಸಾಧ್ಯವಾಗದ ಹಲವರು, ಬಹಿರಂಗವಾಗಿಯೇ ತಮ್ಮ ಅಸಮಧಾನ ಹೊರ ಹಾಕಿದರು.
ಮನೆ ತೊರೆಯಲು ಒಪ್ಪದ ಗ್ರಾಮಸ್ಥರು
ನಮ್ಮ ಗ್ರಾಮದ ದೇವತೆ ಇರುವ ಸ್ಥಳ ಇದು. ಇದನ್ನು ಬಿಟ್ಟು ಬೇರೆ ಎಲ್ಲೂ ಹೋಗಲ್ಲ ನಾವು. ಗ್ರಾಮಸ್ಥರು ಅಮ್ಮನ ಹಬ್ಬ ಮಾಡುವುದು ಬೇಡವಾ ಎಂದು ಗ್ರಾಮಸ್ಥ ಕುಮಾರ್ ಪ್ರಶ್ನಿಸಿದರು.
ನಮ್ಮ ತಾತ, ಮುತ್ತಾತನ ಕಾಲದಿಂದಲೂ ಇಲ್ಲಿಯೇ ಇದ್ದೇವೆ. ಪಕ್ಕದಲ್ಲಿ ಮನೆ ನಿರ್ಮಿಸಿಕೊಟ್ಟಿದ್ದರೂ ಕೆಲವರು ಮಾತ್ರ ತೆರಳಿದರು. ನಮ್ಮ ಹಿರಿಯರು ಬಾಳಿ, ಬದುಕಿದ ಸ್ಥಳವನ್ನು ನಾವು ಬಿಡುವುದಿಲ್ಲ ಎಂದರು.
ಗ್ರಾಮದಲ್ಲಿರುವ ದೇವರು ಶಕ್ತಿಯುತವಾಗಿದ್ದು, ನಮ್ಮನ್ನು ಕಾಪಾಡಿಕೊಂಡು ಬಂದಿದೆ. ಮುಂದೆಯೂ ಕಾಪಾಡುತ್ತಾಳೆ. ಹಾಗಾಗಿ ಹಬ್ಬ ಮಾಡಿಕೊಂಡು ನಾವು ಗ್ರಾಮದಲ್ಲಿಯೇ ಇರುತ್ತೇವೆ ಎಂದು ಹೇಳಿದರು.