

ಚಿತ್ರದುರ್ಗ: ಕಲುಷಿತ ನೀರು ಸೇವಿಸಿ ಸಾವು-ನೋವು ಸಂಭವಿಸಿರುವ ಕವಾಡಿಗರಹಟ್ಟಿಯಲ್ಲಿ 4.03 ಕೋಟಿ ರೂ. ವೆಚ್ಚದೊಂದಿಗೆ ಶುದ್ಧ ಕುಡಿವ ನೀರು, ಆರೋಗ್ಯ ಮತ್ತಿತರ ಮೂಲ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್. ಸಿ.ಮಹಾದೇವಪ್ಪ ಹೇಳಿದರು.
ದುರ್ಘಟನೆಯಲ್ಲಿ 7 ಅಮೂಲ್ಯ ಜೀವಗಳನ್ನು ಕಳೆದುಕೊಂಡಿದ್ದೇವೆ. ಈಗಾಗಲೇ ಇಲ್ಲಿಗೆ ಭೇಟಿ ನೀಡಿರುವ ಸಚಿವರು, ಶಾಸಕರು, ಹಾಗೂ ಪಕ್ಷದ ಮುಖಂಡರು, ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದೇನೆ. ದಲಿತರು, ಬಡವರು ಹೆಚ್ಚಿನ ಸಂಖ್ಯೆಯಲ್ಲಿರುವ ಈ ಗ್ರಾಮದ ಅಭಿವೃದ್ಧಿಗಾಗಿ ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸುವುದಾಗಿ ಹೇಳಿದರು.
ಹಟ್ಟಿಯಲ್ಲಿ ಶುಚಿತ್ವ, ಶುದ್ಧ ಕುಡಿವ ನೀರು ಪೂರೈಕೆಯಂಥ ಮೂಲಸೌಕರ್ಯಗಳನ್ನು ಒದಗಿಸುವಲ್ಲಿ ನಗರಸಭೆ ಸಂಪೂರ್ಣ ವಿಫಲವಾಗಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಕಂದಾಯ ಭೂಮಿಯಲ್ಲಿರುವ ಮನೆಗಳಿಗೆ ಅಕ್ರಮ-ಸಕ್ರಮದಡಿ ಖಾತೆ ಮಾಡಿಕೊಡಬೇಕಿದೆ. ಪ್ರತ್ಯೇಕ ವಸತಿ ಸೌಕರ್ಯವನ್ನು ಕಲ್ಪಿಸಬೇಕಿದೆ ಎಂದರು.
ಪರ್ಯಾಯ ವಸತಿಗೆ ಜಿಲ್ಲಾಡಳಿತದಿಂದ ಜಮೀನು ಗುರುತಿಸಲಾಗುತ್ತಿದೆ. ಕುಟುಂಬಗಳಿಗೆ ಧವಸಧಾನ್ಯ ಪೂರೈಸಲಾಗಿದೆ. ಶುದ್ಧ ಕುಡಿವ ನೀರು ಪೂರೈಕೆಯಾಗುತ್ತಿದೆ. ಆರೋಗ್ಯ ಕೇಂದ್ರವನ್ನು ಸ್ಥಾಪಿಸಲಾಗಿದೆ. ಮೃತರ ಕುಟುಂಬಗಳಿಗೆ ಪರಿಹಾರ ವಿತರಿಸಲಾಗಿದೆ. ದಲಿತರ ಪರಿಸ್ಥಿತಿ ಏನಿದೆ ಎಂಬುದು ನನಗೆ ಚೆನ್ನಾಗಿ ಗೊತ್ತಿದೆ. ಇಲ್ಲಿಯ ನಿವಾಸಿಗಳು ಬದುಕನ್ನು ಕಟ್ಟಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ 9 ಬೇಡಿಕೆಗಳನ್ನು ಪರಿಶೀಲಿಸಿ ಸರ್ಕಾರಕ್ಕೆ ಶಿಫಾರಸು ಮಾಡುವಂತೆ ಡಿಸಿಗೆ ಸೂಚಿಸಿದ್ದೇನೆ ಎಂದರು.
ಜಿ.ಆರ್.ಜೆ.ದಿವ್ಯಾಪ್ರಭು, ಎಚ್.ಆಂಜನೇಯ, ಟಿ.ರಘುಮೂರ್ತಿ, ಕೆ.ಸಿ.ವೀರೇಂದ್ರ ಪಪ್ಪಿ, ಬಿ.ಎನ್.ಚಂದ್ರಪ್ಪ ಇತರರಿದ್ದರು.
ನ್ಯಾಯಾಂಗ ತನಿಖೆಗೆ ಆಗ್ರಹ: ಕುಡಿಯುವ ನೀರಿನಲ್ಲಿ ವಿಷ ಬೆರೆಸಿರುವುದು ಕವಾಡಿಗರಹಟ್ಟಿಯಲ್ಲಿ ಆದ ಸಾವುಗಳಿಗೆ ಕಾರಣವಾಗಿದೆ ಎಂಬ ದೂರಿದೆ. ಆದ್ದರಿಂದ ಇಡೀ ಘಟನೆಗೆ ಸಂಬಂಧಿಸಿದಂತೆ ನ್ಯಾಯಾಂಗ ತನಿಖೆ ನಡೆಸುವಂತೆ ರಾಷ್ಟ್ರೀಯ ದಲಿತ ಸಂಘಟನೆಗಳ ಒಕ್ಕೂಟದ ಕಾರ‌್ಯಾಧ್ಯಕ್ಷ ಡಾ.ಎಂ.ವೆಂಕಟಸ್ವಾಮಿ ಅವರು ಸಚಿವ ಮಹಾದೇವಪ್ಪ ಅವರನ್ನು ಒತ್ತಾಯಿಸಿದರು. ಛಲವಾದಿ ಮಠದ ಶ್ರೀ ಬಸವನಾಗೀದೇವ ಸ್ವಾಮೀಜಿ, ಹನುಮಂತಪ್ಪ ದುರ್ಗ ಮತ್ತಿತರರು ಇದ್ದರು.