

ನಂದಗುಡಿ: ಹಾಲಿನ ದರ 5 ರೂಪಾಯಿ ಹೆಚ್ಚಳ ಮಾಡಲು ಸರ್ಕಾರದ ಜತೆ ಸೂಕ್ತ ಸಮಯದಲ್ಲಿ ಚರ್ಚೆ ಮಾಡಿ ಹಾಲು ಉತ್ಪಾದಕರಿಗೆ ಕೊಡಿಸುವುದಾಗಿ ಶಾಸಕ ಶರತ್ ಬಚ್ಚೇಗೌಡ ಭರವಸೆ ನೀಡಿದರು.
ಹೊಸಕೋಟೆ ತಾಲೂಕಿನ ನಂದಗುಡಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಅಧಿಕ ಹಾಲು ಕರೆಯುವ ಸ್ಪರ್ಧೆ ಹಾಗೂ ಮಿಶ್ರ ತಳಿ ಕರುಗಳ ಪ್ರದರ್ಶನದಲ್ಲಿ ಮಾತನಾಡಿದರು.
ಆಧುನಿಕತೆಯ ನಡುವೆ ಕೃಷಿ ಹಾಗೂ ಹೈನೋದ್ಯಮ ಕ್ಷೀಣಿಸುತ್ತಿದ್ದರೂ ಬೆಂಗಳೂರು ಗ್ರಾಮಾಂತರ ಜಿಲ್ಲೆ ಪ್ರಸಕ್ತ ಸಾಲಿನಲ್ಲಿ ಹಾಲು ಉತ್ಪಾದನೆಯಲ್ಲಿ ಶೇ.5 ಹೆಚ್ಚಳ ಕಂಡಿರುವುದು ಪ್ರಶಂಶನೀಯ. ಪಶು ಇಲಾಖೆ ಅಧಿಕಾರಿಗಳು ಹಾಗೂ ಹೈನುಸಾಕಾಣಿಕೆದಾರರ ಶ್ರಮಕ್ಕೆ ತಕ್ಕ ಫಲವಾಗಿದೆ. ಅನ್ಯ ರಾಜ್ಯಗಳಿಗಿಂತ ನಮ್ಮ ರಾಜ್ಯದಲ್ಲಿ ಉತ್ಪಾದಕರಿಗೆ ನೀಡುವ ಹಣ ಕಡಿಮೆ ಇದ್ದು ಹೆಚ್ಚಳಕ್ಕೆ ಸರ್ಕಾರದ ಅನುಮತಿ ಬೇಕು ಎಂಬ ಬಮುಲ್‌ನ ಬೇಡಿಕೆ ಇದ್ದು, ತ್ವರಿತವಾಗಿ ಸರ್ಕಾರದೊಂದಿಗೆ ಮಾತುಕತೆ ನಡೆಸಿ ದರ ಹೆಚ್ಚಳಕ್ಕೆ ಅನುಮತಿ ಕೊಡಿಸುತ್ತೇನೆ ಎಂದರು.
ವಿಮೆ ಇಲ್ಲದ ಹಸು ಸತ್ತರೆ ಹಾಗೂ ಕುರಿ ಸತ್ತರೆ ಸರ್ಕಾರದಿಂದ 10 ಸಾವಿರ ರೂ. ಪರಿಹಾರ ಕೊಡುವ ಕೆಲಸ ಸರ್ಕಾರ ಮಾಡುತ್ತಿದೆ. ಕಾಲುಬಾಯಿ ರೋಗ, ಚರ್ಮಗಂಟು ರೋಗಕ್ಕೆ ಉಚಿತವಾಗಿ ಲಸಿಕೆ ಹಾಕಲಾಗುತ್ತಿದ್ದು, ಹೈನುಸಾಕಾಣಿಕೆದಾರರು ಸದುಪಯೋಗಪಡಿಸಿಕೊಳ್ಳಿ ಎಂದು ಪಶುಪಾಲನೆ ಇಲಾಖೆ ಜಿಲ್ಲಾ ನಿರ್ದೇಶಕ ಜಗದೀಶ್ ಸಲಹೆ ನೀಡಿದರು.
ಟಿಎಪಿಸಿಎಂಎಸ್ ಉಪಾಧ್ಯಕ್ಷರ ಎನ್. ಹೊಸಹಳ್ಳಿ ರವಿ, ನೆಲವಾಗಲು ಎ್ಸಿಎಸ್ ಅಧ್ಯಕ್ಷ ನಾರಾಯಣಗೌಡ, ನಿರ್ದೇಶಕರಾದ ಎನ್.ಡಿ.ರಮೇಶ್, ಎಚ್.ಎನ್,ಧರ್ಮೇಶ್, ನಾಗೇಶ್, ಚಂದ್ರಪ್ಪ ಸತ್ಯವಾರ, ದೊಡ್ಮನೆ ರಮೇಶ್, ಹೊಸಕೋಟೆ ಪಶು ಇಲಾಖೆಯ ಡಾ.ಮಂಜುನಾಥ್, ಡಾ. ಸತೀಶ್, ಸುಷ್ಮಾ, ಪಿಡಿಒ ಕೆಂಪಣ್ಣ, ಎಂಪಿಸಿಎಸ್ ಅಧ್ಯಕ್ಷ ವರಲಕ್ಷ್ಮೀ ಕೃಷ್ಣಮೂರ್ತಿ ಹಾಗೂ ಗ್ರಾಪಂ ಸದಸ್ಯರು ಇದ್ದರು.
ಪ್ರಥಮ ಬಹುಮಾನ 1 ಲಕ್ಷ ರೂಪಾಯಿ
ಸ್ಪರ್ಧೆಯಲ್ಲಿ ಭಾಗವಹಿಸಿದ್ದ ರಾಸುಗಳಲ್ಲಿ ಅಧಿಕ ಹಾಲು ಕರೆಯುವ ಸ್ಪರ್ಧೆಯಲ್ಲಿ ಹೊಸಕೋಟೆಯ ಕೃಷ್ಣೋಜಿರಾವ್ 42.77 ಕೆಜಿ ಹಾಲು ಕರೆಯುವ ಮೂಲಕ 1 ಲಕ್ಷ ನಗದು ಬಹುಮಾನ ಪಡೆದರೆ, ಅಂಬಿಕಾ 42.55 ಕೆಜಿ ಹಾಲು ಕರೆಯುವ ಮೂಲಕ ದ್ವಿತೀಯ ಬಹುಮಾನವಾಗಿ 75 ಸಾವಿರ ನಗದು, ಇಟ್ಟಸಂದ್ರ ಗ್ರಾಮದ ರಾಮಚಂದ್ರಪ್ಪ 41.60 ಕೆಜಿ ಹಾಲು ಕರೆದು ತೃತೀಯ ಬಹುಮಾನವಾಗಿ 50 ಸಾವಿರ ರೂಪಾಯಿ ಪಡೆದುಕೊಂಡರು.
ನಗರಿಕರಣದಿಂದ ಹಾಲು ಉತ್ಪಾದನೆ ಕುಂಠಿತ ಆಗುತ್ತಿದ್ದು, ಹಾಲಿನ ದರ ಹೆಚ್ಚಳಕ್ಕೆ ಸರ್ಕಾರದ ಅನುಮತಿ ಬೇಕು. ಹೆಚ್ಚು ಹಾಲು ಉತ್ಪಾದನೆ ಆದರೆ ಮಾತ್ರ ಬೆಂಗಳೂರು ಹಾಲು ಒಕ್ಕೂಟ ಉಳಿಯಲು ಸಾಧ್ಯ. ಜಿಲ್ಲೆಯಲ್ಲಿ ಹೊಸಕೋಟೆ ಶೇ.8, ದೇವನಹಳ್ಳಿ ಶೇ.3 ಹಾಲಿನ ಉತ್ಪಾದನಾ ಪ್ರಮಾಣ ಹೆಚ್ಚಳವಾಗಿದೆ. -ಮಂಜುನಾಥ್ ಬಮುಲ್ ಉಪಾಧ್ಯಕ್ಷ ಹೋಬಳಿಯಲ್ಲಿ ಹೈನುಸಾಕಾಣಿಕೆದಾರರನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಶಾಸಕರ ನಿರ್ದೇಶನದಂತೆ ಕಾರ್ಯಕ್ರಮ ರೂಪಿಸಿದ್ದು, ಹಾಲು ಕರೆಯುವ ಸ್ಪರ್ಧೆಯಲ್ಲಿ 21 ಹಸುಗಳು, ಮಿಶ್ರ ತಳಿ ಕರುಗಳ ಪ್ರದರ್ಶನದಲ್ಲಿ 27 ಕರುಗಳು ಭಾಗವಹಿದ್ದವು. -ಡಾ.ಸಿ.ಎನ್ ನಾರಾಯಣಸ್ವಾಮಿ ತಾಪಂ ಕಾರ್ಯನಿರ್ವಹಣಾಧಿಕಾರಿ