ಪೊಲೀಸ್ ಟೋಪಿಗೆ ಕೊಕ್! ಸ್ಮಾರ್ಟ್ ಪೀಕ್ ಹ್ಯಾಟ್ ನೀಡಲು ಚರ್ಚೆ | ಏ.4ಕ್ಕೆ ಡಿಜಿ-ಐಜಿಪಿ ಸಭೆ

ವಿಜಯವಾಣಿ (8)
Published on

| ಕೀರ್ತಿನಾರಾಯಣ ಸಿ. ಬೆಂಗಳೂರು

ಕರ್ನಾಟಕ ಪೊಲೀಸರ ತಲೆ ಮೇಲೆ ಕಾಣುವ ಬ್ರಿಟಿಷರ ಕಾಲದ ವೃತ್ತಾಕಾರದ ದೊಡ್ಡ ಟೋಪಿ ಮಾಯವಾಗಿ ಆ ಜಾಗದಲ್ಲಿ ಇನ್ನು ಮುಂದೆ ಅಂದವಾಗಿ ಕಾಣುವ ಸ್ಮಾರ್ಟ್ ಟೋಪಿ ಅಲಂಕರಿಸುವ ಕಾಲ ಸನ್ನಿಹಿತವಾಗಿದೆ. ಈಗಿರುವ ಸ್ಲೋಚ್ (ವೃತ್ತಾಕಾರ) ಟೋಪಿಯನ್ನು ಬದಲಾಯಿಸಿ ಪೀಕ್ (ಎತ್ತರದ) ಟೋಪಿ ವಿತರಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಹೆಜ್ಜೆಯಿಟ್ಟಿದ್ದು, ಇದು ಜಾರಿಯಾದರೆ ಪೊಲೀಸರ ಬಹುವರ್ಷಗಳ ಬೇಡಿಕೆ ಈಡೇರಲಿದೆ.

ಆಂಧ್ರಪ್ರದೇಶ, ಕೇರಳ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಅಲ್ಲಿನ ಪೊಲೀಸ್ ಹೆಡ್ ಕಾನ್​ಸ್ಟೆಬಲ್ ಹಾಗೂ ಕಾನ್​ಸ್ಟೆಬಲ್​ಗಳಿಗೆ ಪೀಕ್ ಕ್ಯಾಪ್​ಗಳನ್ನು ಕೊಡಲಾಗಿದೆ. ಇದೇ ಮಾದರಿಯಲ್ಲಿ ಕರ್ನಾಟಕದಲ್ಲೂ ಪೀಕ್ ಟೋಪಿಗಳನ್ನು ಕೊಡುವ ಬಗ್ಗೆ ಪರಿಶೀಲಿಸಿ ವರದಿ ನೀಡುವಂತೆ ಡಿಜಿ-ಐಜಿಪಿ ಡಾ.ಅಲೋಕ್ ಮೋಹನ್ ಆದೇಶಿಸಿದ್ದಾರೆ. ಹೀಗಾಗಿ ಪೀಕ್ ಟೋಪಿ ವಿತರಣೆ ಕುರಿತು ರ್ಚಚಿಸಲು ರಾಜ್ಯ ಸಶಸ್ತ್ರ ಮೀಸಲು ಪಡೆ (ಕೆಎಸ್ಸಾರ್ಪಿ) ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರ ಅಧ್ಯಕ್ಷತೆಯಲ್ಲಿ ಏ.4ಕ್ಕೆ ಕಿಟ್ ನಿರ್ದಿಷ್ಟತಾ ಸಮಿತಿ ಸಭೆಯನ್ನು ಕರೆಯಲಾಗಿದೆ.

ಪ್ರಸ್ತುತ ಪೊಲೀಸ್ ಕಾನ್​ಸ್ಟೆಬಲ್​ಗಳು ಧರಿಸುತ್ತಿರುವ ಸ್ಲೋಚ್ ಟೋಪಿಯಿಂದಾಗಿ ಅವರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುವ ಸಾಧ್ಯತೆ ಬಗ್ಗೆ ಕೇಂದ್ರ ಆರೋಗ್ಯ ಇಲಾಖೆ ಈ ಹಿಂದೆಯೇ ಎಚ್ಚರಿಕೆ ನೀಡಿತ್ತು. ಪೊಲೀಸ್ ವಲಯದಿಂದಲೂ ಸುತ್ತಳತೆ ಆಕಾರದ ದೊಡ್ಡ ಟೋಪಿ ಬದಲಾಯಿಸಿ ಅದರ ಬದಲಿಗೆ ಅಧಿಕಾರಿಗಳ ಮಟ್ಟದ ಪೊಲೀಸರು ಧರಿಸುತ್ತಿರುವ ಪೀಕ್ ಕ್ಯಾಪ್ ಮಾದರಿಯ ಟೋಪಿಗಳನ್ನು ಧರಿಸುವ ಪದ್ಧತಿ ಜಾರಿಗೆ ತರಬೇಕು ಎಂದು ಒತ್ತಾಯಿಸಿದ್ದರು. ಆಗಾಗ ಈ ಬಗ್ಗೆ ಚರ್ಚೆಯಾಗುತ್ತಿದ್ದರು ಅನುಷ್ಠಾನಕ್ಕೆ ಬಂದಿರಲಿಲ್ಲ. ಆದರೀಗ ಕಿಟ್ ನಿರ್ದಿಷ್ಟತಾ ಸಮಿತಿ ಸಭೆ ಕರೆದಿರುವುದರಿಂದ ಸಾಧಕ-ಬಾಧಕಗಳ ಬಗ್ಗೆ ಚರ್ಚೆಯಾಗಿ ಸಮಿತಿ ಪೀಕ್ ಕ್ಯಾಪ್ ಕೊಡಲು ಶಿಫಾರಸ್ಸು ಮಾಡುವ ಭರವಸೆ ಮೂಡಿದೆ. ಕೊನೆಗೂ ಈಡೇರುತ್ತಿದೆ ಬಹುವರ್ಷಗಳ ಬೇಡಿಕೆ ಬ್ರಿಟಿಷ್ ಕಾಲದ ಟರ್ಬನ್ ಸ್ಲೋಚ್ ಕ್ಯಾಪ್ ಬದಲು ಆಂಧ್ರ, ಕೇರಳ, ತಮಿಳುನಾಡು ಮಾದರಿ ಇಲ್ಲೂ ಜಾರಿ.

ಕೇಂದ್ರ ಸರ್ಕಾರ ಒನ್ ನೇಶನ್ ಒನ್ ಯುನಿಫಾಮ್ರ್ ಕಲ್ಪನೆ ಹೊಂದಿದೆ. ಬ್ರಿಟಿಷರು ಮಾಡಿ ಹೋದ ಐಪಿಸಿ, ಸಿಆರ್​ಪಿಸಿ ಸೆಕ್ಷನ್​ಗಳು ಬದಲಾಗಿವೆ. ಆದರೆ, ಅವರು ಬಿಟ್ಟು ಹೋದ ಸಮವಸ್ತ್ರಗಳು ಕೆಲ ರಾಜ್ಯಗಳಲ್ಲಿ ಹಾಗೆಯೇ ಉಳಿದಿವೆ. ಬೇರೆ ರಾಜ್ಯಗಳಂತೆ ನಮ್ಮಲ್ಲೂ ಈಗ ಪೀಕ್ ಟೋಪಿ ಪದ್ಧತಿ ಜಾರಿಗೊಳಿಸುವ ಭರವಸೆ ಮೂಡಿದೆ. | ಹೆಡ್ ಕಾನ್​ಸ್ಟೆಬಲ್ ವಿಜಯಪುರ

ಸಭೆಯಲ್ಲಿ ಯಾರ್ಯಾರು?

ಬೆಂಗಳೂರಿನ ನೃಪತುಂಗ ರಸ್ತೆಯ ಲ್ಲಿರುವ ಡಿಜಿಪಿ ಪ್ರಧಾನ ಕಚೇರಿಯಲ್ಲಿ ಏ.4ರಂದು 4 ಗಂಟೆಗೆ ಸಭೆ ನಡೆಯಲಿದೆ. ಕೆಎಸ್ಸಾರ್ಪಿ ಎಡಿಜಿಪಿ ಅಧ್ಯಕ್ಷತೆ ವಹಿಸಲಿದ್ದು, ಪ್ರಧಾನ ಕಚೇರಿ ಐಜಿಪಿ, ಬೆಂಗಳೂರು ಉತ್ತರ ವಿಭಾಗ, ಆಗ್ನೇಯ ವಿಭಾಗ ಹಾಗೂ ಸಿಎಆರ್ ಡಿಸಿಪಿಗಳು ಇರಲಿದ್ದಾರೆ. ಜತೆಗೆ ಬೆಂಗಳೂರು ನಗರ ಜಿಲ್ಲೆ ಎಸ್ಪಿ, ಕೆಎಸ್ಸಾರ್ಪಿ ಕಮಾಂಡೆಂಟ್ ಸೇರಿ ಇನ್ನಿತರ ಹಿರಿಯ ಅಧಿಕಾರಿಗಳು ಭಾಗಿಯಾಗಲಿದ್ದಾರೆ.

ಒಮ್ಮತದ ಅಭಿಪ್ರಾಯ ಮೂಡಲಿಲ್ಲ

ಹಿರಿಯ ಅಧಿಕಾರಿಗಳು ಹೇಳುವ ಪ್ರಕಾರ ಈ ಹಿಂದೆಯೂ ಒಮ್ಮೆ ಟೋಪಿ ಬದಲಾವಣೆ ಸಂಬಂಧ ಸಭೆ ನಡೆದಿತ್ತು. ಆದರೆ, ಅದಾಗಲೇ ಲಕ್ಷಾಂತರ ಸ್ಲೋಚ್ ಹ್ಯಾಟ್​ಗಳು ಸಿದ್ಧವಾಗಿದ್ದರಿಂದ ಅಧಿಕಾರಿಗಳ ಮಟ್ಟದಲ್ಲಿ ಫೀಕ್ ಟೋಪಿ ವಿತರಣೆಗೆ ಒಮ್ಮತದ ಅಭಿಪ್ರಾಯ ಮೂಡದೆಯೇ ಸಭೆ ಅಂತ್ಯವಾಗಿತ್ತು. ಈಗಲಾದರು ಬ್ರಿಟಿಷ್ ಕಾಲದ ಹ್ಯಾಟ್​ಗೆ ಬದಲಾವಣೆ ತರಬೇಕು ಎಂಬ ಒತ್ತಾಯ ಕೇಳಿಬಂದಿದೆ.

ಟೋಪಿ ಬದಲಾವಣೆ ಏಕೆ?

  • ಅನಾದಿ ಕಾಲದಿಂದಲೂ ಬಳಸುತ್ತಿರುವ ವೃತ್ತಾಕಾರದ ಟೋಪಿಯಿಂದ ಪೊಲೀಸರಿಗೆ ಸಮಸ್ಯೆ
  • ಟೋಪಿ ತಲೆ ಮೇಲೆ ನಿಲ್ಲಲ್ಲ. ಸ್ವಲ್ಪ ಜೋರಾಗಿ ಓಡಿದರೂ ಕೆಳಗೆ ಬಿದ್ದು ಹೋಗುತ್ತದೆ
  • ಲಾಠಿಚಾರ್ಜ್, ಪ್ರತಿಭಟನೆ, ರ್ಯಾಲಿ, ಕಳ್ಳರ ಬೆನ್ನುತ್ತುವ ಸಂದರ್ಭದಲ್ಲಿ ಟೋಪಿಯೇ ತೊಂದರೆ
  • ತಲೆ ಮೇಲೆ ಗಟ್ಟಿಯಾಗಿ ನಿಲ್ಲುವಂತಹ ಎಲಾಸ್ಟಿಕ್ ಟೋಪಿ ನೀಡಬೇಕೆಂಬ ಒತ್ತಾಯ
  • ಪೊಲೀಸ್ ಅಧಿಕಾರಿಗಳು ಧರಿಸುವ ಪೀಕ್ ಟೋಪಿಗಳು ತಲೆ ಮೇಲೆ ಗಟ್ಟಿಯಾಗಿ ಕೂರುತ್ತವೆ
  • ಅಪರಾಧಿಗಳ ಬೆಂಗಾವಲು ಸಂದರ್ಭದಲ್ಲಿ ಸ್ಲೋಚ್ ಟೋಪಿ ಎತ್ತಿಕೊಂಡು ಓಡಾಡಲು ಕಷ್ಟ

ಏನೆಲ್ಲ ಚರ್ಚೆ, ಪರಿಶೀಲನೆ?

  • ಪೀಕ್ ಟೋಪಿ ಯಾವ್ಯಾವ ರಾಜ್ಯದಲ್ಲಿ ಜಾರಿಯಾಗಿದೆ. ಅಲ್ಲಿನ ಪೊಲೀಸರ ಅಭಿಪ್ರಾಯವೇನು
  • ಪೀಕ್ ಟೋಪಿಗೂ ಈಗಿರುವ ಸ್ಲೋಚ್ ಟೋಪಿ ಧಾರಣೆಗೆ ಏನೆಲ್ಲ ವ್ಯತ್ಯಾಸವಿದೆ
  • ಪೊಲೀಸರು ಪೀಕ್ ಟೋಪಿ ವಿತರಣೆಯಿಂದ ಕರ್ತವ್ಯ ನಿರ್ವಹಣೆಗೆ ಏನೆಲ್ಲ ಉಪಯೋಗ
  • ಆರೋಗ್ಯದ ಮೇಲೆ ಪರಿಣಾಮ ಬೀರುವ ಬಗ್ಗೆ ಕೇಂದ್ರ ಆರೋಗ್ಯ ಇಲಾಖೆ ಎಚ್ಚರಿಕೆಗಳು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net