

ರಾಜೇಶ್ ಶೆಟ್ಟಿ ದೋಟ, ಮಂಗಳೂರು ದಕ್ಷಿಣ ಕನ್ನಡ ಹೆಸರು ಬದಲಾಯಿಸಬೇಕೆಂಬ ಆಗ್ರಹ ಮತ್ತೆ ವ್ಯಕ್ತವಾಗಿದ್ದು, ಅವಿಭಜಿತ ದ.ಕ. ಜಿಲ್ಲೆಯ ಹಲವು ಸಂಘಟನೆಗಳು, ರಾಜಕೀಯ- ಧಾರ್ಮಿಕ ಮುಖಂಡರು ಇದಕ್ಕೆ ಧ್ವನಿಗೂಡಿಸಿದ್ದಾರೆ. ದಕ್ಷಿಣ ಕನ್ನಡ ಎಂಬ ಹೆಸರು ಯಾವುದೇ ರೀತಿಯಲ್ಲೂ ಈ ಪ್ರದೇಶಕ್ಕೆ ಹೊಂದುವುದಿಲ್ಲ. ಈ ನೆಲದ ಅಸ್ಮಿತೆಯನ್ನು ಪ್ರಸ್ತುತಪಡಿಸುವ ಹೆಸರಿಡಬೇಕು ಎಂಬ ಅಭಿಪ್ರಾಯ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗುತ್ತಿತ್ತು. ಜೂನ್ 30ರಂದು ಗೂಗಲ್ ಮೀಟ್ನಲ್ಲಿ ಹೆಸರು ಬದಲಾವಣೆ ಕುರಿತು ನಡೆದ ಮಾತುಕತೆಯಲ್ಲಿ ಸಂಸದರು, ಮಂಗಳೂರು ದಕ್ಷಿಣ ಮತ್ತು ಉತ್ತರ ಕ್ಷೇತ್ರದ ಶಾಸಕರು, ವಜ್ರದೇಹಿ ಶ್ರೀ, ವಿವಿಧ ಸಂಘಟನೆ ಸದಸ್ಯರು, ಸಾಹಿತಿಗಳ ಸಹಿತ ಸುಮಾರು 600ಕ್ಕೂ ಅಧಿಕ ಮಂದಿ ಪಕ್ಷ, ಜಾತಿ, ಧರ್ಮ ಭೇದ ಮರೆತು ಭಾಗವಹಿಸಿ ಅಭಿಪ್ರಾಯ ಹಂಚಿಕೊಂಡಿದ್ದಾರೆ. ತುಳು ಪ್ರಧಾನ ಭಾಷೆಯಾಗಿರುವ ಈ ಪ್ರದೇಶಕ್ಕೆ ಇಲ್ಲಿನ ಭಾಷೆ, ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಹೆಸರಿಡಬೇಕು. ದಾಖಲೆಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಎಂಬ ಹೆಸರಿದ್ದರೂ ಅದರ ಬಳಕೆ ವಿರಳ. ಮಂಗಳೂರು ಅಥವಾ ಕುಡ್ಲ ಎಂದೇ ಗುರುತಿಸಿಕೊಂಡಿರುವುದರಿಂದ ಈ ಹೆಸರಿಡಬೇಕು ಎಂಬ ಅಭಿಪ್ರಾಯ ವ್ಯಕ್ತವಾಯಿತು. ಐತಿಹಾಸಿಕ ಉಲ್ಲೇಖ ತುಳುನಾಡಿನ ಜಾನಪದ ಸಂದಿ-ಪಾರ್ದನಗಳಲ್ಲೂ ತುಳುನಾಡು, ಮಂಗಳೂರು ಎಂಬ ಉಲ್ಲೇಖವಿದೆ. ರಾಜಮನೆತನಗಳ ಕಾಲದಲ್ಲೂ ತುಳುನಾಡಿನ ಪ್ರಸ್ತಾಪವಿದೆ. ಶೇ.90ರಷ್ಟು ತುಳು ಮಾತೃಭಾಷೆ ಹೊಂದಿರುವ ಜನರಿರುವ ಪ್ರದೇಶಕ್ಕೆ ದಕ್ಷಿಣ ಕನ್ನಡ ಎಂಬ ಹೆಸರು ಸೂಕ್ತವಲ್ಲ. ರಾಜಕಾರಣಿಗಳು ಪಕ್ಷಭೇದ ಮರೆತು ಯತ್ನಿಸಿದರೆ ಮರುನಾಮಕರಣ ಅಸಾಧ್ಯವಲ್ಲ ಎಂಬುದು ಅನೇಕರ ಅನಿಸಿಕೆ. ಮೆರೆದ ಭಾಷಾಭಿಮಾನ ಗ್ರಾಪಂ ಸಭೆಗಳಲ್ಲಿ ತುಳು ಭಾಷೆ ಬಳಸುತ್ತಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಇತ್ತೀಚೆಗೆ ಕಾರ್ಕಳದ ನಿವಾಸಿಯೊಬ್ಬರು ಜಿಪಂ ಸಿಇಒಗೆ ಪತ್ರ ಬರೆದಿದ್ದು, ಸಿಇಒ ಅವರು ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ತಾಪಂ ಇಒಗಳಿಗೆ ಸೂಚಿಸಿದ್ದರು. ಇದನ್ನು ಖಂಡಿಸಿ ತುಳುಪರ ಸಂಘಟನೆಗಳು ಗಟ್ಟಿ ಧ್ವನಿ ಎತ್ತಿದ್ದವು. ಇತ್ತೀಚೆಗೆ ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡಲು ಕಂದಾಯ ಇಲಾಖೆ ಅಧಿಸೂಚನೆ ಹೊರಡಿಸಿದ ಬೆನ್ನಲ್ಲೇ ದಕ್ಷಿಣ ಕನ್ನಡದ ಚರ್ಚೆಯೂ ಮುನ್ನೆಲೆಗೆ ಬಂದಿದೆ. ಈ ಹಿಂದೆಯೂ ಪ್ರಸ್ತಾಪವಿತ್ತು 2014ರಲ್ಲೂ ದಕ್ಷಿಣ ಕನ್ನಡ ಮರುನಾಮಕರಣ ಬಗ್ಗೆ ಚರ್ಚೆ ನಡೆದಿದ್ದು, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿತ್ತು. ಅಂದಿನ ಕಂದಾಯ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಅವರು ಈ ಬಗ್ಗೆ ದ.ಕ. ಜಿಲ್ಲಾಧಿಕಾರಿಯಾಗಿದ್ದ ಎ.ಬಿ.ಇಬ್ರಾಹಿಂ ಅವರಿಗೆ ಮಾಹಿತಿ ಕೇಳಿದ್ದರು. ದಕ್ಷಿಣ ಕನ್ನಡ ಹೆಸರನ್ನು ಬದಲಾಯಿಸುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದರು. ಯಾವೆಲ್ಲ ಹೆಸರುಗಳು? ದ.ಕ. ಜಿಲ್ಲೆಗೆ ಮಂಗಳೂರು ಜಿಲ್ಲೆ, ಮಂಗಳಾಪುರ, ಕುಡ್ಲ, ತುಳುನಾಡು ಈ ಹೆಸರುಗಳನ್ನು ಇಡುವ ಬಗ್ಗೆ ಚರ್ಚೆಯಾಗುತ್ತಿದೆ. ದಿನವೊಂದನ್ನು ನಿಗದಿಪಡಿಸಿ ಹೆಸರು ಅಂತಿಮಗೊಳಿಸುವ ಹಾಗೂ ಮುಂದಿನ ಕಾರ್ಯಯೋಜನೆ ಬಗ್ಗೆ ಚರ್ಚೆ ನಡೆಸುವ ಬಗ್ಗೆ ಆನ್ಲೈನ್ ಮಾತುಕತೆಯಲ್ಲಿ ತೀರ್ಮಾನಿಸಲಾಯಿತು.
ಜಿಲ್ಲೆಯ ಕೇಂದ್ರ ಸ್ಥಾನ ಮಂಗಳಾಂಬಿಕೆಯ ಹೆಸರಿನಲ್ಲಿ ಇರುವುದರಿಂದ ಜಿಲ್ಲೆಗೆ ಮಂಗಳೂರು ಎಂಬ ಹೆಸರಿಡುವುದು ಸೂಕ್ತ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ತುಳುವರು ಒಗ್ಗಟ್ಟಾಗಿ ಸೂಚಿಸುವ ಹೆಸರನ್ನು ಒಪ್ಪುತ್ತೇನೆ. ಸರ್ಕಾರದ ಮೂಲಕ ನಡೆಯಬೇಕಾದ ಪ್ರಕ್ರಿಯೆಗಳಿಗೆ ಪೂರ್ಣ ಸಹಕಾರ ನೀಡುತ್ತೇನೆ. ಕ್ಯಾ.ಬ್ರಿಜೇಶ್ ಚೌಟ, ಸಂಸದ, ದ.ಕ.