ಕೆ.ಆರ್.ನಗರ ಅಭಿವೃದ್ಧಿ ಕುರಿತು ಚರ್ಚೆ

30 KRN-1
ಕೆ.ಆರ್.ನಗರದ ಪುರಸಭೆಯಲ್ಲಿ ನಡೆದ ಪುರಸಭಾ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಪುರಸಭಾ ಮುಖ್ಯಾಧಿಕಾರಿ ಡಾ.ಜಯಣ್ಣ, ಪುರಸಭಾ ಇಂಜಿನಿಯರ್ ಎಂ.ಎಂ.ಸೌಮ್ಯಾು, ಲೆಕ್ಕಾಧಿಕಾರಿ ಸಪ್ನಾ ಇದ್ದರು.
Published on

ಕೆ.ಆರ್.ನಗರ: ಪುರಸಭೆ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಪಟ್ಟಣದ ಅಭಿವೃದ್ಧಿ ಹಾಗೂ ಅನುಷ್ಠಾನಗೊಂಡಿರುವ ಕಾಮಗಾರಿಗಳ ಪ್ರಗತಿ ಕುರಿತು ಚರ್ಚೆ ನಡೆಯಿತು.

ಪುರಸಭೆ ಸದಸ್ಯ ನಟರಾಜು ಮಾತನಾಡಿ, ಪಟ್ಟಣದ ಕನಕನಗರ ಬಡಾವಣೆಯಲ್ಲಿ ಪೂರ್ಣಗೊಂಡಿರುವ ಒಳ ಚರಂಡಿ ವ್ಯವಸ್ಥೆಯನ್ನು ಸೇವೆಗೆ ಮುಕ್ತಗೊಳಿಸಿದರೆ 16 ಮತ್ತು 17 ನೇ ವಾರ್ಡ್‌ನ ನಿವಾಸಿಗಳಿಗೆ ಅನುಕೂಲವಾಗುತ್ತದೆ ಎಂದು ಎಂದರಲ್ಲದೆ, ಪಟ್ಟಣದ ಸಮಗ್ರ ಪ್ರಗತಿಗೆ ಡಿಪಿಆರ್ ತಯಾರಿಸುವಂತೆ ಶಾಸಕ ಡಿ.ರವಿಶಂಕರ್ ಮುಖ್ಯಾಧಿಕಾರಿಗೆ ಸೂಚನೆ ನೀಡಿದ್ದು, ಆದಷ್ಟು ಬೇಗ ಈ ಕೆಲಸ ಪೂರ್ಣಗೊಂಡರೆ ಸರ್ಕಾರದಿಂದ ಅಗತ್ಯ ಅನುದಾನ ಸಿಗಲಿದೆ ಎಂದು ಸಭೆಯ ಗಮನ ಸೆಳೆದರು.

ಸದಸ್ಯ ಉಮೇಶ್ ಮಾತನಾಡಿ, ಸಿಎಂ ರಸ್ತೆಯಲ್ಲಿ ಅನುಮತಿ ಪಡೆದೇ ಮೂರು ಹಂತಸ್ತಿನ ಕಟ್ಟಡ ಕಟ್ಟಿರುವ ಮಾಲೀಕರು ಭೂ ಒತ್ತುವರಿ ಮಾಡಿದ್ದಾರೆ. ಅಲ್ಲದೆ ಹಲವರು ತೆರಿಗೆ ವಂಚಿಸುತ್ತಿದ್ದಾರೆ. ಇದರಿಂದ ಪುರಸಭೆಗೆ ನಷ್ಟ ಉಂಟಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಪತ್ರಕರ್ತರಿಗೆ ಸ್ಥಳೀಯ ಸಂಸ್ಥೆಯ ವತಿಯಿಂದ ಹಿಂದೆ 2 ಲಕ್ಷ ರೂ.ಆರೋಗ್ಯ ನಿಧಿ ಇಡಲಾಗಿತ್ತು. ಆದರೆ ಕಳೆದ ಬಾರಿ ಇಡಲಿಲ್ಲ. ಈ ಬಾರಿಯಾದರೂ ಬಜೆಟ್‌ನಲ್ಲಿ ಅನುದಾನ ಕಾಯ್ದಿರಿಸಬೇಕು ಎಂದು ಎಂದು ಪತ್ರಕರ್ತ ಎಂ.ಎಸ್.ರವಿಕುಮಾರ್ ಮನವಿ ಮಾಡಿದರು.

ಪೌರಕಾರ್ಮಿಕರಿಗೆ ರಜೆ ನೀಡುವಂತೆ ಹಾಗೂ ಕಾಯಂ ಅಲ್ಲದ ಪೌರಕಾರ್ಮಿಕರಿಗೆ ವೇತನವನ್ನು ಸರಿಯಾದ ಸಮಯಕ್ಕೆ ನೀಡಲು ಬಜೆಟ್‌ನಲ್ಲಿ ಅನುದಾನ ಕಾಯ್ದಿರಿಸುವಂತೆ ಸದಸ್ಯ ಮಿಕ್ಸರ್ ಶಂಕರ್ ಆಗ್ರಹಿಸಿದರು. ಗರಡಿ ಸಂಘದ ಮಾಜಿ ಅಧ್ಯಕ್ಷ ಕೆ.ಆರ್.ಶ್ರೀ ನಿವಾಸ್ ಮಾತನಾಡಿ, ಪಟ್ಟಣದಲ್ಲಿ ಅವಧಿ ಮುಗಿದಿರುವ ಪುರಸಭಾ ಮಳಿಗೆಗಳ ಹರಾಜು ಪ್ರಕ್ರಿಯೆ ನಡೆಸುವಂತೆ ಗಮನ ಸೆಳೆದರು.

ಮನವಿ ಮತ್ತು ಸಲಹೆ ಸ್ವೀಕರಿಸಿದ ಪುರಸಭಾ ಮುಖ್ಯಾಧಿಕಾರಿ ಡಾ.ಜಯಣ್ಣ, ಶಾಸಕರ ಸೂಚನೆಯ ಮೇರೆಗೆ ಈಗಾಗಲೇ ಪಟ್ಟಣದ ಎಲ್ಲ ವಾರ್ಡುಗಳ ಅಭಿವೃದ್ಧಿ ಕುರಿತು ಡಿಪಿಆರ್ ತಯಾರಿಸುತ್ತಿದ್ದು, ಈಗಾಗಲೇ ಎರಡು ಬಡಾವಣೆಗಳ ಡಿಪಿಆರ್ ಕೆಲಸ ಪೂರ್ಣವಾಗಿದೆ. ಪಟ್ಟಣಕ್ಕೆ 30 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಯೋಜನೆ ಜಾರಿಯಲ್ಲಿದೆ. ಅಲ್ಲದೆ, ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡುತ್ತಿದ್ದು, ಪೌರಕಾರ್ಮಿಕರನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಅವರಿಗೆ ಭಾನುವಾರದಂದು ವಾರದ ರಜೆ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಪುರಸಭಾ ಸದಸ್ಯರಾದ ಕೆ.ಎಲ್.ಜಗದೀಶ್, ಕೋಳಿಪ್ರಕಾಶ್, ಕೆ.ಬಿ.ವೀಣಾ ವೃಷುಬೇಂದ್ರಪ್ಪ, ತೋಂಟದಾರ್ಯ, ಮಾಜಿ ಸದಸ್ಯರಾದ ಕೆ.ವಿನಯ್ ಉಮಾಶಂಕರ್, ಮುಖಂಡ ಧರ್ಮ, ಪುರಸಭಾ ಇಂಜಿನಿಯರ್‌ಗಳಾದ ಚಂದ್ರಶೇಖರ್, ರೀತು ಸಿಂಗ್, ಎಂ.ಎಂ.ಸೌಮ್ಯಾ, ಕಂದಾಯಾಧಿಕಾರಿ ರಮೇಶ್, ಲೆಕ್ಕಾಧಿಕಾರಿ ಸಪ್ನ್ನಾ ಸೇರಿದಂತೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net