

ಮಂಡ್ಯ: ಕಿಡ್ನಿ ವೈಫಲ್ಯಕ್ಕೆ ಮಧುಮೇಹ ರೋಗದ ಜತೆಗೆ ಆಧುನಿಕ ಜೀವನಶೈಲಿಯೇ ಮೂಲ ಎಂದು ಆದಿಚುಂಚನಗಿರಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಮೂತ್ರಪಿಂಡ ಶಾಸ್ತ್ರಜ್ಞ ಡಾ.ಬಿ.ಟಿ.ಅನಿಲ್‌ಕುಮಾರ್ ಹೇಳಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ಆಯೋಜಿಸಿದ್ದ ಕಿಡ್ನಿ ಆರೋಗ್ಯ ಕುರಿತ ಸಂವಾದದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಮಧುಮೇಹಿಗಳ ಸಂಖ್ಯೆ ದಿನ ಕಳೆದಂತೆ ಹೆಚ್ಚಾಗುತ್ತಿದ್ದು, ಇದರ ಪರಿಣಾಮ ಕಿಡ್ನಿ ವೈಫಲ್ಯವಾಗುತ್ತಿದೆ. ಪ್ರತಿ 100 ಜನ ಮಧುಮೇಹಿಗಳಲ್ಲಿ ಸುಮಾರು 18 ಜನರಿಗೆ ಕಿಡ್ನಿ ವಿಫಲತೆ ಕಂಡುಬರಬಹುದು. ಕಿಡ್ನಿ ವೈಫಲ್ಯಕ್ಕೆ ಸಂಬಂಧಿಸಿದಂತೆ ಪರೀಕ್ಷೆ ಮಾಡಿಸಿದ ನಂತರ ರೋಗಕ್ಕೆ ಚಿಕಿತ್ಸೆ ನೀಡಬಹುದು ಎಂದು ತಿಳಿಸಿದರು.
ಒತ್ತಡದಿಂದಲೂ ಕಿಡ್ನಿ ಸಮಸ್ಯೆ ಎದುರಾಗಬಹುದು. ಭಾರತದಲ್ಲಿ 10 ಲಕ್ಷ ಜನರಲ್ಲಿ 800 ಜನರಲ್ಲಿ ಕಿಡ್ನಿ ಸಮಸ್ಯೆ ಕಂಡು ಬರುತ್ತದೆ. ಮುಖ್ಯವಾಗಿ ಐದು ಹಂತದಲ್ಲಿ ಈ ಸಮಸ್ಯೆ ಬರುತ್ತದೆ. ಕಿಡ್ನಿ ವೈಫಲ್ಯಕ್ಕೆ ಜೀವಿತಾವಧಿ ಡಯಾಲಿಸಿಸ್ ಮಾಡಿಸಬೇಕಾಗುತ್ತದೆ. ಆದರೆ ಕಿಡ್ನಿ ಕಸಿ ಮಾಡಿದರೆ ಡಯಾಲಿಸಿಸ್ ಸಮಸ್ಯೆ ಎದುರಾಗುವುದಿಲ್ಲ. 10 ವರ್ಷದ ಹಿಂದೆ ಕಿಡ್ನಿ ಕಸಿ ಸೌಲಭ್ಯ ಇರಲಿಲ್ಲ. ಈಗ ಎಲ್ಲಾ ತಾಲೂಕು ಮತ್ತು ಜಿಲ್ಲಾ ಕೇಂದ್ರದಲ್ಲಿ ವ್ಯವಸ್ಥೆ ಇದೆ ಎಂದು ಹೇಳಿದರು.
ಕಿಡ್ನಿ ದಾನವಾಗಿ ಪಡೆದುಕೊಳ್ಳಲು ನೋಂದಣಿ ಮಾಡಿಕೊಳ್ಳಬಹುದು. ಆದರೆ ಸಾಕಷ್ಟು ದಿನ, ತಿಂಗಳುಗಳೇ ಕಾಯಬೇಕಾಗಬಹುದು. ಯಾವುದೇ ವ್ಯಕ್ತಿಯ ಮಿದುಳು ನಿಷ್ಕ್ರಿಯಗೊಂಡವರ ಅಂಗಾಂಗ ಪಡೆದುಕೊಳ್ಳಬಹುದು. ಆ ವ್ಯಕ್ತಿಯ ಕುಟುಂಬದವರೊಂದಿಗೆ ಸಮಾಲೋಚಿಸಿ ಅಂಗಾಂಗ ತೆಗೆದುಕೊಳ್ಳಬಹುದು. ಇದಲ್ಲದೆ ಒಂದೇ ಕುಟುಂಬದವರಿಂದ ಕಿಡ್ನಿ ಪಡೆದು ಆ ಕುಟುಂಬದ ವ್ಯಕ್ತಿಗೆ ಕಸಿ ಮಾಡಬಹುದು. ಕಿಡ್ನಿ ಕಸಿ ಮಾಡಿದ ಬಳಿಕ ಸಾಮಾನ್ಯ ವ್ಯಕ್ತಿಯಂತೆ ಜೀವನ ಸಾಗಿಸಬಹುದು. ಆದರೆ ನಿಯಮಿತವಾಗಿ ಔಷಧ ತೆಗೆದುಕೊಳ್ಳಬೇಕು. ಇಲ್ಲದಿದ್ದಲ್ಲಿ ತೊಂದರೆ ಆಗುತ್ತದೆ ಎಂದರು.
ಆದಿಚುಂಚನಗಿರಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಮುಖ್ಯಸ್ಥ ಡಾ.ಶಿವಕುಮಾರ್, ಕಸಿ ವೈದ್ಯ ಡಾ.ನಂದೀಶ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಪಿ.ಪ್ರಕಾಶ್, ಉಪಾಧ್ಯಕ್ಷ ಕೆ.ಎನ್.ನವೀನ್‌ಕುಮಾರ್, ಪ್ರಧಾನ ಕಾರ್ಯದರ್ಶಿ ಆನಂದ್, ಖಜಾಂಚಿ ನಂಜುಂಡಸ್ವಾಮಿ ಇದ್ದರು.
ಡಯಾಲಿಸಿಸ್‌ಗೆ ಅವಕಾಶ ಕೊಡಲಿ
ಮೂತ್ರ ಶಾಸ್ತ್ರಜ್ಞ ಡಾ.ಎಸ್.ನರೇಂದ್ರ ಮಾತನಾಡಿ, ನಾವು 1500 ಕಿಡ್ನಿಯನ್ನು ಕಸಿ ಮಾಡಿದ್ದೇವೆ. ಆದಿಚುಂಚನಗಿರಿ ಆಸ್ಪತ್ರೆಯಲ್ಲಿ 9ಕ್ಕೂ ಹೆಚ್ಚು ಕಸಿ ನಡೆದಿದೆ. ಈ ಶಸ್ತ್ರಚಿಕಿತ್ಸೆ ಮಾಡಲು ಉತ್ತಮ ಸೌಲಭ್ಯಗಳಿವೆ. ಎಬಿಆರ್‌ಕೆ ಯೋಜನೆಯಡಿ ಕಿಡ್ನಿ ಕಸಿಗೆ ಸಹಾಯಧನದ ರೂಪದಲ್ಲಿ ಸರ್ಕಾರದಿಂದ ಅನುದಾನ ಬರಲಿದೆ. ಆದರೆ ಡಯಾಲಿಸಿಸ್ ಮಾಡುವುದಕ್ಕೂ ಖಾಸಗಿ ಆಸ್ಪತ್ರೆಗೆ ಅನುದಾನ ನೀಡಿದರೆ ರೋಗಿಗಳಿಗೆ ಅನುಕೂಲವಾಗಲಿದೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರಿಗೆ ಮನವಿ ಸಲ್ಲಿಸಲಾಗಿದ್ದು, ಸರ್ಕಾರದ ಹಂತದಲ್ಲಿ ಪರಿಶೀಲನೆ ನಡೆಯುತ್ತಿದೆ. ಈ ಪಾಲಿಸಿ ಅನುಷ್ಟಾನಗೊಂಡರೆ ರೋಗಿಗಳಿಗೆ ನೆರವಾಗಲಿದೆ ಎಂದರು.
ಇನ್ನು ಕಿಡ್ನಿ ವೈಫಲ್ಯಕ್ಕೆ ಹಲವು ಕಾರಣವಿರಬಹುದು. ಈ ಪೈಕಿ ಮುಖ್ಯವಾಗಿ ಯಾವುದೇ ವ್ಯಕ್ತಿ ಕೈ, ಕಾಲು, ಮಂಡಿ ಸೇರಿದಂತೆ ನೋವೆಂದು ವೈದ್ಯರ ಸಲಹೆ ಪಡೆಯದೇ ಮಾತ್ರೆ ಸೇವನೆ ಮಾಡಬಾರದು. ಇಂತಹ ಮಾತ್ರೆ ಕಿಡ್ನಿ ವೈಫಲ್ಯ ಮಾಡಬಹುದು. ಕೇವಲ ಒಂದೇ ಮಾತ್ರೆಯಿಂದಲೂ ಸಮಸ್ಯೆ ಬರಬಹುದು ಎಂದು ಸಲಹೆ ನೀಡಿದರು.