ಅಧಿವೇಶನದಲ್ಲಿ ತೆಂಗು ರೋಗದ ಚರ್ಚೆ

ಅಧಿವೇಶನದಲ್ಲಿ ತೆಂಗು ರೋಗದ ಚರ್ಚೆ
Published on

ಹಿರೀಸಾವೆ: ತಾಲೂಕಿನಾದ್ಯಂತ ತೆಂಗು ಬೆಳೆಗೆ ವಿವಿಧ ರೋಗಬಾಧೆ ಕಾಣಿಸಿಕೊಂಡಿದ್ದು ರೈತರು ಕಂಗಾಲಾಗಿದ್ದಾರೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.

ಹೋಬಳಿಯ ದಿಡಗ ಗ್ರಾಮದಲ್ಲಿ ತೋಟಗಾರಿಕೆ ಇಲಾಖೆ ಹಾಗೂ ತೆಂಗು ಅಭಿವೃದ್ಧಿ ಮಂಡಳಿ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಹಳೆ ತೆಂಗು ತೋಟಗಳ ಪ್ರಾತ್ಯಕ್ಷಿಕೆ (ಎಲ್‌ಒಡಿಪಿ) ಕಾರ್ಯಕ್ರಮದಲ್ಲಿ ಹಸಿರೆಲೆ ಗೊಬ್ಬರ ಹಾಗೂ ವಿವಿಧ ಪರಿಕರಗಳನ್ನು ವಿತರಿಸಿ ಮಾತನಾಡಿದರು.

ಎಳನೀರು, ತೆಂಗಿನಕಾಯಿ ಹಾಗೂ ಕೊಬ್ಬರಿಗೆ ಉತ್ತಮ ಬೆಲೆ ಸಿಗುತ್ತಿರುವುದು ಸಂತಸದ ವಿಚಾರ. ಆದರೆ ಅದೇ ತೆಂಗು ಬೆಳೆಗೆ ರೂಗೋಸ್, ರಸ ಸೋರುವುದು, ಚುಕ್ಕಿ ಹಾಗೂ ನುಸಿರೋಗ ಸೇರಿದಂತೆ ವಿವಿಧ ರೋಗಬಾಧೆ ಕಾಣಿಸಿಕೊಂಡಿರುವುದು ರೈತರಿಗೆ ಸಂಕಷ್ಟ ತಂದೊಡ್ಡಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಮುಂಬರುವ ಬೆಳಗಾವಿ ಅಧಿವೇಶನದಲ್ಲಿ ರೋಗಪೀಡಿತ ತೆಂಗು ಬೆಳೆಯ ಬಗ್ಗೆ ಚರ್ಚಿಸಿ ತೆಂಗುಬೆಳೆ ಪುನಶ್ಚೇತನ ಹಾಗೂ ಅಭಿವೃದ್ಧಿ ಸಲುವಾಗಿ 100 ಕೋಟಿ ರೂ. ಅನುದಾನ ಕಲ್ಪಿಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗುವುದು. ಅಲ್ಲದೆ ಹೆಚ್ಚಿನ ಪರಿಹಾರ ಕಲ್ಪಿಸುವಂತೆ ಕೇಂದ್ರ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ಭರವಸೆ ನೀಡಿದರು.

ತಾಲೂಕಿನ ಪ್ರಮುಖ ಹಾಗೂ ಆರ್ಥಿಕ ಮೂಲವಾದ ತೆಂಗು ಬೆಳೆಯು ರೈತರ ಬದುಕಿನ ಆಸರೆಯಾಗಿದ್ದು, ಇತ್ತೀಚಿನ ವರ್ಷಗಳಿಂದ ವಿವಿಧ ರೋಗಬಾಧೆಗೆ ತುತ್ತಾಗಿರುವ ಪರಿಣಾಮ ಬೆಳೆಗಾರರು ಸಂಕಷ್ಟದ ಕೂಪಕ್ಕೆ ಸಿಲುಕಿಕೊಂಡಿದ್ದಾರೆ. ಸಂಕಷ್ಟದಿಂದ ಪಾರಾಗಲು ಕೇಂದ್ರ ಹಾಗೂ ರಾಜ್ಯ ಸರ್ಕಾರದ ನೆರವಿನ ಅಗತ್ಯವಿದೆ ಎಂದು ತಿಳಿಸಿದರು.

ದಿಡಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ 1,183 ರೈತ ಫಲಾನುಭವಿಗಳಿಗೆ ಹಸಿರೆಲೆ ಗೊಬ್ಬರ, ಬೇವಿನ ಇಂಡಿ, ಬೇವಿನ ಎಣ್ಣೆ ಅಲ್ಲದೆ ಸೂಕ್ಷ್ಮ ಪೋಷಕಾಂಶಗಳಾದ ಮೆಗ್ನಿಷಿಯಂ, ಬೋರಾಕ್ಸ್, ಜಿಂಕ್, ಸೂಡೋಮೋನಸ್ ಸೇರಿದಂತೆ ಫಲಾನುಭವಿಗಳಿಗೆ ತಲಾ 7 ಸಾವಿರ ರೂ. ಮೌಲ್ಯದ ಪರಿಕರಗಳನ್ನು ಉಚಿತವಾಗಿ ವಿತರಿಸಲಾಯಿತು.

ದಿಡಗ ಗ್ರಾಮ ಪಂಚಾಯಿತಿ ಅಧ್ಯಕ್ಷ ದಿನೇಶ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯರಾದ ತುಮಕೂರು ಪುಟ್ಟರಾಜು, ಎಂ.ಆರ್.ವಾಸು, ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷರಾದ ಎಚ್.ಕೆ.ಯೋಗೇಶ್, ರಘುರಾಂ, ನಿರ್ದೇಶಕರಾದ ಮಲ್ಲೇಗೌಡ, ಎಚ್.ಎಸ್.ಮಹೇಶ್, ಮಧುಗೌಡ, ಗ್ರಾಪಂ ಸದಸ್ಯರಾದ ಸೌಮ್ಯಾ ಗವೀಶ್, ಎಚ್.ಎಸ್.ಸುಧಾಕರ್, ಪಿಡಿಒ ಕೆ.ಎಸ್.ಪ್ರಕಾಶ್, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಸಿ.ಮಂಜುನಾಥ್, ಸಹಾಯಕ ತೋಟಗಾರಿಕೆ ನಿರ್ದೇಶಕ ಕೆ.ರವಿನಾಯಕ್, ಸಹಾಯಕ ತೋಟಗಾರಿಕೆ ಅಧಿಕಾರಿಗಳಾದ ಎಸ್.ಟಿ. ಲಕ್ಷ್ಮೀ, ಎಂ.ಆರ್.ಕಿರಣ್, ಸಿ.ಬಿ.ಪ್ರದೀಪ್, ತೋಟಗಾರಿಕಾ ಸಹಾಯಕ ಕೆ.ಸಿ.ಚಂದ್ರಶೇಖರ್ ಇತರರು ಇದ್ದರು.

08 ಹಿರೀಸಾವೆ 01 ಹೋಬಳಿಯ ದಿಡಗ ಗ್ರಾಮದ ಎಪಿಎಂಸಿ ಆವರಣದಲ್ಲಿ ತೋಟಗಾರಿಕೆ ಇಲಾಖೆ ಹಾಗೂ ತೆಂಗು ಅಭಿವೃದ್ಧಿ ಮಂಡಳಿ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಶಾಸಕ ಸಿಎನ್ ಬಾಲಕೃಷ್ಣ ಚಾಲನೆ ನೀಡಿದರು. ಸಂಪತ್, ದಿನೇಶ್, ಕೆ.ಎಸ್. ಪ್ರಕಾಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net