

ವಿಜಯವಾಣಿ ಸುದ್ದಿಜಾಲ ಉಡುಪಿ
ರಾಜ್ಯದ ಕರಾವಳಿ ಭಾಗದಲ್ಲಿ ಆರೋಗ್ಯ, ಶೈಕ್ಷಣಿಕ, ಧಾರ್ಮಿಕ ಹಾಗೂ ವಾಣಿಜ್ಯ ಪ್ರವಾಸೋದ್ಯಮಕ್ಕೆ ಹೆಚ್ಚಿನ ಅವಕಾಶಗಳಿವೆ. ಹೀಗಾಗಿ ಆ ಭಾಗದ ಎಲ್ಲ ಶಾಸಕರ ಜತೆಗೆ ನಾನು ಹಾಗೂ ಪ್ರವಾಸೋದ್ಯಮ ಸಚಿವರು ಪ್ರತ್ಯೇಕವಾಗಿ ಸಭೆ ನಡೆಸಿ ಎಲ್ಲರ ಅಭಿಪ್ರಾಯ ಸಂಗ್ರಹಿಸುತ್ತೇವೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭರವಸೆ ನೀಡಿದರು.
ಬೆಂಗಳೂರಿನಲ್ಲಿ ಮಾ.4ರಂದು ನಡೆದ ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಬೈಂದೂರು ಬಿಜೆಪಿ ಶಾಸಕ ಗುರುರಾಜ ಶೆಟ್ಟಿ ಗಂಟಿಹೊಳೆ ಅವರು ರಾಜ್ಯ ಪ್ರವಾಸೋದ್ಯಮ ನೀತಿ ವಿಚಾರದಲ್ಲಿ ಕರಾವಳಿ ಭಾಗವನ್ನು ವಿಶೇಷವಾಗಿ ಪರಿಗಣಿಸಬೇಕು ಎಂಬ ಮನವಿಗೆ ಪ್ರತಿಕ್ರಿಯಿಸಿದರು.
ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜ ಮಾತನಾಡಿ, ಕರಾವಳಿ ಭಾಗದಲ್ಲಿ ಧಾರ್ಮಿಕ ಕೇಂದ್ರಗಳಿಗೆ ಬರುವ ಜನರನ್ನು ಇತರ ಪ್ರವಾಸೋದ್ಯಮ ಸ್ಥಳಗಳಿಗೆ ಆಕರ್ಷಿಸುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ವಿನಂತಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಿಕೆಶಿ, ರಾಜ್ಯದಲ್ಲಿ ಆರೋಗ್ಯ ಪ್ರವಾಸೋದ್ಯಮ, ಧಾರ್ಮಿಕ ಪ್ರವಾಸೋದ್ಯಮ, ವಾಣಿಜ್ಯೋದ್ಯಮ ಸೇರಿದಂತೆ ದೊಡ್ಡ ಅವಕಾಶ ಕರಾವಳಿ ಭಾಗದಲ್ಲಿದೆ. ಹೀಗಾಗಿ ನಮ್ಮ ಸಚಿವರಾದ ಎಚ್.ಕೆ. ಪಾಟೀಲ್ ಅವರು ದೊಡ್ಡ ಕನಸು ಕಂಡಿದ್ದು, ನಾವು ಈ ಬಗ್ಗೆ ಸಾಕಷ್ಟು ಚರ್ಚೆ ಮಾಡಿದ್ದೇವೆ. ಆ ಭಾಗದ ಶಾಸಕರ ಸಭೆ ಕರೆದು ಮಾತನಾಡಬೇಕಿದೆ ಎಂದರು.
ರಾತ್ರಿ 8 ಗಂಟೆಯ ಮೇಲೆ ಕರಾವಳಿ ಭಾಗ ಸ್ತಬ್ಧವಾಗುತ್ತದೆ. ಧಾರ್ಮಿಕ ಕಾರ್ಯ, ಭಜನೆ, ಬಯಲಾಟ ಹೊರತಾಗಿ ಬೇರೆ ಯಾವುದೇ ಚಟುವಟಿಕೆ ಇರುವುದಿಲ್ಲ. ಈ ವಿಚಾರವಾಗಿ ಅಲ್ಲಿನ ಶಾಸಕರೆಲ್ಲ ಕುಳಿತು ಚರ್ಚಿಸಿ ಸರ್ಕಾರಕ್ಕೆ ಪ್ರಸ್ತಾವನೆ ನೀಡಬೇಕು. ಕೆಲವು ವರ್ಷಗಳಿಂದ ಆ ಭಾಗದಲ್ಲಿ ಮಕ್ಕಳು ಶಾಲಾ-ಕಾಲೇಜುಗಳಿಗೆ ಸೇರ್ಪಡೆಯಾಗುವ ಪ್ರಮಾಣವೂ ಕುಸಿಯುತ್ತಿದೆ. ಮೆಡಿಕಲ್ ಹಾಗೂ ಇಂಜಿನಿಯರಿಂಗ್ ಕಾಲೇಜು ನಡೆಸುವವರು ಈ ವಿಚಾರವಾಗಿ ನಮ್ಮ ಬಳಿ ಚರ್ಚೆ ಮಾಡುತ್ತಿದ್ದಾರೆ ಎಂದು ಸಚಿವ ಶಿವಕುಮಾರ್ ತಿಳಿಸಿದರು.
ರಾತ್ರಿ 8ರ ನಂತರ ಕರಾವಳಿ ಬಾಗದಲ್ಲಿ ಏನು ಮಾಡಬೇಕು ಎಂದು ನೀವೇ ಸಲಹೆ ಕೊಡಿ ಎಂದು ಧಾರವಾಡ ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಿವಕುಮಾರ್, ರಾತ್ರಿ 8 ಗಂಟೆ ನಂತರ ಮಂಗಳೂರು ಸ್ತಬ್ಧ್ಧವಾಗುತ್ತದೆ ಅಂದರೆ ಅಲ್ಲಿನ ಜನ ಹೆಚ್ಚಾಗಿ ಮನೆಯಿಂದ ಆಚೆ ಬರುವುದಿಲ್ಲ ಎಂದರ್ಥ. ಹೀಗಾದರೆ ಅಲ್ಲಿ ಯಾವ ಆರ್ಥಿಕ ವಹಿವಾಟು ನಡೆಯಲು ಸಾಧ್ಯ? ಮಾಜಿ ಸಿಎಂ ಎಸ್.ಎಂ. ಕೃಷ್ಣ ಅವರ ಅವಧಿಯಲ್ಲಿ ಕರಾವಳಿ ಭಾಗದಲ್ಲಿ ಐಟಿ&ಬಿಟಿ ಸ್ಥಾಪಿಸಲು ಪ್ರಸ್ತಾವನೆ ನೀಡಲಾಗಿತ್ತು. ಆದರೆ, ಆ ಭಾಗದಲ್ಲಿ ಒಂದೇ ಒಂದು ಕಾಂಪ್ಲೆಕ್ಸ್ ಅಂದು ಇರಲಿಲ್ಲ. ಈಗ ಮೂರೋ, ನಾಲ್ಕೋ ತಲೆ ಎತ್ತುತ್ತಿವೆ. ರಾಜ್ಯದಲ್ಲಿ ಅತಿ ಹೆಚ್ಚು ಇಂಜಿನಿಯರಿಂಗ್ ಕಾಲೇಜು, ಮೆಡಿಕಲ್ ಕಾಲೇಜು ಇರುವುದೆಲ್ಲ ಅಲ್ಲಿಯೇ. ಅಲ್ಲಿರುವ ಪ್ರತಿಭೆಗಳೆಲ್ಲವೂ ಬೆಂಗಳೂರು, ಮುಂಬೈ ಹಾಗೂ ಹೊರದೇಶಗಳಿಗೆ ಹೋಗುತ್ತಿದ್ದಾರೆ. ಯಾಕೆ ಈ ಪರಿಸ್ಥಿತಿ ಇದೆ? ಯಾವುದೇ ನಗರದಲ್ಲಿ ಮನರಂಜನೆಗೆ ಅವಕಾಶವಿಲ್ಲದಿದ್ದರೆ ಅಲ್ಲಿ ಯುವಕರು ಆಸಕ್ತಿ ತೋರುವುದಿಲ್ಲ ಎಂದರು.