ಪೈಪ್‌ಲೈನ್‌ನಲ್ಲಿ ಮನೆಗಳಿಗೆ ಗ್ಯಾಸ್ ಪೂರೈಕೆ ಚರ್ಚೆ

04 CRP-2A
ಚನ್ನರಾಯಪಟ್ಟಣ ಪುರಸಭಾ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ 2024-25ನೇ ಸಾಲಿನ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಸಾರ್ವಜನಿಕರು ಭಾಗವಹಿಸಿದ್ದರು.
Published on

ಚನ್ನರಾಯಪಟ್ಟಣ: ಪೈಪ್‌ಲೈನ್ ಮುಖಾಂತರ ಮನೆ, ಮನೆಗೆ ಗ್ಯಾಸ್ ಸರಬರಾಜು ಮಾಡುವ ಯೋಜನೆ ಅನುಷ್ಠಾನ ಕುರಿತು ಪುರಸಭೆ ಸದಸ್ಯರು ಹಾಗೂ ಅಧಿಕಾರಿಗಳು ಚರ್ಚೆ ನಡೆಸಿದರು.

ಪಟ್ಟಣದ ಪುರಸಭೆ ಕಚೇರಿಯಲ್ಲಿ ಅಧ್ಯಕ್ಷೆ ಕೆ.ಎನ್.ಬನಶಂಕರಿ ರಘು ಅಧ್ಯಕ್ಷತೆಯಲ್ಲಿ ಶನಿವಾರ ಆಯೋಜಿಸಿದ್ದ 2024-25ನೇ ಸಾಲಿನ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಪುರಸಭೆ ಮಾಜಿ ಸದಸ್ಯ ಸಿ.ಪಿ.ಕುಮಾರ್, ಈ ಯೋಜನೆಯಿಂದ ಸಾರ್ವಜನಿಕರಿಗೆ ಪೈಪ್‌ಲೈನ್ ಮೂಲಕ ಮನೆಗಳಿಗೆ ಅಡುಗೆ ಅನಿಲ ಸಂಪರ್ಕ ಕಲ್ಪಿಸುವುದರಿಂದ ಕಡಿಮೆ ವೆಚ್ಚದಲ್ಲಿ ಜನರಿಗೆ ಅಡುಗೆ ಅನಿಲ ಲಭಿಸುತ್ತದೆ. ಈಗಾಗಲೇ ಅರಕಲಗೂಡು ಪಟ್ಟಣದಲ್ಲಿ ಬಹುತೇಕ ಕಾಮಗಾರಿ ಪೂರ್ಣಗೊಂಡಿದೆ. ಹಾಸನ, ಬೇಲೂರಿನಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ. ಗುತ್ತಿಗೆದಾರರನ್ನು ಕರೆಸಿ ಮಾತನಾಡಿ ಕೆಲಸ ಮುಂದುವರಿಸಬೇಕೆಂದು ಒತ್ತಾಯಿಸಿದರು.

ಇದಕ್ಕೆ ಉತ್ತರಿಸಿದ ಪುರಸಭೆ ಮುಖ್ಯಾಧಿಕಾರಿ ಕೆ.ಎನ್.ಹೇಮಂತ್, ಮನೆಗಳಿಗೆ ಪೈಪ್‌ಲೈನ್ ಮೂಲಕ ಅಡುಗೆ ಅನಿಲ ಸಂಪರ್ಕ ಕಲ್ಪಿಸಬೇಕಾದರೆ ರಸ್ತೆ ಅಗೆಯಬೇಕಾಗುತ್ತದೆ. ಹಾಗಾಗಿ ಗುತ್ತಿಗೆದಾರರು ಪುರಸಭೆಗೆ ಹಣ ಪಾವತಿಸಬೇಕು. ಗ್ಯಾಸ್ ಸರಬರಾಜು ಮಾಡುವವರು ಪುರಸಭೆಯೊಂದಿಗೆ ಯಾವುದೇ ರೀತಿಯಲ್ಲಿ ಪತ್ರ ವ್ಯವಹಾರ ಮಾಡಿಲ್ಲ. ಅಲ್ಲದೆ ಅವರ ಯೋಜನೆ ಕುರಿತಂತೆ ಯಾವುದೇ ವಿವರಗಳನ್ನೂ ನಮಗೆ ನೀಡಿಲ್ಲವಾದ್ದರಿಂದ ಕಾಮಗಾರಿಗೆ ಅಡ್ಡಿಯಾಗಿದೆ ಎಂದು ತಿಳಿಸಿದರು.

ಭುವನೇಶ್ವರಿ ತರಕಾರಿ ಮಾರುಕಟ್ಟೆ ಸಂಘದ ಅಧ್ಯಕ್ಷ ಸಿ.ಕೆ.ಕೃಷ್ಣ ಮಾತನಾಡಿ, ಪುರಸಭಾ ವ್ಯಾಪ್ತಿಯಲ್ಲಿ ಸ್ವಚ್ಛತೆ ಕೈಗೊಳ್ಳಲು ಬಜೆಟ್‌ನಲ್ಲಿ ಹೆಚ್ಚು ಅನುದಾನ ಮೀಸಲಿರಿಸಬೇಕು ಹಾಗೂ ಒಂದನೇ ವಾರ್ಡ್‌ನಲ್ಲಿ ಒಳಚರಂಡಿ ಕಾಮಗಾರಿ ಬೇಕಾಬಿಟ್ಟಿ ಮಾಡಿದ್ದು, ಸರ್ಕಾರದ ಅನುದಾನ ಪೋಲಾಗುತ್ತಿದೆ. ಒಂದೇ ರಸ್ತೆಯಲ್ಲಿ ಎರಡು ಪೈಪ್‌ಲೈನ್‌ಗಳನ್ನು ಅಳವಡಿಸಲಾಗಿದೆ ಎಂದು ದೂರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ, ಒಳಚರಂಡಿಗೆ ಇದುವರೆಗೆ ಎಸ್‌ಟಿಪಿ(ಒಳಚರಂಡಿ ಸಂಸ್ಕರಣಾ ಘಟಕ) ಒಂದು ಪ್ಲಾಂಟ್ ಇತ್ತು. ನಾಲ್ಕು ದಿಕ್ಕಿನಲ್ಲಿ ಎಸ್‌ಟಿಪಿ ಪ್ಲಾಂಟ್ ನಿರ್ಮಿಸಲು 125 ಕೋಟಿ ರೂ. ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಪ್ರಸಾವನೆ ಸಲ್ಲಿಸಲಾಗಿದೆ. ಎಸ್‌ಟಿಪಿ ಜತೆಗೆ ಹೊಸದಾಗಿ ಒಳಚರಂಡಿ ಪೈಪ್‌ಲೈನ್ ಕಾಮಗಾರಿ ಕೈಗೊಳ್ಳಲಾಗುವುದು. ಮೂರು ತಿಂಗಳಲ್ಲಿ ಅನುದಾನ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದರು.

ಎಸ್‌ಎಫ್‌ಸಿ ಯೋಜನೆಯಡಿ 10 ಕೋಟಿ ರೂ. ಅನುದಾನ ಬರಬೇಕಿದ್ದು ಕೇವಲ 3 ಕೋಟಿ ರೂ. ಮಾತ್ರ ಬಿಡುಗಡೆಯಾಗಿದೆ. ಯಾವುದೇ ದೊಡ್ಡ ಯೋಜನೆಗಳನ್ನೂ ತೆಗೆದು ಕೊಳ್ಳಲು ಸಾಧ್ಯವಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ಕ್ರಮ ವಹಿಸಲಾಗುವುದು ಎಂದು ಹೇಳಿದರು.

ಪುರಸಭೆಗೆ ಹೆಚ್ಚು ಆದಾಯ ಬಂದರೆ ಅಭಿವೃದ್ಧಿ ಕೈಗೊಳ್ಳಲು ಸಾಧ್ಯವಾಗುತ್ತದೆ. ಹಾಗಾಗಿ ಕಂದಾಯ ವಸೂಲಿಗೆ ಕ್ರಮ ತೆಗೆದುಕೊಳ್ಳಬೇಕು’ ಎಂದು ಮಾಜಿ ಸದಸ್ಯ ಸಿ.ಎನ್. ಮಂಜುನಾಥ್ ಸಲಹೆ ನೀಡಿದರು.

ಉಪಾಧ್ಯಕ್ಷೆ ರಾಣಿ, ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಆರ್. ಸುರೇಶ್, ಸದಸ್ಯರಾದ ಜಿ.ಆರ್. ಸುರೇಶ್, ಯೋಗೀಶ್ ಇತರರು ಇದ್ದರು.

ಜಮಾ-ಖರ್ಚುಗಳ ವಿವರ ಮಂಡನೆ

2025-26ನೇ ಸಾಲಿಗೆ ಆಯವ್ಯಯ ಸಿದ್ಧಪಡಿಸಲು ಹಿಂದಿನ ಸಾಲಿನ ಜಮಾ-ಖರ್ಚುಗಳ ವಿವರಗಳನ್ನು ಸಭೆಯಲ್ಲಿ ಮಂಡಿಸಲಾಯಿತು. ಆಸ್ತಿ ತೆರಿಗೆ 4.1 ಕೋಟಿ ರೂ. ಸಂಗ್ರಹಿಸುವ ಗುರಿಯಿದ್ದು, ಈಗಾಗಲೇ 4.24 ಕೋಟಿ ರೂ. ಸಂಗ್ರಹವಾಗಿದೆ. ದಂಡ ರೂಪದಲ್ಲಿ 1.1ಕೋಟಿ ರೂ. ಸಂಗ್ರಹವಾಗಬೇಕಿದ್ದು, ಡಿಸೆಂಬರ್ ಅಂತ್ಯಕ್ಕೆ 99.21 ಲಕ್ಷ ರೂ. ವಸೂಲಿ ಮಾಡಲಾಗಿದೆ. ಅಂಗಡಿ ಮಳಿಗೆಗಳ ಆದಾಯದ ಗುರಿ 1.4 ಕೋಟಿ ರೂ.ಇದ್ದು, ಈವರೆಗೆ 1 ಕೋಟಿ ರೂ. ಸಂಗ್ರಹವಾಗಿದೆ. 14ನೇ ಹಣಕಾಸು ಯೋಜನೆ ಅನುದಾನ 2.5 ಕೋಟಿ ರೂ. ನಿರೀಕ್ಷಿಸಿದ್ದು ಕೇವಲ 72 ಲಕ್ಷ ರೂ. ಮಾತ್ರ ಬಂದಿದೆ. ಎಸ್‌ಎಫ್‌ಸಿ ಮುಕ್ತ ನಿಧಿ 1 ಕೋಟಿ ರೂ. ನಿರೀಕ್ಷೆಯಿದ್ದು, 27.45 ಲಕ್ಷ ರೂ.ಬಂದಿದೆ. ಒಟ್ಟಾರೆ ಪ್ರಸಕ್ತ ಸಾಲಿನಲ್ಲಿ 30.73 ಕೋಟಿ ರೂ. ಆದಾಯ ನಿರೀಕ್ಷಿಸಿದ್ದು, ಈವರೆಗೆ 19.46 ಕೋಟಿ ರೂ. ಆದಾಯ ಬಂದಿದೆ(ಶೇ.63) ಎಂದು ಸಭೆ ಗಮನಕ್ಕೆ ತರಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net