

ಕಲಬುರಗಿ: ಮಹಾನಗರ ಪಾಲಿಕೆಯ ಮುಂದುವರಿದ ಸಾಮಾನ್ಯ ಸಭೆಯಲ್ಲಿ ಪಾಲಿಕೆ ಸದಸ್ಯೆಯರ ಪತಿಯಂದಿರಿಗೆ, ಕುಟುಂಬದವರಿಗೆ ವೀಕ್ಷಕರ ಗ್ಯಾಲರಿಯಲ್ಲಿ ಕೂಡಲು ಅವಕಾಶ ನೀಡುವ ಕುರಿತು ಬಿಸಿ ಬಿಸಿ ಚರ್ಚೆ ನಡೆಯಿತು.
ಸಭೆಗೆ ಮುನ್ನವೇ ಒಳ ಪ್ರವೇಶಿಸಿದ್ದ ಜೆಡಿಎಸ್ ಮುಖಂಡ ಕೃಷ್ಣಾ ರಡ್ಡಿ ಮೇಯರ್ ಗೆ ಮನವಿ ಮಾಡಲು ಮುಂದಾದರು. ಇದಕ್ಕೆ ಆಕ್ಷೇಪಿಸಿದ ಪ್ರತಿ ಪಕ್ಷ ನಾಯಕ ಅಜ್ಮಲ್ ಗೋಲಾ ಸಭೆಯ ಘನತೆ ಇರಲಿ. ಹೊರಗಿನವರಿಗೆ ಪ್ರತಿಕ್ರಿಯಿಸಬೇಕಿಲ್ಲ. ನಮಗೆ ಉತ್ತರ ನೀಡಿ ಎಂದರು.
ಕಳೆದ ಬಾರಿ ಸಭೆಯಲ್ಲಿ ಸದಸ್ಯೆಯರ ಪತಿಯಂದಿರು ಚರ್ಚೆ ಮಧ್ಯೆ ಪ್ರವೇಶಿಸಿದ್ದು, ಪ್ರತಿ ಪಕ್ಷ ನಾಯಕ ಕೃಷ್ಣಾ ನಾಯಕ್ಗೆ ನಿಂದಿಸಿದ್ದಾರೆ ಎಂಬುದು ವಿವಾದಕ್ಕೆ ಕಾರಣವಾಗಿತ್ತು. ಆದ್ದರಿಂದ ಮೇಯರ್ ವಿಶಾಲ ದರ್ಗಿ ಸಭೆಯಲ್ಲಿ ಸಾರ್ವಜನಿಕ ಪ್ರವೇಶ ನಿರ್ಬಂಧಿಸಿದ್ದರು. ಇದರ ಮಧ್ಯೆ ಅವಕಾಶ ನೀಡುವಂತೆ ಸದಸ್ಯ ಸಚಿನ ಕಡಗಂಚಿ ಮನವಿ ಮಾಡಿದರು. ಇತರ ಮಹಿಳಾ ಸದಸ್ಯರೂ ಸಚಿನ್ ಮಾತಿಗೆ ಸಾಥ್ ನೀಡಿ ಎಂದು ಮನವಿ ಮಾಡಿದರು. ಎಲ್ಲರ ಮನವಿ ಮೇರೆಗೆ ಸದಸ್ಯೆಯರ ಕುಟುಂಬದವರಿಗೆ ಮಾತ್ರ ಅವಕಾಶ ನೀಡಿ ಮೇಯರ್ ವಿಶಾಲ ದರ್ಗಿ ಆದೇಶಿಸಿದರು.
ಇದರ ಮಧ್ಯೆ ಕುಟುಂಬದವರು ಹೊರತುಪಡಿಸಿ, ವೀಕ್ಷಕರ ಗ್ಯಾಲರಿಯನ್ನು ಪ್ರವೇಶಿಸಿದವರನ್ನು ಹೊರಗೆ ಕಳುಹಿಸಲಾಯಿತು.