ನೌಕರರಿಗೆ ಸೌಲಭ್ಯ ನೀಡಲು ಎಚ್‌ಡಿಸಿಸಿ ಸಭೆಯಲ್ಲಿ ಚರ್ಚೆ

5blrp8
ಬೇಲೂರು ತಾಲೂಕು ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘಗಳ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಚ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಎ.ನಾಗರಾಜ್ ಅವರನ್ನು ಸನ್ಮಾನಿಸಲಾಯಿತು.
Published on

ಬೇಲೂರು: ಸಹಕಾರ ಕ್ಷೇತ್ರಗಳಿಗೆ ಕೊಂಡಿಯಂತೆ ಕೆಲಸ ಮಾಡುವ ತಾಲೂಕಿನ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘಗಳ ನೌಕರರ ಸಂಘದ ಸದಸ್ಯರ ಕ್ಷೇಮಾಭಿವೃದ್ಧಿಗಾಗಿ ಎಲ್ಲ ರೀತಿಯ ಸಹಕಾರ ಮತ್ತು ಸೌಲಭ್ಯ ನೀಡುವುದಕ್ಕೆ ವಿಶೇಷ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಎಚ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಎ.ನಾಗರಾಜ್ ಹೇಳಿದರು.

ಪಟ್ಟಣದಲ್ಲಿ ತಾಲೂಕು ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘಗಳ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಸಹಕಾರ ಕ್ಷೇತ್ರದಲ್ಲಿ ಹಾಸನ ಜಿಲ್ಲೆಯಲ್ಲೇ ಬೇಲೂರು ತಾಲೂಕು ಪ್ರಥಮ ಸ್ಥಾನದಲ್ಲಿದೆ. ಇದಕ್ಕೆ ಶ್ರಮವಹಿಸಿ ಕೆಲಸ ಮಾಡುತ್ತಿರುವ ಸಹಕಾರ ರತ್ನಗಳ ಸೇವೆಯೇ ಕಾರಣ. ನಿಮ್ಮ ಕ್ಷೇಮಾಭಿವೃದ್ಧಿಗೆ ಎಲ್ಲ ರೀತಿಯ ನೆರವು ನೀಡಲು ಬದ್ಧರಾಗಿದ್ದು, ಮೊದಲು ಸಂಘಟಿತರಾಗಬೇಕು. ವ್ಯಕ್ತಿಗತ ಹೋರಾಟಕ್ಕಿಂತ ಸಂಘಟಿತ ಹೋರಾಟ ಹೆಚ್ಚು ಶಕ್ತಿಶಾಲಿ. ಆದ್ದರಿಂದ ಒಟ್ಟಾಗಿ ಒಂದೇ ಧ್ವನಿಯಲ್ಲಿ ಮಾತನಾಡಿದರೆ ಸಮಸ್ಯೆ ಬಗೆಹರಿಯದೆ ಉಳಿಯುವುದಿಲ್ಲ ಎಂದು ತಿಳಿಸಿದರು.

ಮುಂದಿನ ದಿನಗಳಲ್ಲಿ ನೌಕರರ ವರ್ಗಕ್ಕೆ ಆರೋಗ್ಯ ವಿಮೆ, ಕ್ಷೇಮಾಭಿವೃದ್ಧಿ ಸಂಘದ ನೂತನ ಭವನಕ್ಕೆ ನೆರವು ನೀಡುವುದಾಗಿ ಹೇಳಿದರು.

ತಾಲೂಕು ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘಗಳ ನೌಕರರ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಅಧ್ಯಕ್ಷ ಜಗದೀಶ್ ಮಾತನಾಡಿ, ರಾಜ್ಯದಲ್ಲೇ ಪ್ರಥಮ ಬಾರಿಗೆ ಹಾಸನ ಜಿಲ್ಲೆಯಲ್ಲಿ ಸಹಕಾರ ಸಂಘಗಳ ಕ್ಷೇಮಾಭಿವೃದ್ಧಿ ಸಂಘ ಸ್ಥಾಪಿಸಿದ್ದೇವೆ. ಈ ಮೂಲಕ ನಮ್ಮ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. ಹಿಂದೆ ಸಹಕಾರ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸಿದ ನೌಕರರು ಅನೇಕ ಸಮಸ್ಯೆ ಎದುರಿಸುತ್ತಿದ್ದು, ವೇತನ, ನಿವೃತ್ತಿ ಸೌಲಭ್ಯ, ಭದ್ರತೆ ಸೇರಿದಂತೆ ಇತರೆ ವಿಷಯಗಳನ್ನು ಬಗೆಹರಿಸಲು ನಮಗೆ ಎಲ್ಲ ರೀತಿಯ ಸಹಕಾರ ನೀಡುವಂತೆ ಎಚ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಎ.ನಾಗರಾಜ್ ಅವರಲ್ಲಿ ಮನವಿ ಮಾಡುತ್ತೇವೆ ಎಂದರು.

ಬೇಲೂರು ಸಹಕಾರ ಸಂಘಗಳ ಅಭಿವೃದ್ಧಿ ಅಧಿಕಾರಿ ಗುರುಮೂರ್ತಿ ಮಾತನಾಡಿ, ವ್ಯಕ್ತಿಗತ ಹೋರಾಟಕ್ಕಿಂತ ಸಂಘಟಿತ ಹೋರಾಟಕ್ಕೆ ಹೆಚ್ಚು ಬೆಲೆ ಇರುವುದರಿಂದ ಸಹಕಾರ ಸಂಘಗಳ ಎಲ್ಲ ನೌಕರರು ಯಾವುದೇ ಸಮಸ್ಯೆ ಬಂದರೂ ಒಟ್ಟಾಗಿ ಬಗೆಹರಿಸುವ ಕೆಲಸ ಮಾಡಬೇಕು. ತಾಲೂಕು ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘಗಳ ನೌಕರರ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಪ್ರತಿ ತಿಂಗಳು ಸಭೆ ಕರೆದು ಅವರ ಸಮಸ್ಯೆಗಳನ್ನು ಬಗೆಹರಿಸುವ ಕೆಲಸ ಮಾಡಲಾಗುವುದು ಎಂದರು.

ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘಗಳ ನೌಕರರ ಸಂಘದ ಕಾರ್ಯದರ್ಶಿ ಸೋಮಶೇಖರ್, ಖಜಾಂಚಿ ಚರಣ್, ನಿರ್ದೇಶಕರಾದ ಶಿವಕುಮಾರ್, ರವಿಕುಮಾರ್, ರಂಗಸ್ವಾಮಿ, ಜ್ಯೋತಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net