

ಚಿಕ್ಕಬಳ್ಳಾಪುರ: ಪ್ರಾದೇಶಿಕ ಅಸಮತೋಲನ ನಿವಾರಣೆ ಸಮಿತಿಯ ಅಧ್ಯಕ್ಷ ಪ್ರೊ ಗೋವಿಂದರಾವ್ ನೇತೃತ್ವದಲ್ಲಿ ಬೆಂಗಳೂರು ವಿಭಾಗ ವ್ಯಾಪ್ತಿಯಲ್ಲಿ ಅಭಿವೃದ್ಧಿ ವಿಚಾರವಾಗಿ ಚರ್ಚಿಸಲಾಯಿತು.
ಈ ಭಾಗದಲ್ಲಿ ನೀರಾವರಿ ಸಮಸ್ಯೆ, ಕೃಷಿ, ರೇಷ್ಮೆ ಹಾಗೂ ತೋಟಗಾರಿಕಾ ಬೆಳೆಗಳ ಆಧಾರಿತ ಉತ್ಪನ್ನಗಳನ್ನು ತಯಾರಿಸುವ ಉತ್ಪಾದನಾ ಘಟಕಗಳ ಸ್ಥಾಪನೆ, ಶೀತಲ ಘಟಕಗಳ ಸ್ಥಾಪನೆ, ಮಳೆ ಕೊಯ್ಲು, ಹಾಲಿನ ಪ್ರೋತ್ಸಾಹ ಧನ ಹೆಚ್ಚಳ, ಪಶು ಆಹಾರ ದರ ಕಡಿತ, ಪ್ರವಾಸಿ ತಾಣಗಳ ಅಭಿವೃದ್ಧಿ, ಕೈಗಾರಿಕೆಗಳು ನಿರೀಕ್ಷಿಸುವ ಮಾನವ ಸಂಪನ್ಮೂಲ ಹಾಗೂ ಕೌಶಲಾಭಿವೃದ್ಧಿ ಪೂರೈಕೆಗೆ ಪೂರಕವಾಗಿ ಸಾರ್ವಜನಿಕ ಅಹವಾಲುಗಳನ್ನು ಸ್ವೀಕರಿಸಲಾಯಿತು. ಬಾಲ್ಯವಿವಾಹ ನಿಯಂತ್ರಣ ವಿಚಾರವಾಗಿಯೂ ಚರ್ಚೆಯಾಯಿತು. ಹಾಗೆಯೇ ಸಭೆಯ ಮಾಹಿತಿಯನ್ನಾಧಾರಿಸಿ ಸರ್ಕಾರಕ್ಕೆ ಅಗತ್ಯ ಶಿಫಾರಸುಗಳನ್ನು ಸರ್ಕಾರಕ್ಕೆ ಸಲ್ಲಿಸುವುದಾಗಿ ಸಮಿತಿ ಅಧ್ಯಕ್ಷರು ಭರವಸೆ ನೀಡಿದರು.
*ವರದಿಯಾನುಸಾರ ಅಭಿವೃದ್ಧಿ
ಪ್ರಾದೇಶಿಕ ಅಸಮಾನತೆಯ ನಿವಾರಣೆಗಾಗಿ 2002 ರಲ್ಲಿ ಡಾ.ಡಿ.ಎಂ. ನಂಜುಂಡಪ್ಪ 35 ಸೂಚ್ಯಂಕಗಳನ್ನು ಪರಿಶೀಲಿಸಿ, 1200 ಪುಟಗಳ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ್ದು ಇದರ ಶಿಾರಸ್ಸಿನಂತೆ ಕ್ರಮ ಕೈಗೊಳ್ಳಲಾಗಿತ್ತು. ಇದರ ಪ್ರಕಾರ ರಾಜ್ಯದ ಭೂ ಭಾಗವನ್ನು ನಾಲ್ಕು ಭಾಗಗಳಾಗಿ ವಿಂಗಡಿಸಿ, 39 ಅತ್ಯಂತ ಹಿಂದುಳಿದ ತಾಲೂಕುಗಳು, 40 ಅತಿ ಹಿಂದುಳಿದ ತಾಲೂಕುಗಳು ಹಾಗೂ 35 ಹಿಂದುಳಿದ ತಾಲೂಕುಗಳನ್ನು ಗುರುತಿಸಿದ್ದು ಈ 114 ತಾಲೂಕುಗಳ ಅಭಿವೃದ್ಧಿಗೆ 31 ಸಾವಿರ ಕೋಟಿ ವಿಶೇಷ ಅನುದಾನವನ್ನು ವಿನಿಯೋಗಿಸುವ ಮೂಲಕ ಅಸಮಾನತೆ ನಿವಾರಣೆಗೆ ನಿರ್ಧರಿಸಲಾಗಿತ್ತು. ಅನುದಾನದ ಪೈಕಿ ಗುಲ್ಬರ್ಗಕ್ಕೆ ಶೇ.40 ರಷ್ಟು, ಬೆಂಗಳೂರು ವಿಭಾಗಕ್ಕೆ ಶೇ.25 ರಷ್ಟು, ಬೆಳಗಾವಿ ವಿಭಾಗಕ್ಕೆ ಶೇ.20 ರಷ್ಟು ಹಾಗೂ ಮೈಸೂರು ವಿಭಾಗಕ್ಕೆ ಶೇ.15 ರಷ್ಟು ವೆಚ್ಚದ ಅಗತ್ಯತೆಯ ಬಗ್ಗೆ ವರದಿಯಲ್ಲಿ ಮಾಹಿತಿ ಇದ್ದು 2007-&08 ನೇ ಸಾಲಿನಿಂದ 45 ಸಾವಿರ ಕೋಟಿ ರೂ ಮಂಜೂರಾತಿ ಪೈಕಿ 37 ಸಾವಿರ ಕೋಟಿ ಬಿಡುಗಡೆಯಾಗಿದ್ದು ಇಲ್ಲಿಯವರೆಗೆ 35 ಸಾವಿರ ಕೋಟಿ ರೂ ವೆಚ್ಚ ಮಾಡಲಾಗಿದೆ ಎಂದು ಸಮಿತಿ ಅಧ್ಯಕ್ಷ ಸಮಿತಿಯ ಅಧ್ಯಕ್ಷ ಪ್ರೊ ಎಂ. ಗೋವಿಂದ ರಾವ್ ತಿಳಿಸಿದ್ದಾರೆ.
ನಂಜುಂಡಪ್ಪ ವರದಿ ಅನುಷ್ಠಾನ ಮತ್ತು ಅನುದಾನ ಖರ್ಚಿನಿಂದ ರಾಜ್ಯದಲ್ಲಿ ಹಿಂದುಳಿದ ತಾಲೂಕುಗಳು ಅಭಿವೃದ್ಧಿ ಆಗಿವೆಯೇ ಇಲ್ಲವೇ? ಎಂಬುದರ ಅಧ್ಯಯನಕ್ಕಾಗಿ ಹೊಸ ಸಮಿತಿಯನ್ನು ರಚಿಸಲಾಗಿದೆ ಎಂದು ತಿಳಿಸಿದ್ದಾರೆ.
ನಂಜುಂಡಪ್ಪ ವರದಿ ಅನುಷ್ಠಾನಗೊಂಡು 22 ವರ್ಷಗಳು ಕಳೆದಿದ್ದು, ಅಂದು ಪರಿಗಣಿಸಿದ್ದ ಕೆಲವು ಸೂಚ್ಯಂಕಗಳು ಮಾತ್ರ ಇಂದು ಮೌಲ್ಯವನ್ನು ಕಳೆದುಕೊಂಡಿವೆ. ಇದರ ಜೊತೆಗೆ 176 ತಾಲ್ಲೂಕುಗಳ ಬದಲಾಗಿ ಪ್ರಸ್ತುತ ರಾಜ್ಯದಲ್ಲಿ 240 ತಾಲ್ಲೂಕುಗಳಾಗಿವೆ. ಇಂತಹ ಎಲ್ಲಾ ವಿಚಾರಗಳನ್ನು ಅವಲೋಕನ ಮಾಡಿ ಪ್ರಾದೇಶಿಕ ಅಸಮಾನತೆ ನಿವಾರಣೆಗೆ ಏನೆಲ್ಲ ಯುಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಕುರಿತ ಶಿಪಾರಸ್ಸುಗಳ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವ ಉದ್ದೇಶದಿಂದ ಪ್ರಾದೇಶಿಕ ಅಸಮತೋಲನಾ ನಿವಾರಣಾ ಸಮಿತಿಯನ್ನು ರಾಜ್ಯ ಸರ್ಕಾರ ರಚಿಸಿದೆ. ಅದರಂತೆ ಇಂದು ಬೆಂಗಳೂರು ವಿಭಾಗದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ ಹಾಗೂ ರಾಮನಗರ ಜಿಲ್ಲೆಗಳ ಅಧಿಕಾರಿಗಳು, ಸರ್ಕಾರೇತರ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರಿಂದ ಮನವಿ ಹಾಗೂ ಮಾಹಿತಿಯನ್ನು ಪಡೆಯಲಾಗಿದೆ ಜೋತೆಗೆ ಲಿಖಿತವಾಗಿಯೂ ಏನಾದರೂ ಅಹವಾಲುಗಳು, ಸಲಹೆಗಳು ಮನವಿಗಳು ಇದ್ದರೆ ನೇರವಾಗಿ ಬೆಂಗಳೂರಿನಲ್ಲಿರುವ ಸಮಿತಿಯ ಕಚೇರಿಗೆ ಕಳುಹಿಸಿಕೊಡಲು ಖುದ್ದಾಗಿ ಸಲ್ಲಿಸಲು ಸಹ ತಿಳಿಸಲಾಗಿದೆ ಎಂದು ಅಧ್ಯಕ್ಷರು ಮಾಹಿತಿ ನೀಡಿದರು.