27 ಸಾವಿರ ರೈತರ ಖಾತೆಗೆ 4.86 ಕೋಟಿ ರೂ. ಬರಪರಿಹಾರ

udp-17-dc
Published on

ಉಡುಪಿ: ಜಿಲ್ಲೆಯಲ್ಲಿ ಕಾರ್ಕಳ, ಹೆಬ್ರಿ ಮತ್ತು ಬ್ರಹ್ಮಾವರ ಬರ ಪೀಡಿತ ಪ್ರದೇಶ ಎಂಬುದಾಗಿ ಸರ್ಕಾರ ಘೋಷಿಸಿದ್ದು, ಮೂರು ತಾಲೂಕುಗಳ 27 ಸಾವಿರ ರೈತರಿಗೆ ಎಕ್ರೆಗೆ 2 ಸಾವಿರ ರೂ. ನಂತೆ 4.86 ಕೋಟಿ ರೂ. ಭತ್ತದ ಬೆಳೆ ಪರಿಹಾರ ಮೊತ್ತ ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ತಿಳಿಸಿದರು.

ಶುಕ್ರವಾರ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪತ್ರಿಕಾ ಭವನದಲ್ಲಿ ನಡೆದ ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆ ಹಾಗೂ ಮಳೆಗಾಲದ ಸಿದ್ಧತೆ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಈ ಬಾರಿ ಅಕ್ಟೋಬರ್​ ಮತ್ತು ನವೆಂಬರ್​ ತಿಂಗಳಿನಲ್ಲಿ ಎಲ್ಲಾ ವೆಂಟೆಂಡ್​ ಡ್ಯಾಂಗಳಿಗೆ ಹಲಗೆ ಹಾಕುವ ಕೆಲಸ ಮಾಡಿರುವುದರಿಂದ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಗ್ರಾಮೀಣಭಾಗಗಳಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿ ಕಾಡುತ್ತಿಲ್ಲ. ಅಂತರ್ಜಲ ಮಟ್ಟವೂ ವೃದ್ಧಿಸಿದೆ. ನಗರಸಭೆ ವ್ಯಾಪ್ತಿಯಲ್ಲಿ ರೇಶನಿಂಗ್​ ಪ್ರಾರಂಭಿಸಲಾಗಿದ್ದು, ಎತ್ತರದ ಪ್ರದೇಶಗಳಿಗೆ ಟ್ಯಾಂಕರ್​ ಮೂಲಕ ನೀರು ನೀಡಲಾಗುತ್ತಿದೆ. ನಗರ ವ್ಯಾಪ್ತಿಯಲ್ಲಿ ಸರ್ಕಾರಿ ಬಾವಿಗಳನ್ನು ಶುದ್ಧೀಕರಿಸಿ ಇಟ್ಟುಕೊಳ್ಳಲಾಗಿದ್ದು, ಸದ್ಯಕ್ಕೆ ಯಾವುದೇ ಸಮಸ್ಯೆ ಇಲ್ಲ. ಬೈಂದೂರು ಪಟ್ಟಣ ಪಂಚಾಯಿತಿ 10 ವಾರ್ಡ್​ಗಳಲ್ಲಿ ಟ್ಯಾಂಕರ್​ ನೀರು ಪೂರೈಸಲಾಗುತ್ತಿದೆ. ಬ್ರಹ್ಮಾವರ ಮತ್ತು ಬೈಂದೂರು, ಪೆರ್ಡೂರು ಗ್ರಾಪಂಗಳ ಕೆಲವು ಪ್ರದೇಶ ಗಳಲ್ಲಿ 25 ಮನೆಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಕುಂದಾಪುರ ಉಪ ವಿಭಾಗಾಧಿಕಾರಿ ನೇತೃತ್ವದ ಕಾರ್ಯಪಡೆಯಲ್ಲಿ ತೀಮಾರ್ನ ತೆಗೆದುಕೊಂಡು ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.

ಜಿಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಪ್ರತಿಕ್​ ಬಾಯಲ್​ ಮಾತನಾಡಿ, ಜಿಲ್ಲೆಯ ಗ್ರಾಪಂ ವ್ಯಾಪ್ತಿಯಲ್ಲಿ ಯಾವುದೇ ರೀತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದೆ. ಜಿಲ್ಲೆಯ ಬಹ್ಮಾವರ, ಕುಂದಾಪುರ ಹಾಗೂ ಹೆಬ್ರಿ, ಬೈಂದೂರು ತಾಲೂಕಿನ 23 ಗ್ರಾಪಂಗಳ ಕೆಲವು ಪ್ರದೇಶಗಳಿಗೆ ಟ್ಯಾಂಕರ್​ ಮೂಲಕ ಕುಡಿಯುವ ನೀರನ್ನು ಪೂರೈಕೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಮಳೆಗಾಲದ ಸಿದ್ಧತೆ
ಮಳೆಗಾಲದಲ್ಲಿ ರಸ್ತೆಯಲ್ಲಿ ನೀರು ನಿಲ್ಲದಂತೆ ಕ್ರಮ ವಹಿಸಲು ಸೂಚಿಸಲಾಗಿದೆ. ಚರಂಡಿ ಸ್ವಚ್ಛತೆ, ವಿದ್ಯುತ್​ ತಂತಿ ತಾಗಿರುವ ಹಾಗೂ ಅಪಾಯಕಾರಿ ಮರ ತೆರವು ಮಾಡಬೇಕು. ತೆರೆದ ಬಾವಿ ಮತ್ತು ಉಪಯೋಗ ಶೂನ್ಯ ಬೋರ್​ವೆಲ್ಗಳಿಗೆ ಬಯೋೆನ್ಸಿಂಗ್​ ಅಳವಡಿಸಬೇಕು ಎಂಬುದಾಗಿ ಗ್ರಾಪಂಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತ ರಾಯಪ್ಪ, ವಾರ್ತಾಧಿಕಾರಿ ಮಂಜುನಾಥ್​, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಐ.ಪಿ.ಗಡಾದ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಪ್ರಶಾಂತ್​ ಭಟ್​ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net