ನೀರಿನ ಬವಣೆ ನೀಗಿಸಲು ಅಧಿವೇಶನದಲ್ಲಿ ಚರ್ಚಿಸಿ ಕ್ರಮ

DECEMBER-2024-09-02
ಮದ್ದೂರು ತಾಲೂಕಿನ ಬೆಸಗರಹಳ್ಳಿ ತಮಿಳು ಕಾಲನಿಗೆ ಬಿಡುಗಡೆಯಾಗಿರುವ 50 ಲಕ್ಷ ರೂ. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಶಕ ಕೆ.ಎಂ.ಉದಯ ಭೂಮಿಪೂಜೆ ನೆರವೇರಿಸಿದರು. ರಾಧಿಕಾ, ಶಾಹಿನಾತಾಜ್, ಮಂಜು, ವೆಂಕಠೇಶ್, ರಮೇಶ್, ಗಿರಿಜಾ ಇತರರಿದ್ದರು.
Published on

ಮದ್ದೂರು: ತಾಲೂಕಿನಲ್ಲಿರುವ ಎಲ್ಲ ಕೆರೆ-ಕಟ್ಟೆಗಳಿಗೆ ಶಾಶ್ವತವಾಗಿ ನೀರು ತುಂಬಿಸುವ ಮೂಲಕ ರೈತರಿಗೆ ಅನುಕೂಲ ಕಲ್ಪಿಸುವ ಜತೆಗೆ ನೀರಿನ ಬವಣೆಯನ್ನು ನೀಗಿಸಲು ಅಧಿವೇಶನದಲ್ಲಿ ಚರ್ಚಿಸಿ ಅಗತ್ಯ ಅನುದಾನವನ್ನು ಬಿಡುಗಡೆಗೊಳಿಸುವ ಬಗ್ಗೆ ಪ್ರಸ್ತಾವನೆ ಸಲ್ಲಿಸುವುದಾಗಿ ಶಾಶಕ ಕೆ.ಎಂ.ಉದಯ್ ತಿಳಿಸಿದರು.

ಮದ್ದೂರು ತಾಲೂಕಿನ ಬೆಸಗರಹಳ್ಳಿ ಗ್ರಾಮದ ತಮಿಳು ಕಾಲನಿಗೆ ಬಿಡುಗಡೆಯಾಗಿರುವ 50 ಲಕ್ಷ ರೂ. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಶಿಂಷಾ ನದಿಯಲ್ಲಿ ನೀರು ಹರಿಯುತ್ತಿದ್ದರೂ ಕೆಲ ಗ್ರಾಮಗಳ ಕೆರೆ-ಕಟ್ಟೆಗಳು ತುಂಬದಿರುವ ಬಗ್ಗೆ ರೈತರು ಮನವಿ ಸಲ್ಲಿಸುತ್ತಿದ್ದು ಈ ಸಂಬಂಧ ಶಾಶ್ವತವಾಗಿ ಯೋಜನೆಯನ್ನು ಪೂರ್ಣಗೊಳಿಸಬೇಕೆಂಬ ನಿಟ್ಟಿನಲ್ಲಿ ಅಗತ್ಯವಿರುವೆಡೆ ನಾಲ್ಕು ಚೆಕ್ ಡ್ಯಾಂಗಳು, ನೂತನ ಏತನೀರಾವರಿ ಹಾಗೂ ಏತ ನೀರಾವರಿ ಪುನಶ್ಚೇತನಗಳನ್ನು ಕೈಗೊಂಡು ಈ ಭಾಗದ ಜನರಿಗೆ ಅನುಕೂಲ ಕಲ್ಪಿಸುವ ಜತಗೆ ಮುಂದಿನ ಬೇಸಿಗೆ ಹಂಗಾಮಿನಲ್ಲಿ ಜಾನುವಾರುಗಳಿಗೆ ಕುಡಿಯುವ ನೀರಿಗೆ ತೊಡಕುಂಟಾಗದಂತೆ ಯೋಜನೆ ರೂಪಿಸಲಾಗಿದೆ ಎಂದರು.

ಕೆರೆ-ಕಟ್ಟೆಗಳು ಭರ್ತಿಯಾದರೆ ಕೊಳವೆ ಬಾವಿ ಮತ್ತು ಅಂತರ್ಜಲ ವೃದ್ಧಿಯಾಗಿ ನೀರಿನ ಅಭಾವ ಕಡಿಮೆಯಾಗಲಿದೆ. ಈ ಸಂಬಂಧ ಅಧಿಕಾರಿಗಳೊಟ್ಟಿಗೆ ಚರ್ಚಿಸಿ ಅಗತ್ಯ ಮಾಹಿತಿಗಳನ್ನು ಒದಗಿಸಿದ್ದು ಅಧಿವೇಶನದಲ್ಲಿ ಚರ್ಚಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದೆಂದರು.

ಪೇಟೆ ಬೀದಿ ವಿಸ್ತರಣೆ: ಪೇಟೆ ಬೀದಿ ರಸ್ತೆ ವಿಸ್ತರಣೆ ಸಂಬಂಧ ಅಧಿಕಾರಿಗಳು ಸರ್ವೇ ಕಾರ್ಯ ಕೈಗೊಂಡು ಜಿಲ್ಲಾಧಿಕಾರಿಗೆ ಅಗತ್ಯ ಮಾಹಿತಿಯನ್ನು ಸಲ್ಲಿಸಿದ್ದು ನಾನು ಸಹ ಜಿಲ್ಲಾಧಿಕಾರಿ ಅವರೊಟ್ಟಿಗೆ ಚರ್ಚಿಸಿ ಡಿ.ಪಿ.ಆರ್ ತಯಾರಿಸಿದ್ದು ವಾಣಿಜ್ಯ ಸ್ಥಳವಾಗಿರುವುದರಿಂದ ನಿವೇಶನ ಕಳೆದುಕೊಂಡ ಮಾಲೀಕರಿಗೆ ಹೆಚ್ಚಿನ ಪರಿಹಾರ ವಿತರಿಸಲು ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದು ಮುಂದಿನ ಎರಡು ತಿಂಗಳೊಳಗಾಗಿ ಕಾಮಗಾರಿ ಆರಂಭಿಸುವ ಭರವಸೆ ನೀಡಿದರು.

ಭತ್ತ ಖರೀದಿ ಕೇಂದ್ರ ಪ್ರಾರಂಭ: ತಾಲೂಕಿನಾದ್ಯಂತ ಭತ್ತ ಕಟಾವು ಕಾರ್ಯ ಜರುಗುತ್ತಿದ್ದು ರೈತರಿಗೆ ದಲ್ಲಾಳಿಗಳ ಹಾಗೂ ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸುವ ಉದ್ದೇಶದಿಂದ ಜಿಲ್ಲಾ ಉಸ್ತುವಾರಿ ಸಚಿವರೊಟ್ಟಿಗೆ ಚರ್ಚಿಸಿ ಅಗತ್ಯವಿರುವೆಡೆ ಭತ್ತ ಖರೀದಿ ಕೇಂದ್ರ ತೆರೆಯಲು ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಹೇಳಿದರು.

ರೈತರು ಖರೀದಿ ಕೇಂದ್ರದಲ್ಲೇ ಭತ್ತ ಮಾರಾಟ ಮಾಡುವುದರ ಮೂಲಕ ಸರಕಾರದಿಂದ ಸಿಗುವ ಪ್ರೋತ್ಸಾಹ ಧನವನ್ನು ಪಡೆಯುವಂತೆ ದಲ್ಲಾಳಿಗಳ ಮೂಲಕ ಯಾವುದೇ ವ್ಯಾಪಾರ, ವಹಿವಾಟು ಮಾಡದಂತೆ ತಿಳಿಸಿದರು.

ಬೆಸಗರಹಳ್ಳಿ ಕಾಲನಿಯ ಮೂಲ ಸೌಲಭ್ಯಗಳಿಗೆ ಹೆಚ್ಚಿನ ಒತ್ತು ನೀಡಿದ್ದು ಮುಂದಿನ ಒಂದು ವಾರದೊಳಗಾಗಿ 40 ಲಕ್ಷ ರೂ. ಬಿಡುಗಡೆಯಾಗಲಿದ್ದು ನನೆಗುದಿಗೆ ಬಿದ್ದಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದೆಂದರು.

ಬೆಸಗರಹಳ್ಳಿ ಗ್ರಾ.ಪಂ. ಅಧ್ಯಕ್ಷೆ ರಾಧಿಕಾ, ಉಪಾಧ್ಯಕ್ಷೆ ಶಾಹಿನಾತಾಜ್, ಸದಸ್ಯರಾದ ಮಂಜು, ವೆಂಕಟೇಶ್, ರಮೇಶ್, ಗಿರಿಜಾ, ಗೀತಾ, ಮುಖಂಡರಾದ ಧನಂಜಯ, ಸುಧಾಕರ್, ಪಿಲಿಪ್ಸ್, ವೆಂಕಟೇಶ್, ಗೋಪಿ, ಮಹೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net