

ಮಂಡ್ಯ: ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರಿಗೆ ಸಿಗುತ್ತಿರುವ ಕಡಿಮೆ ಸೌಲಭ್ಯ ಕುರಿತು ಶಾಸಕ ರವಿಕುಮಾರ್ ಗಣಿಗ ಸದನದಲ್ಲಿ ದನಿಯಾಗಿದ್ದಾರೆ. ಮಾತ್ರವಲ್ಲದೆ ವೇತನ, ಸಿಬ್ಬಂದಿ ಕೊರತೆ ಬಗ್ಗೆ ಚರ್ಚೆ ನಡೆಸಿದ್ದಾರೆ. ಅಂತೆಯೇ ಶಾಸಕರ ಪ್ರಶ್ನೆಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಉತ್ತರ ನೀಡಿದ್ದಾರೆ.
ಸರ್ಕಾರಿ ನೌಕರರಂತೆ ನಿಗಮದ ನೌಕರರಿಗೂ ಸರಿಸಮಾನ ವೇತನ(7ನೇ ವೇತನ ಆಯೋಗ ಮಾದರಿ) ನೀಡುವ ಪ್ರಸ್ತಾವನೆ ಸರ್ಕಾರದ ಹಂತದಲ್ಲಿ ಇದೆಯೇ ಎಂಬ ಪ್ರಶ್ನೆಗೆ ಉತ್ತರ ನೀಡಿರುವ ಸಚಿವ, ಅಂತಹ ಯಾವುದೇ ಪ್ರಸ್ತಾವನೆ ಸರ್ಕಾರದ ಹಂತದಲ್ಲಿ ಇರುವುದಿಲ್ಲ. ರಸ್ತೆ ಸಾರಿಗೆ ನಿಗಮ ಕಾಯ್ದೆ-1950ರಡಿ ಅಸ್ತಿತ್ವಕ್ಕೆ ಬಂದಿರುವ ಸರ್ಕಾರಿ ಸ್ವಾಮ್ಯದ ಸ್ವಾಯತ್ತ ಸಂಸ್ಥೆಯಾಗಿದೆ. ನಿಗಮಗಳ ನಿರ್ವಹಣೆ ಹಾಗೂ ಸಿಬ್ಬಂದಿ ವೇತನ, ಎಲ್ಲ ಆರ್ಥಿಕ ಸೌಲಭ್ಯವನ್ನು ನಿಗಮ ತನ್ನ ಆಂತರಿಕ ಮೂಲಗಳಿಂದಲೇ ಭರಿಸಬೇಕು ಎಂದಿದ್ದಾರೆ.
ಮುಖ್ಯವಾಗಿ ಸರ್ಕಾರಿ ಹಾಗೂ ಸಾರಿಗೆ ನೌಕರರ ನಡುವೆ ವೇತನ ತಾರತಮ್ಯ ಸರಿಪಡಿಸುವ ಸಂಬಂಧ ಕುರಿತ ಪ್ರಶ್ನೆಗೆ ವಿವರಣೆ ನೀಡಿರುವ ಸಚಿವ, ನಿಗಮದ ನೌಕರರ ವೇತನವನ್ನು ಕೈಗಾರಿಕಾ ಒಪ್ಪಂದದನ್ವಯ ಪ್ರತಿ ನಾಲ್ಕು ವರ್ಷಕ್ಕೊಮ್ಮೆ ಪರಿಷ್ಕರಿಸುವ ಪದ್ಧತಿ ಜಾರಿಯಲ್ಲಿದೆ. ನಿಗಮದ ಆರ್ಥಿಕ ಸಾಮರ್ಥ್ಯವನ್ನು ಗಣನೆಗೆ ತೆಗೆದುಕೊಂಡು ಸರ್ಕಾರದ ಅನುಮೋದನೆ ಪಡೆದು ವೇತನ ಪರಿಷ್ಕರಣೆ ಮಾಡಲಾಗುತ್ತದೆ. ಮಾತ್ರವಲ್ಲದೆ ರಾಜ್ಯಸರ್ಕಾರಿ ನೌಕರರ ಮಾದರಿಯಲ್ಲಿಯೇ ತುಟ್ಟಿಭತ್ಯೆ, ಮನೆ ಬಾಡಿಗೆ ಭತ್ಯೆ, ನಗರ ಪರಿಹಾರ ಭತ್ಯೆ, ರಜಾ ಸೌಲಭ್ಯ, ವೈದ್ಯಕೀಯ ಮರುಪಾವತಿ ಸೌಲಭ್ಯ ಇತ್ಯಾದಿ ಎಲ್ಲ ಸೌಲಭ್ಯವನ್ನು ಈಗಾಗಲೇ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ 17,199 ಹುದ್ದೆ ಖಾಲಿ: ಸಾರಿಗೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆ ಹಾಗೂ ಇದರಿಂದಾಗುತ್ತಿರುವ ಸಮಸ್ಯೆ ಕುರಿತು ರವಿಕುಮಾರ್ ಗಣಿಗ ಗಮನಸೆಳೆದಿದ್ದಾರೆ. ಇದಕ್ಕೆ ವಿವರಣೆ ನೀಡಿರುವ ಸಚಿವ, 2025 ಜನವರಿ ಅಂತ್ಯಕ್ಕೆ ರಾಜ್ಯದ ನಾಲ್ಕು ಸಾರಿಗೆ ಸಂಸ್ಥೆಯಲ್ಲಿ 17,199 ಹುದ್ದೆ ಖಾಲಿ ಇದೆ. ರಾಜ್ಯ ರಸ್ತೆ ಸಾರಿಗೆ ನಿಗಮದ 2023-24ರ ಪೂರ್ವದ ಏಳು ವರ್ಷದಿಂದ ಹಾಗೂ ಉಳಿದ ಸಾರಿಗೆ ಸಂಸ್ಥೆಯಲ್ಲಿ 2023-24ರ ಪೂರ್ವದ ನಾಲ್ಕು ವರ್ಷದಿಂದ ಸಿಬ್ಬಂದಿ ನೇಮಕಾತಿ ಆಗಿರಲಿಲ್ಲ. ಆದರೆ ಪ್ರಸ್ತುತ ನಾಲ್ಕು ಸಾರಿಗೆ ಸಂಸ್ಥೆಯಲ್ಲಿ ಕಳೆದ ಎರಡು ವರ್ಷದಲ್ಲಿ ಸಾಕಷ್ಟು ನೌಕರರ ನೇಮಕಾತಿ ಮಾಡಲಾಗಿದೆ ಎಂದಿದ್ದಾರೆ.