ಅರಣ್ಯ ಇಲಾಖೆಯಿಂದ ತಾರತಮ್ಯ ನೀತಿ

30ald 1
Published on

ಆಲ್ದೂರು: ಬಡವರು, ನಿವೇಶನ ರಹಿತರು ಗುಡಿಸಲು ಹಾಕಿಕೊಂಡರೆ ಅರಣ್ಯ ಇಲಾಖೆ ಸಿಬ್ಬಂದಿ ಕಿತ್ತು ಹಾಕುತ್ತಾರೆ, ದೊಡ್ಡವರು ಕಾಫಿತೋಟ ಮಾಡಿಕೊಂಡರೆ ಅರಣ್ಯ ಇಲಾಖೆ ಮೌನ ವಹಿಸುತ್ತಾರೆ ಎಂದು ಗ್ರಾಪಂ ಸದಸ್ಯೆ ಲಕ್ಷ್ಮಿಆಲ್ದೂರು ಗ್ರಾಪಂನಲ್ಲಿ ನಡೆದ ಗ್ರಾಮ ಸಭೆಯಲ್ಲಿ ಆರೋಪಿಸಿದರು.
ಗ್ರಾಪಂನಲ್ಲಿ ಸಭೆ ಆರಂಭವಾಗುತ್ತಿದ್ದಂತೆ ಮಾತನಾಡಿದ ಅವರು, ತುಡುಕೂರು ಗ್ರಾಮದ ಸರ್ವೇ ನಂ.98ರಲ್ಲಿ ಒತ್ತುವರಿ ಮಾಡಿ ಕಾಫಿತೋಟ ಮಾಡಿಕೊಳ್ಳಲಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ತಕ್ಷಣ ತೆರವು ಮಾಡಿಸ ಬೇಕು ಎಂದು ಒತ್ತಾಯಿಸಿದರು.
ಸಂತೆ ಮೈದಾನದ ವಾಸಿ ಕೃಪಾಕ್ಷ ಮಾತನಾಡಿ, 25ವರ್ಷಗಳಿಂದ ಸ್ವಂತ ಸೂರಿಗಾಗಿ ಪರದಾಡುತ್ತಿದ್ದೇವೆ, ಚುನಾವಣೆ ವೇಳೆ ಆಶ್ರಯ ನಿವೇಶನ ಹಾಗೂ ನಮ್ಮ ಭೂಮಿ ನಮ್ಮ ತೋಟ ಯೋಜನೆಯಡಿ ಹಕ್ಕುಪತ್ರ ನೀಡಲಾಗಿದೆ. ಆದರೆ ನಿವೇಶನ ಗುರುತು ಮಾಡಿಕೊಟ್ಟಿಲ್ಲ. ಒಂದು ನಿವೇಶನಕ್ಕೆ ಐದು ಸಾವಿರ ಹಣ ಪಡೆಯಲಾಗಿದೆ ಎಂದು ದೂರಿದರು.
ಸರ್ವೇ ನಂ.191,193,194 ಚಿಕ್ಕಮಾಗರವಳ್ಳಿಯಲ್ಲಿ 15ಎಕರೆ ಖಾಲಿ ಜಾಗವಿದ್ದು , ಇದನ್ನು ಡಿಮ್ಡ್ ಾರೆಸ್ಟಗೆ ಸೇರಿಸಲಾಗಿದೆ. ನಾವು ಗುಡುಸಲು ಹಾಕಲು ಹೋದರೆ ಅರಣ್ಯ ಇಲಾಖೆ ಅಧಿಕಾರಿಗಳು ತೊಂದರೆ ನೀಡುತ್ತಾರೆ ಎಂದು ಗ್ರಾಮಸ್ಥ ಜೀವನ್ ಅಸಮಧಾನ ವ್ಯಕ್ತಪಡಿಸಿದರು.
ಗ್ರಾಪಂ ಸದಸ್ಯ ಭರತ್ ಮಾತನಾಡಿ, ಕೃಷಿ ಇಲಾಖೆಯಲ್ಲಿ 2.5 ಇಂಚಿನ ಪೈಪ್ ವಿತರಿಸಲಾಗದೆ ಚಿಕ್ಕಮಗಳೂರಿಗೆ ಕಳುಹಿಸಲಾಗುತ್ತಿದೆ. ನಮ್ಮ ಊರಿನಲ್ಲಿ ಕೃಷಿ ಇಲಾಖೆ ಇದ್ದರೂ ರೈತರಿಗೆ ಸೌಲಭ ಸಿಗುತ್ತಿಲ್ಲ ಎಂದು ಕೃಷಿ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.
ಗ್ರಾಪಂ ಅಧ್ಯಕ್ಷೆ ಜಯಶೀಲಾ ಮಾತನಾಡಿ, ಮಹಿಳಾ ಸಮಾಜದ ಕಟ್ಟಡವನ್ನು ಕಂದಾಯ ಇಲಾಖೆ ನಾಡ ಕಚೇರಿಗೆ ನೀಡಿರುವುದರಿಂದ ಮಹಿಳೆಯರಿಗೆ ಚಟುವಟಿಕೆ ನಡೆಸಲು ಕಟ್ಟಡವಿಲ್ಲದಂತಾಗಿದೆ. ತಕ್ಷಣ ಆ ಕಟ್ಟಡ ಬಿಟ್ಟುಕೊಡ ಬೇಕು ಎಂದು ಕಂದಾಯ ಅಧಿಕಾರಿಗಳಿಗೆ ಸೂಚಿಸಿದರು. ಗ್ರಾಪಂನಲ್ಲಿ ಘನ ತ್ಯಜ್ಯ ವಿಲೇವರಿ ಘಟಕ ನಿರ್ಮಾಣಕ್ಕೆ ಕಂದಾಯ ಹಾಗು ಅರಣ್ಯ ಇಲಾಖೆ ಸೂಕ್ತ ಜಾಗ ಗುರುತು ಮಾಡಿಕೊಡಬೇಕು ಎಂದು ಸದಸ್ಯ ಲಕ್ಷ್ಮಣ್ ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net