

ಬೆಟ್ಟದಪುರ: ಜಾತಿ ಪದ್ಧತಿ, ಅಸ್ಪಶ್ಯತೆ ಜೀವಂತವಾಗಿರುವತನಕ ದೇಶದ ಸರ್ವತೋಮುಖ ಬೆಳವಣಿಗೆ ಅಸಾಧ್ಯ. ನಮ್ಮಲ್ಲಿ ಹರಿಯುವ ರಕ್ತ, ನಾವು ಕುಡಿಯುವ ನೀರು, ಉಸಿರಾಡುವ ಗಾಳಿ, ಜೀವಿಸುವ ನೆಲ ಎಲ್ಲವೂ ಒಂದೇ ಆಗಿದ್ದಾಗ ಮನುಷ್ಯರನ್ನು ಮಾತ್ರ ಜಾಾತಿಯ ಹೆಸರಿನಲ್ಲಿ ಪ್ರತ್ಯೇಕಿಸುವುದು ಸರಿಯಲ್ಲ ಎಂದು ಜ್ಞಾನ ಜ್ಯೋತಿ ಸಂಸ್ಥೆಯ ಮುಖ್ಯಸ್ಥೆ ಹೇಮಾವತಿ ಬೇಸರ ವ್ಯಕ್ತಪಡಿಸಿದರು.
ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಸಮೀಪದ ಹಾರನಹಳ್ಳಿ ಗ್ರಾಮದ ಗ್ರಾಮ ಪಂಚಾಯಿತಿ ಆವರಣದಲ್ಲಿ ಶುಕ್ರವಾರ ತಾಲೂಕು ಆಡಳಿತ, ಸಮಾಜ ಕಲ್ಯಾಣ ಇಲಾಖೆ ಹಾಗೂ ಜ್ಞಾನಜ್ಯೋತಿ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಿದ್ದ ಅಸ್ಪಶ್ಯತಾ ನಿವಾರಣೆ ಕುರಿತು ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ದ್ವೇಷ, ಅಸೂಯೆ, ಕಟ್ಟುಪಾಡು ಕಡಿಮೆಯಾದರೆ ಮಾತ್ರ ಅಸ್ಪಶ್ಯತೆ ನಿವಾರಣೆ ಸಾಧ್ಯ. ಮಹಿಳೆಯರು ಮತ್ತು ಮಕ್ಕಳ ಮೇಲೆ ನಡೆಯುವ ದೌರ್ಜನ್ಯ ಮೊದಲು ನಿಲ್ಲಬೇಕು ಎಂದರು.
ವಕೀಲೆ ಚಂದ್ರಿಕಾ ಮಾತನಾಡಿ ಡಾ.ಬಿ.ಆರ್.ಅಂಬೇಡ್ಕರ್, ಕನಕದಾಸರು, ಗೌತಮಬುದ್ಧ, ಬಸವಣ್ಣ ಸೇರಿ ಅನೇಕ ಮಹನೀಯರು ಹೋರಾಟ ಮಾಡಿದ್ದರೂ ಇಂದಿಗೂ ದೌರ್ಜನ್ಯ ಕಡಿಮೆಯಾಗಿಲ್ಲ. ಇಂತಹ ಮಹನೀಯರು ಮತ್ತೆ ಹುಟ್ಟಿ ಬಂದರೂ ದೌರ್ಜನ್ಯ ಕಡಿಮೆಯಾಗುತ್ತದೆ ಎಂಬ ನಂಬಿಕೆ ಯಾರಲ್ಲೂ ಇಲ್ಲ. ಅಲ್ಲದೆ ಇಂದಿನ ತಂತ್ರಜ್ಞಾನ ಯುಗದಲ್ಲಿ ಸಾಮಾಜಿಕ ಜಾಲತಾಣ, ಮಾಧ್ಯಮಗಳಿಂದ ಜಾತಿ ವ್ಯವಸ್ಥೆ ಮತ್ತು ಅಸ್ಪಶ್ಯತೆ ಸಾಕಷ್ಟು ಬದಲಾವಣೆ ಕಾಣುತ್ತಿದೆ ಎಂದರು.
ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಚಂದ್ರಶೇಖರ ಮಾತನಾಡಿ, ಅಸ್ಪಶ್ಯತೆ ಸಂಪೂರ್ಣವಾಗಿ ನಿವಾರಣೆಯಾಗಲು ಸಾಮಾಜಿಕ ಬದಲಾವಣೆ ಆಗಬೇಕಿದೆ. ಈ ನಿಟ್ಟಿನಲ್ಲಿ ಮೊದಲು ಎಲ್ಲರೂ ಶಿಕ್ಷಣವಂತರಾಗಬೇಕು. ಸಮಾಜದ ಎಲ್ಲ ವರ್ಗ ಶಿಕ್ಷಣದಿಂದ ಅರಿವು ತಂದುಕೊಂಡರೆ ಸಮಸಮಾಜ ಸ್ಥಾಪಿಸುವ ಜತೆಗೆ ಅಸ್ಪಶ್ಯತೆ ನಿವಾರಿಸಬಹುದು. ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರು ದಲಿತರಿಗೆ ಸಮಾನತೆ ಹಕ್ಕು ನೀಡುವ ಮೂಲಕ ಭದ್ರಬುನಾದಿ ಹಾಕಿದ್ದು, ಅಸ್ಪಶ್ಯತೆ ಶಿಕ್ಷಾರ್ಹ ಅಪರಾಧ ಎಂದರು.
ಕಾರ್ಯಕ್ರಮದಲ್ಲಿ ಸಂವಿಧಾನ ಪೀಠಿಕೆ ಓದಿ, ಪ್ರತಿಜ್ಞಾವಿಧಿ ಬೋಧಿಸಲಾಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷ ಎ.ಆರ್.ರಾಜೇಗೌಡ , ಕೆಪಿಎಸ್ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಕೆ.ಸಿ.ಸತೀಶ್, ಉಪತಹಸೀಲ್ದಾರ್ ಮಹೇಶ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಿ.ಪಿ.ಧನಂಜಯ್, ಸೇರಿದಂತೆ ಗ್ರಾಮ ಪಂಚಾಯಿತಿ ಸದಸ್ಯರು, ಹೋಬಳಿ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಮತ್ತು ಗ್ರಾಮಸ್ಥರು ಇದ್ದರು.