

ದೇವನಹಳ್ಳಿ : ಯಾವುದೋ ಒಂದು ಸಮುದಾಯದ ಮತ ಓಲೈಕೆಗಾಗಿ ಮೀಸಲಾತಿ ಜಾರಿಯಲ್ಲಿ ಸಚಿವರು ಮತ್ತು ಉನ್ನತ ಅಧಿಕಾರಿಗಳು ತಾರತಮ್ಯ ಮಾಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಮಾದಿಗ ದಂಡೋರ ಸಂಟನೆ ಸಂಸ್ಥಾಪಕ ರಾಜ್ಯಾಧ್ಯಕ್ಷ ಎಂ.ಶಂಕರಪ್ಪ ಪ್ರಶ್ನಿಸಿದರು.
ಮಾದಿಗ ಮೀಸಲಾತಿ ಹೋರಾಟ ಫಲವಾಗಿ ಸಚಿವ ಸಂಪುಟದಲ್ಲಿ ನ್ಯಾ. ನಾಗಮೋಹನ್ ದಾಸ್ ವರದಿ ಪರಿಷ್ಕರಿಸಿ ಅನುಮೋದಿಸಿರುವ ಕುರಿತು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ಮಾದಿಗ ದಂಡೋರ ಸಂಟನೆಯಿಂದ ಆಯೋಜಿಸಿದ್ದ ಪೂರ್ವಸಮಾಲೋಚನಾ ಅಭಿಪ್ರಾಯ ಸಂಗ್ರಹಣಾ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಹೊಲೆಯ ಸಮುದಾಯದ ಉನ್ನತ ಅಧಿಕಾರಿಗಳು ಮತ್ತು ಸಚಿವರು ನಮಗೆ ಸೂಕ್ತ ನ್ಯಾಯ ಕೊಡುವುದರಲ್ಲಿ ನಂಬಿಕೆ ಇಲ್ಲ. ಒಂದು ಕೋಟಿ ಜನಸಂಖ್ಯೆ ಇರುವ ಜನಾಂಗದವರ ನೋವು ಕೇಳದ ಇಂತಹ ನಾಯಕರು ಇದ್ದೂ ವ್ಯರ್ಥ. ಇಷ್ಟು ದಿನಗಳು ನಮ್ಮ ಹಕ್ಕಿಗಾಗಿ ಶಾಂತಿಯುತ ಹೋರಾಟ ಮಾಡಿದ್ದೇವೆ. ಆದರೆ ಸಮಂಜಸವಾಗಿ ಒಳಮೀಸಲಾತಿ ಜಾರಿ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ಉಗ್ರ ರೂಪ ತಾಳಲಿದೆ ಎಂದು ಎಚ್ಚರಿಕೆ ನೀಡಿದರು.
ಗ್ರಾಮಾಂತರ ಜಿಲ್ಲೆಯ ದಂಡೋರದ ಅಧ್ಯಕ್ಷ ಜಿ.ಮಾರಪ್ಪ ಮಾತನಾಡಿ, ಮಾದಿಗ ಮತ್ತು ಅದರ ಸಂಬಂಧಿತ ಸಮುದಾಯಗಳಿಗೆ ಜನಸಂಖ್ಯೆ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮತ್ತು ರಾಜಕೀಯ ರಂಗಗಳಲ್ಲಿ ಹಿಂದುಳಿವಿಕೆ ಪರಿಗಣಿಸಬೇಕು. ಐವತ್ತು ವರ್ಷಗಳಿಂದ ಮೀಸಲಾತಿ ಹಂಚಿಕೆಯಲ್ಲಾಗಿರುವ ತಾರತಮ್ಯ ಸರಿದೂಗಿಸಲು ಶೇ.6.5 ಮೀಸಲಾತಿ ನಿಗದಿ ಪಡಿಸಬೇಕೆಂದು ಒತ್ತಾಯಿಸಿದರು. ರಾಜ್ಯ ಖಜಾಂಚಿ ಮುನಿರಾಜು, ಬೆಂಗಳೂರು ನಗರ ಜಿಲ್ಲಾಧ್ಯಕ್ಷ ಕೆ.ರಾಜಶೇಖರ್, ತಾಲೂಕು ಅಧ್ಯಕ್ಷ ಅಣ್ಣೇಶ್ವರ ಎಂ.ವೆಂಕಟೇಶ್, ಉಪಾಧ್ಯಕ್ಷ ಭುವನಹಳ್ಳಿ ಎಂ.ಆನಂದ್, ತಾಲೂಕು ಪ್ರಚಾರ ಸಮಿತಿ ಅಧ್ಯಕ್ಷ ದೇವರಾಜ್, ಜಂಟಿ ಕಾರ್ಯದರ್ಶಿ ಸಾದಹಳ್ಳಿ ಮಂಜುನಾಥ್, ಬೆಟ್ಟೇನಹಳ್ಳಿ ವೆಂಕಟೇಶ್, ಚಂದ್ರು ಕೊನಗಿನಬೆಲೆ, ಆದಿಜಾಂಬವ ಟ್ರಸ್ಟ್ ಗೌರವಾಧ್ಯಕ್ಷ ತಿರುಮಳೆೇಶ್, ಜಿಲ್ಲಾ ಸಮಿತಿ ಸದಸ್ಯ ಪೂಜಪ್ಪ, ಅಂಬರೀಶ್, ತಾಲೂಕು ಸಮಿತಿ ಸದಸ್ಯ ರವಿಕುಮಾರ್ ಸೇರಿ ಸಂಟನಾ ಸದಸ್ಯರು ಇದ್ದರು.