ಮಳೆ ಹಾನಿ ಪರಿಹಾರದಲ್ಲಿ ತಾರತಮ್ಯ ಸಲ್ಲ : ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ

1 photo 8-8-22
ಜಿಲ್ಲೆಯಲ್ಲಿ ಸತತ ಒಂದು ವಾರದಿಂದ ಮಳೆಯಾಗುತ್ತಿದ್ದು, ಮಳೆಯಿಂದಾದ ಹಾನಿ ಕುರಿತು ಸಮೀಕ್ಷೆ ನಡೆಸಿ ತುರ್ತಾಗಿ ಸರ್ಕಾರ ಪರಿಹಾರ ನೀಡಬೇಕೆಂದು ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು ಸೋಮವಾರ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
Published on

ವಿಜಯಪುರ: ಜಿಲ್ಲೆಯಲ್ಲಿ ಸತತ ಒಂದು ವಾರದಿಂದ ಮಳೆಯಾಗುತ್ತಿದ್ದು, ಮಳೆಯಿಂದಾದ ಹಾನಿಕುರಿತು ಸಮೀಕ್ಷೆ ನಡೆಸಿ ತುರ್ತಾಗಿ ಸರ್ಕಾರ ಪರಿಹಾರ ನೀಡಬೇಕೆಂದು ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು ಸೋಮವಾರ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಕೆಪಿಸಿಸಿ ಸಂಯೋಜಕ ಎಸ್.ಎಂ.ದುಂಡಸಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 21 ಜಿಲ್ಲೆಗೆ 200 ಕೋಟಿ ರೂ. ಹಣವನ್ನು ಬಿಡುಗಡೆ ಮಾಡಿದ್ದು ವಿಜಯಪುರ ಜಿಲ್ಲೆಗೆ ಹಣ ಬಿಡುಗಡೆ ಮಾಡಿಲ್ಲ. ಈ ರೀತಿ ತಾರತಮ್ಯ ಮಾಡಿ ವಿಜಯಪುರ ಜಿಲ್ಲೆಯ ಜನರನ್ನು ಮತ್ತು ರೈತರನ್ನು ನಿರ್ಲಕ್ಷಿಸಿದ್ದಾರೆ. ಇದು ಸರಿಯಾದ ನಿರ್ಧಾರವಲ್ಲ. ನಿರ್ಲಕ್ಷೃ ತೋರುವುದು ಸಮಂಜಸ ಅಲ್ಲ. ಅದಕ್ಕಾಗಿ ಕೂಡಲೇ ಮುಖ್ಯಮಂತ್ರಿಗಳು ಎಚ್ಚೆತ್ತು ಕೂಡಲೇ ಜಿಲ್ಲೆಯ ಜನರ ಸಂಕಷ್ಟವನ್ನು ಅರಿತು ಅವರ ಸಹಾಯಕ್ಕೆ ಬರಬೇಕೆಂದು ಒತ್ತಾಯಿಸಿದರು.

ಜಿಲ್ಲಾದ್ಯಂತ ಸುರಿಯುತ್ತಿರುವ ರಣಮಳೆಗೆ ವಿಜಯಪುರ ಜಿಲ್ಲೆಯ ಪ್ರಮುಖ ಡೋೀಣಿ ನದಿಗೆ ಪ್ರವಾಹ ಬಂದು ಡೋಣಿಯ ದಂಡೆಯ ಮೇಲಿರುವ ಎಲ್ಲ ಗ್ರಾಮಗಳಲ್ಲಿ ವಾಸಿಸುವ ಜನರು ಡೋಣಿ ಪ್ರವಾಹಕ್ಕೆ ತತ್ತರಿಸಿ ಹೋಗಿದ್ದಾರೆ. ಮನೆಗಳಲ್ಲಿ ನೀರು ಹೊಕ್ಕು ಜನ, ಜಾನುವಾರು, ಕುರಿ, ಕೋಳಿಗಳು ನೀರಿನಿಂದ ಒದ್ದಾಡುತ್ತಿವೆ. ನದಿಯ ದಂಡೆಯ ಮೇಲಿರುವ ಜಮೀನುಗಳು ನೀರಿನ ರಭಸಕ್ಕೆ ಕೊಚ್ಚಿ ಹೋಗಿವೆ. ನೂರಾರು ಜಮೀನುಗಳ ಒಡ್ಡುಗಳು ಸಂಪೂರ್ಣ ಕಿತ್ತುಹೋಗಿವೆ ಎಂದು ತಿಳಿಸಿದರು.

ಸಾಲ ಮಾಡಿ ರೈತರು ಬೀಜ ಗೊಬ್ಬರ ಹಾಕಿ ಬಿತ್ತಿದ ಸಾವಿರಾರು ಎಕರೆ ಜಮೀನಿನಲ್ಲಿ ಬೆಳೆದ ತೊಗರಿ, ಹತ್ತಿ, ಸೂರ್ಯಕಾಂತಿ, ಮೆಕ್ಕೆಜೋಳ, ಸಜ್ಜೆ, ಈರುಳ್ಳಿ ಮುಂತಾದ ಬೆಳೆಗಳು ಪ್ರವಾಹದ ಹೊಡೆತಕ್ಕೆ ಸಂಪೂರ್ಣ ಹಾಳಾಗಿವೆ. ಸತತ 2-3 ವರ್ಷಗಳಿಂದ ಪೆಟ್ಟು ತಿಂದ ರೈತರು ಸಾಲಬಾಧೆಯಿಂದ ಬಳಲುತ್ತಿದ್ದರೆ ಪ್ರವಾಹಕ್ಕೆ ತುತ್ತಾದ ಬೆಳೆಗಳನ್ನು ಕಳೆದುಕೊಂಡು ರೈತರು ಕಂಗಾಲಾಗಿ ಸರ್ಕಾರದ ಸಹಾಯವನ್ನು ಎದುರು ನೋಡುತ್ತಿದ್ದಾರೆ ಎಂದರು.

ಡೋಣಿ ದಂಡೆಯ ಮೇಲಿರುವ ಗ್ರಾಮಗಳಾದ ಸಾರವಾಡ, ಡೋಣೂರ, ಮಾಕಬ್ಬನಳ್ಳಿ, ಸಾತಿಹಾಳ, ಬೈರೋಡಗಿ, ದೇವೂರ, ಯಾಳವಾರ, ಕಡಕೋಳ, ಕೊಂಡಗೂಳಿ, ಹಂಚಳಿ ಅಂಬಳನೂರ, ತುಂಬಗಿ, ಪತ್ತೇಪೂರ, ಬಾಡಿಹಾಳ, ಕಲಿದೇವನಹಳ್ಳಿ ಗ್ರಾಮಗಳಲ್ಲಿ ಹಾನಿ ಆಗಿದೆ. ರೈತರ ಪ್ರತಿ ಎಕರೆಗೆ ಕನಿಷ್ಠ 20 ಸಾವಿರ ರೂ. ಪರಿಹಾರ ಕೊಡಬೇಕು ಆಗ್ರಹಿಸಿದರು.

ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ವಸಂತ ಹೊನಮೊಡೆ, ಕೆಪಿಸಿಸಿ ಕಾರ್ಯದರ್ಶಿ ಅಶೋಕ ಪಾಟೀಲ, ಜಿಲ್ಲಾ ಕಿಸಾನ್ ಮೋರ್ಚಾದ ಉಪಾಧ್ಯಕ್ಷ ಬಿ.ಎನ್.ಮೊಕಾಶಿ, ಎಂ.ಆರ್.ಬಿರಾದಾರ, ಎಸ್.ಆರ್.ನಾಯಕ, ಎಂ.ಭೋಸಗಿ, ಕುಬ್ಬು ಜಾಧವ, ಸಂಗನಗೌಡ ತೆಗ್ಗಿನಮನಿ, ಎಂ.ಎಲ್.ಜಾಧವ, ಸುನೀಲ ದೈಗೊಂಡ, ಇಮಾಮಸಾಬ ಶೇಖ, ಜಿ.ಎ.ನೀಲಂಗಿ, ಮುಷರಿ ದುಂಡಸಿ, ಸಂತೋಷ ಹತ್ತರಕಿ ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net