ಪ್ರತ್ಯೇಕವಾಗಿಸುವ ಶಿಕ್ಷಣ- ವಿಶ್ರಾಂತ ಕುಲಪತಿ ಡಾ.ಬಿ.ಎಂ.ವಿವೇಕ ರೈ ಆತಂಕ

Vivek_Rai_1
Published on

ಮಂಗಳೂರು: ಸಾಹಿತ್ಯ ಎಂದರೆ ಅದು ಸಂಸ್ಕೃತಿಯ ವಿಮರ್ಶೆಯಾಗಿದೆ. ಇಂದು ಸಾಹಿತ್ಯದ ಜಾಗದಲ್ಲಿ ಬೇರೆ ಬೇರೆ ವಿಚಾರಗಳು ಆವರಿಸಿಕೊಳ್ಳುತ್ತಿದೆ. ನಮಗೆ ಸಿಗುತ್ತಿರುವ ಶಿಕ್ಷಣ ನಮ್ಮನ್ನು ಪ್ರತ್ಯೇಕವಾಗಿಸುತ್ತಿದೆ ಎಂದು ವಿಶ್ರಾಂತ ಕುಲಪತಿ ಡಾ.ಬಿ.ಎಂ.ವಿವೇಕ ರೈ ಅವರು ತಣಕ ವ್ಯಕ್ತಪಡಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಮಹಾವಿದ್ಯಾಲಯ ಮಂಗಳೂರು, ಆಕೃತಿ ಆಶಯ ಪಬ್ಲಿಕೇಶನ್ಸ್, ಕಾಸರಗೋಡು ಕನ್ನಡ ಲೇಖಕರ ಸಂಘ, ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕ ಕಾಸರಗೋಡು ವತಿಯಿಂದ ನಗರದ ಎಸ್‌ಡಿಎಂ ಕಾನೂನು ಕಾಲೇಜಿನಲ್ಲಿ ಭಾನುವಾರ ಜರುಗಿದ ಸಮಾರಂಭದಲ್ಲಿ ಟಿ.ಎ. ಎನ್.ಖಂಡಿಗೆ ಅವರ ‘ಬರಿಗಾಲ ನಡಿಗೆ’ ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಸಾಹಿತ್ಯ ಅಭಿರುಚಿ ಯುವ ಮನಸ್ಸುಗಳಲ್ಲಿ ಕಡಿಮೆಯಾಗುತ್ತಿರುವುದು ಬಹಳ ಅಪಾಯಕಾರಿ ಪರಿಸ್ಥಿತಿಯಾಗಿದೆ. ಯಾವುದೇ ಕೃತಿಯನ್ನು ಒಂದು ಬಾರಿ ಓದಿದರೆ ಅರ್ಥವಾಗುವುದಿಲ್ಲ, ನಾವು ಅರ್ಥ ಮಾಡಿಕೊಳ್ಳುವವರೆಗೆ ಓದಬೇಕು. ಆಗ ಆ ಕೃತಿಯ ಬಗ್ಗೆ ನಾವು ಮತ್ತೊಬ್ಬರಿಗೆ ತಿಳಿಸಲು ಸಾಧ್ಯವಾಗುತ್ತದೆ ಎಂದವರು ಸಲಹೆ ನೀಡಿದರು.
ಈ ಸಂದರ್ಭ ಸಹ ಪ್ರಾಧ್ಯಾಪಕ ಡಾ. ರಾಜಶೇಖರ್ ಹಳೆಮನೆ ಕೃತಿ ಅವಲೋಕನ ಮಾಡಿದರು. ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ಎಂ.ಪಿ.ಶ್ರೀನಾಥ್ ಸಭಾ ಅಧ್ಯಕ್ಷತೆ ವಹಿಸಿದ್ದರು.
ಕಾಸರಗೋಡು ಲೇಖಕರ ಸಂಘದ ಅಧ್ಯಕ್ಷ ಡಾ.ರಮಾನಂದ ಬನಾರಿ, ಕೇರಳ ಗಡಿನಾಡ ಘಟಕದ ಅಧ್ಯಕ್ಷ ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಎಸ್‌ಡಿಎಂ ಕಾನೂನು ಕಾಲೇಜು ಪ್ರಾಧ್ಯಾಪಕ ಕೆ. ಪುಷ್ಪರಾಜ, ಲೇಖಕ ಟಿ. ಎ. ಎನ್. ಖಂಡಿಗೆ ಉಪಸ್ಥಿತರಿದ್ದರು. ಆಕೃತಿ ಆಶಯ ಪಬ್ಲಿಕೇಶನ್ಸ್ ಪ್ರಕಾಶಕ ಕಲ್ಲೂರು ನಾಗೇಶ್ ಸ್ವಾಗತಿಸಿದರು. ಪ್ರಾಧ್ಯಾಪಕ ಡಾ. ಯೋಗೀಶ್ ಕೈರೋಡಿ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net