ಬಿಜೆಪಿ ಆಡಳಿತದ ಪಾಲಿಕೆಗೆ ಸರ್ಕಾರದಿಂದ ತಾರತಮ್ಯ

Pralhad JoShi
Published on

ಹುಬ್ಬಳ್ಳಿ : ಬಿಜೆಪಿ ಆಡಳಿತ ಇರುವ ಹುಬ್ಬಳ್ಳಿ-ಧಾರವಾಡ ಹಾಗೂ ಬೆಳಗಾವಿ ಮಹಾನಗರ ಪಾಲಿಕೆಗೆ ರಾಜ್ಯ ಸರ್ಕಾರ ಸಮರ್ಪಕ ಅನುದಾನ ನೀಡದೇ ತಾರತಮ್ಯ ತೋರುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆರೋಪಿಸಿದರು.

ನಗರದಲ್ಲಿ ಸೋಮವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈಗಾಗಲೇ ಜನರು ಎಲ್ಲ ಚುನಾವಣೆಗಳಲ್ಲಿ ಕಾಂಗ್ರೆಸ್ ಅನ್ನು ಸೋಲಿಸಿ, ಮನೆಗೆ ಕಳುಹಿಸುತ್ತಿದ್ದಾರೆ. ಬಿಜೆಪಿ ಆಡಳಿತ ಇರುವ ಪಾಲಿಕೆ ಬಗ್ಗೆ ತಾರತಮ್ಯ ಮುಂದುವರಿಸಿದರೆ ಸ್ಥೕಯ ಆಡಳಿತದಿಂದಲೂ ಆ ಪಕ್ಷದವರನ್ನು ಮನೆಗೆ ಕಳುಹಿಸುತ್ತಾರೆ ಎಂದರು.

ರಾಜ್ಯ ಸರ್ಕಾರ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ 303 ಕೋಟಿ ರೂ. ಬಾಕಿ ಅನುದಾನ ನೀಡಬೇಕಿದೆ. ಈ ಮೊದಲು ಪಾಲಿಕೆ ನೌಕರರ ಸಂಬಳ ಹಾಗೂ ನಿವೃತ್ತರ ಪಿಂಚಣಿ ಹಣವನ್ನು ರಾಜ್ಯ ಸರ್ಕಾರವೇ ಭರಿಸುತ್ತಿತ್ತು. ಆದರೆ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅನುದಾನ ನೀಡುತ್ತಿಲ್ಲ ಎಂದು ದೂರಿದರು.

ಮಾಸಿಕ ಸಾಮಾನ್ಯ ಸಭೆ ನಡೆಸಲು ನೂತನ ಕಟ್ಟಡ ನಿರ್ವಣಕ್ಕೂ ರಾಜ್ಯ ಸರ್ಕಾರ ಹಣ ನೀಡುತ್ತಿಲ್ಲ. ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ. ಪ್ರತಿ ತಿಂಗಳ ಮೊದಲ ತಾರೀಖಿನಂದು ಮಹಿಳೆಯರ ಖಾತೆಗೆ ಹಣ ಜಮಾ ಮಾಡುವುದಾಗಿ ಘೋಷಿಸಿದ್ದ ಗ್ಯಾರಂಟಿ ಯೋಜನೆ ಸಮರ್ಪಕವಾಗಿ ಜಾರಿಗೊಳ್ಳುತ್ತಿಲ್ಲ. ಸರ್ಕಾರದ ಬಳಿ ಗ್ಯಾರಂಟಿ ಯೋಜನೆಗಳನ್ನು ಮುಂದುವರಿಸಲೂ ಹಣ ಇಲ್ಲದಂತಾಗಿದೆ. ಇನ್ನೂ ಅಭಿವೃದ್ಧಿ ಕಾರ್ಯಗಳಂತೂ ಸಂಪೂರ್ಣ ತಟಸ್ಥಗೊಂಡಿವೆ ಎಂದು ಟೀಕಿಸಿದರು.

ಕೇಂದ್ರ ಸರ್ಕಾರ ಕರ್ನಾಟಕಕ್ಕೆ 2.90 ಲಕ್ಷ ಕೋಟಿ ರೂ. ಅನುದಾನ ನೀಡಿದೆ. ರೈಲ್ವೆ ಬಜೆಟ್​ನಲ್ಲಿಯೂ ಅತಿ ಹೆಚ್ಚು ಕೊಡುಗೆಗಳನ್ನು ಕರ್ನಾಟಕಕ್ಕೆ ಕೊಡಲಾಗಿದೆ. ಮೆಟ್ರೋ, ಹೆದ್ದಾರಿಗಳ ನಿರ್ಮಾಣಕ್ಕೆ ಅತಿ ಹೆಚ್ಚು ಹಣವನ್ನು ಕೇಂದ್ರ ಸರ್ಕಾರ ಕೊಟ್ಟಿದೆ. ಆದರೂ, ಕಾಂಗ್ರೆಸ್ ಮುಖಂಡರು ಕೇಂದ್ರ ಸರ್ಕಾರವನ್ನು ಟೀಕಿಸುವುದನ್ನು ಬಿಡುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯದಲ್ಲಿನ ಭ್ರಷ್ಟಾಚಾರದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗಮನ ಹರಿಸಬೇಕು. ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಜಿಲ್ಲೆಯಲ್ಲಿ ಹದಗೆಟ್ಟಿರುವ ರಸ್ತೆ ಸುಧಾರಣೆ, ಪಾಲಿಕೆಗೆ ಬರಬೇಕಿರುವ ಬಾಕಿ ಅನುದಾನದ ಕೊಡಿಸುವ ಬಗ್ಗೆ ಆದ್ಯತೆ ನೀಡಲಿ. ಅದನ್ನು ಬಿಟ್ಟು ಪ್ರಧಾನಿ ಮೋದಿ ಅವರನ್ನು ಟೀಕಿಸುವುದು, ಟ್ರಂಪ್​ಗೆ ಸಲಹೆ ನೀಡುವ ಬಿಟ್ಟಿ ಕೆಲಸ ಮಾಡಬಾರದು ಎಂದು ಸಲಹೆ ನೀಡಿದರು.

ಬಿಜೆಪಿ ರಾಷ್ಟ್ರೀಯ ಹಾಗೂ ರಾಜ್ಯ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಗಳು ನಡೆಯುತ್ತಿವೆ. ಬಿಜೆಪಿ ಪ್ರಜಾಪ್ರಭುತ್ವದ ಆಧಾರದ ಮೇಲೆ ಅಧ್ಯಕ್ಷರನ್ನು ಚುನಾಯಿಸುತ್ತದೆ. ಕಾಂಗ್ರೆಸ್​ನಂತೆ ಒಂದೇ ಕುಟುಂಬದ ಹಿಡಿತ ಇಲ್ಲಿಲ್ಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net