

ಮೈಸೂರು: ಕೇಂದ್ರ ಸರ್ಕಾರ ಅನುದಾನ, ತೆರಿಗೆ ಹಣ ಹಂಚಿಕೆಯಲ್ಲಿ ಅನ್ಯಾಯ ಮಾಡಿದೆ ಎಂದು ಆರೋಪಿಸಿ ಭಾರತ ಕಮ್ಯೂನಿಸ್ಟ್ ಪಕ್ಷ(ಸಿಪಿಐ) ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ಜಿಎಸ್‌ಟಿ, ತೆರಿಗೆ ಹಣ, ಬರ ಪರಿಹಾರ ಸೇರಿದಂತೆ ವಿವಿಧ ಅನುದಾನ ಹಂಚಿಕೆ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ರಾಜ್ಯಕ್ಕೆ ತಾರತಮ್ಯ ಮಾಡುತ್ತಿದ್ದು, ಇದನ್ನು ಸಂಸದರು ಪ್ರಶ್ನಿಸುತ್ತಿಲ್ಲ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.
ಭಾರತದ ಒಕ್ಕೂಟ ವ್ಯವಸ್ಥೆಯೊಳಗಿರುವ ರಾಜ್ಯಗಳ ಮೂಲಕ ಸಂಗ್ರಹವಾಗುವ ವಸ್ತುಗಳು, ಆಸ್ತಿಗಳು, ವಾಹನಗಳು ಇತ್ಯಾದಿ ಮೇಲಿನ ಕರ, ಸೆಸ್, ಸರ್ಚಾರ್ಜ್ ರೂಪದಲ್ಲಿ ತೆರಿಗೆ ಸಂಗ್ರಹಿಸಲಾಗುತ್ತಿದೆ. ಇದರಲ್ಲಿ ಕೇಂದ್ರ, ರಾಜ್ಯಗಳಿಗೆ ಹಂಚಿಕೆಯಾಗಬೇಕೆಂದು ಹಣಕಾಸು ಆಯೋಗ ರಚಿಸಲಾಗಿದೆ. ಈ ಪ್ರಕಾರ ತೆರಿಗೆ ಹಣವನ್ನು ನ್ಯಾಯ ಸಮ್ಮತವಾಗಿ ರಾಜ್ಯಗಳಿಗೆ ಹಂಚಿಕೆ ಮಾಡಿ ಅಗತ್ಯವಾದ ಅನುದಾನಗಳನ್ನು ಕಾಲ ಕಾಲಕ್ಕೆ ಬಿಡುಗಡೆಗೊಳಿಸಬೇಕಾಗಿರುವುದು ಭಾರತದ ಒಕ್ಕೂಟ ಸರ್ಕಾರದ ಹೊಣೆ. ಆದರೆ, ಕಳೆದ 4 ವರ್ಷಗಳಿಂದ ರಾಜ್ಯಕ್ಕೆ ಲಭಿಸಬೇಕಾದ ತೆರಿಗೆ ಹಂಚಿಕೆಯಲ್ಲಿ ಕೇಂದ್ರ ಸರ್ಕಾರವು ರಾಜ್ಯಕ್ಕೆ ಅನ್ಯಾಯ ಮಾಡಿದೆ ಎಂದು ಆರೋಪಿಸಿದರು.
ರಾಜ್ಯದ ಬರ ಪರಿಹಾರದ ಅನುದಾನವನ್ನು ಸಹ ಬಿಡುಗಡೆಗೊಳಿಸಿಲ್ಲ. ಇದು ರಾಜ್ಯಕ್ಕೆ ಮಾಡಿದ ಮಹಾ ಅನ್ಯಾಯವಾಗಿದೆ. ರಾಜ್ಯದ ಪಾಲಿನ ತೆರಿಗೆ ಹಣ ಸೇರಿದಂತೆ ನೆಲ- ಜಲ-ಭಾಷೆಯಂತಹ ರಾಜ್ಯದ ಅಸ್ಮಿತೆಯ ಪ್ರಶ್ನೆಗಳು ಎದುರಾದಾಗ ರಾಜ್ಯದ ಪರ ಧ್ವನಿಯೆತ್ತದೆ ಮೌನ ತಾಳಿರುವ ಸಂಸದರು ನಿರ್ಲಕ್ಷೃ ತೋರಿದ್ದಾರೆ ಎಂದು ಆರೋಪಿಸಿದರು.
ಸಂಸದರ ಕ್ಷೇತ್ರ ಅಭಿವೃದ್ಧಿಗೆ ಬಿಡುಗಡೆಯಾದ ಅನುದಾನ ಎಷ್ಟು? ಇದರಿಂದ ಎಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ನಡೆದಿವೆ ಎಂಬುದರ ಕುರಿತು ಶ್ವೇತ ಪತ್ರ ಹೊರಡಿಸಬೇಕು ಎಂದು ಆಗ್ರಹಿಸಿದರು.
ಮುಖಂಡರಾದ ಎಚ್.ಬಿ.ರಾಮಕೃಷ್ಣ, ಕೆ.ಎಸ್.ರೇವಣ್ಣ, ಕೆ.ಜಿ.ಸೋಮರಾಜೇ ಅರಸ್, ಎಂ.ಶಿವಣ್ಣ, ಡಿ.ಜಗನ್ನಾಥ್, ಸಿ.ರಾಜು, ಡಿ.ಸುರೇಶ್, ಎನ್.ಕೃಷ್ಣ ಇನ್ನಿತರರು ಇದ್ದರು